More

    ರಾಗಗಳ ಮಳೆಯಲ್ಲಿ ತೊಯ್ದ ಶ್ರೋತೃಗಳು

    ದಾವಣಗೆರೆ : ಒಂದು ವಾರದಿಂದ ನಿರಂತರವಾಗಿ ಸುರಿದ ಮುಂಗಾರು ಮಳೆ ಶನಿವಾರ ಬಿಡುವು ಕೊಟ್ಟಿತ್ತು. ಆದರೆ ನಗರದ ಕುವೆಂಪು ಕನ್ನಡ ಭವನದಲ್ಲಿ ಸಂಗೀತದ ಸಿಂಚನವಾಯಿತು. ಶ್ರೋತೃಗಳು ಬೆಳಗ್ಗೆಯಿಂದ ಸಂಜೆಯ ವರೆಗೆ ರಾಗ ಸುಧೆಯಲ್ಲಿ ಮಿಂದರು.
     ಆರೋಹಿ ಸಂಗೀತ ಕಲಾ ಸಂಸ್ಥೆಯಿಂದ ಗುರು ಪೂರ್ಣಿಮೆ ನಿಮಿತ್ತ ಆಯೋಜಿಸಿದ್ದ ‘ಉದಯ ರಾಗದಿಂದ ಸಂಧ್ಯಾರಾಗ’ ಸಂಗೀತ ಮಹೋತ್ಸವ ಹಾಗೂ ವಾರ್ಷಿಕ ಸಂಭ್ರಮ ಕಾರ್ಯಕ್ರಮ ಹಿಂದುಸ್ತಾನಿ ಸಂಗೀತಾಸಕ್ತರಿಗೆ ರಸದೌತಣ ನೀಡಿತು. ಶಾಸ್ತ್ರೀಯ ಗಾಯನ, ದಾಸರ ಪದಗಳು, ವಚನಗಳ ಹಾಡುಗಾರಿಕೆ ಜತೆಗೆ ವಾದ್ಯ ಸಂಗೀತವೂ ಇತ್ತು. ಸಂಸ್ಥೆಯ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
     ಶೃಂಗಾರ ರಸವನ್ನು ಅಭಿವ್ಯಕ್ತಿಸುವ ಭೀಮ್‌ಪಲಾಸ್ ರಾಗದಲ್ಲಿ ಪ್ರಜ್ಞಾ ಪಿ. ದೊಗ್ಗಳ್ಳಿ ಗಾಯನವನ್ನು ಪ್ರಸ್ತುತಪಡಿಸುವುದರೊಂದಿಗೆ ರಾಗ ಯಾತ್ರೆ ಆರಂಭವಾಯಿತು. ಜತೆಗೆ ಅವರು ಮೀರಾ ಭಜನ್ ಪ್ರಸ್ತುತಪಡಿಸಿದರು.
     ದುರ್ಗಾ ರಾಗದಲ್ಲಿ ಪುರಂದರ ದಾಸರ ರಚನೆಯಾದ ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಹಾಡನ್ನು ಸುಮಂತ್ ಹಾಡಿದರು. ಧನ್ವಿ ಹಿರೇಮಠ್, ಸಿ.ಆರ್. ಭವಿಷ್ಯತ್, ಆರ್.ಎಂ. ಸೌಂದರ್ಯ ಅವರು ಮಾಲಕೌಂಸ್ ರಾಗ ಸುಧೆಯನ್ನು ಉಣಬಡಿಸಿದರು. ಕೆ.ಆರ್. ಪ್ರಹ್ಲಾದ್ ಬೃಂದಾವನಿ ಸಾರಂಗ್ ರಾಗದ ಮಾಧುರ್ಯವನ್ನು ತೆರೆದಿಟ್ಟರು.
     ‘ಮಧುವಂತಿ’ ಪ್ರೀತಿಯ ಅಡಿಪಾಯ ಮತ್ತು ಬಣ್ಣಗಳನ್ನು ಆಧರಿಸಿದ ರಾಗವಾಗಿದೆ. ಸಮಿತಾ ಮುತಾಲಿಕ್ ಅವರ ಗಾಯನದಲ್ಲಿ ಈ ರಾಗದ ವಿಶೇಷತೆಯ ಪರಿಚಯವಾಯಿತು. ‘ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ’ ಎಂಬ ದಾಸರ ಕೃತಿಯನ್ನು ಪ್ರಸ್ತುತಪಡಿಸಿದರು.
     ಹಂಸಧ್ವನಿ, ಭೂಪ್, ಬಿಬಾಸ್, ಭೈರವ್, ಬಾಗೇಶ್ರೀ, ಕಲಾವತಿ, ಸರಸ್ವತಿ, ಕೀರವಾಣಿ ಹೀಗೆ ಹಿಂದುಸ್ತಾನಿ ಪ್ರಕಾರದ ಹಲವು ರಾಗಗಳ ಮಳೆಯಲ್ಲಿ ಸಂಗೀತಾಸಕ್ತರು ತೊಯ್ದು ತೊಪ್ಪೆಯಾದರು. ಶರಣರ ವಚನಗಳು, ದಾಸರ ಪದಗಳು, ಎಚ್.ಎಸ್. ವೆಂಕಟೇಶ ಮೂರ್ತಿ ಇನ್ನಿತರ ಕವಿಗಳ ಭಾವಗೀತೆಗಳು ಮೂಡಿಬಂದವು.
     ಆರೋಹಿ ಸಂಗೀತ ಕಲಾ ಸಂಸ್ಥೆಯ ಅಧ್ಯಕ್ಷ ಆನಂದ ಆರ್. ಪಾಟೀಲ ಮಾರ್ಗದರ್ಶನದಲ್ಲಿ ಅವರ ಶಿಷ್ಯ ಬಳಗದವರು ತಮ್ಮ ಕಲೆಯನ್ನು ಪ್ರದರ್ಶಿಸಿದರು.
     …
     ಗುರುಕುಲ ಪದ್ಧತಿಯಲ್ಲಿ ತಲಸ್ಪರ್ಶಿ ಜ್ಞಾನ
     ಗುರುಕುಲ ಪದ್ಧತಿಯಲ್ಲಿ ತಲಸ್ಪರ್ಶಿ ಜ್ಞಾನ ದೊರೆಯುತ್ತದೆ. ಪುಟ್ಟರಾಜ ಗವಾಯಿಗಳು ಅಂಥ ಪದ್ಧತಿಯ ಶಿಕ್ಷಣವನ್ನು ನಾಡಿಗೆ ಧಾರೆಯೆರೆದರು ಎಂದು ಬಾಪೂಜಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಸಂಪನ್ನ ವಿ. ಮುತಾಲಿಕ್ ಹೇಳಿದರು.
     ಸಂಗೀತ ಮಹೋತ್ಸವ ಉದ್ಘಾಟಿಸಿ ಮಾತನಾಡಿ, ಕೇವಲ ಜ್ಞಾನವಿದ್ದರೆ ಸಾಲದು, ಸಾಧನೆಯೂ ಬೇಕಾಗುತ್ತದೆ. ಸಂಗೀತ ಇನ್ನಿತರ ಗಂಧರ್ವ ವಿದ್ಯೆಗಳನ್ನು ಗುರುವಿನ ಮೂಲಕವೇ ಪಡೆಯಬೇಕು. ಕೃಷ್ಣ ಜಗತ್ತಿಗೇ ಗುರು ಎಂದು ತಿಳಿಸಿದರು.
     ಶೈಕ್ಷಣಿಕ ನಗರಿ ಎನಿಸಿರುವ ದಾವಣಗೆರೆ ಸಂಗೀತದಲ್ಲೂ ಹೆಸರು ಮಾಡಲಿ ಎಂದು ಆಶಯ ವ್ಯಕ್ತಪಡಿಸಿದರು.
     ದಾವಣಗೆರೆ ವೀರೇಶ್ವರ ಪುಣ್ಯಾಶ್ರಮದ ಕಾರ್ಯದರ್ಶಿ ಎ.ಎಚ್. ಶಿವಮೂರ್ತಿ ಸ್ವಾಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಇತರರು ಇದ್ದರು. ಡಾ.ಶೃತಿರಾಜ್ ನಿರೂಪಿಸಿದರು.
     ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಸಿತಾರ್ ವಾದಕ ಧಾರವಾಡದ ಶಫೀಕ್ ಖಾನ್, ಉದ್ಯಮಿ ಅಥಣಿ ವೀರಣ್ಣ, ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ಇದ್ದರು. ಶ್ವೇತಾ ಮೌನೇಶ್ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts