More

    500 ಎಕರೆಯಲ್ಲಿ ದೊಡ್ಡ ಬಡಾವಣೆ ನಿರ್ಮಾಣ

    ದಾವಣಗೆರೆ : ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ 500 ಎಕರೆಯಷ್ಟು ಜಾಗದಲ್ಲಿ ದೊಡ್ಡ ಬಡಾವಣೆ ನಿರ್ಮಿಸಲು ಜಾಗ ಗುರುತಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಮಂಗಳವಾರ ನಡೆದ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿ, 22 ಸಾವಿರಕ್ಕೂ ಹೆಚ್ಚು ಜನ ನಿವೇಶನ ರಹಿತರಿದ್ದಾರೆ. ಹೆಚ್ಚು ಜನರಿಗೆ ಅವಕಾಶ ಒದಗಿಸಲು ದೊಡ್ಡ ಬಡಾವಣೆ ಆಗಬೇಕು. ಸರ್ಕಾರದ ಮಟ್ಟದಲ್ಲಿ ಒಪ್ಪಿಗೆ ಪಡೆಯಲು ತಾವು ಪ್ರಯತ್ನಿಸುವುದಾಗಿ ತಿಳಿಸಿದರು.
     ಕುಂದುವಾಡ ಗ್ರಾಮದ ಬಳಿ ಬಡಾವಣೆ ನಿರ್ಮಾಣಕ್ಕೆ ಮತ್ತೊಮ್ಮೆ ರೈತರ ಸಭೆ ಕರೆಯೋಣ. ಅದಕ್ಕೆ ದಿನಾಂಕವೊಂದನ್ನು ನಿಗದಿಪಡಿಸುವಂತೆ ಹೇಳಿದರು.
     ಜೆ.ಎಚ್. ಪಟೇಲ್ ಬಡಾವಣೆಯನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಅಲ್ಲಿನ ಮೂಲಸೌಕರ್ಯಗಳ ಕುರಿತು ದೂಡಾ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳು ಜಂಟಿ ತಪಾಸಣೆ ನಡೆಸಬೇಕು. ತೃಪ್ತಿದಾಯಕ ಎನಿಸಿದರೆ ಪಾಲಿಕೆಗೆ ವಹಿಸಿಕೊಡಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
     ನಗರ ಅಭಿವೃದ್ಧಿ ಯೋಜನೆ(ಮಾಸ್ಟರ್ ಪ್ಲಾೃನ್)ಯಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಬೇಕು. ರೈತರು, ಬಡವರ ಜಾಗಗಳಲ್ಲಿ ರಸ್ತೆ, ಉದ್ಯಾನವನಗಳನ್ನು ನಿರ್ಮಿಸಲಾಗಿದೆ. ಅದನ್ನೆಲ್ಲ ಸರಿಪಡಿಸಬೇಕು. ಜನರಿಗೆ ಅನುಕೂಲವಾಗುವಂತೆ ಪರಿಷ್ಕೃತ ನಕ್ಷೆಯನ್ನು ಸಿದ್ಧಪಡಿಸಬೇಕು ಎಂದು ಸಚಿವ ಮಲ್ಲಿಕಾರ್ಜುನ್ ತಿಳಿಸಿದರು.
     ಇದಲ್ಲದೆ ಅನೇಕ ಆಡಳಿತಾತ್ಮಕ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚೆಯಾಯಿತು.
     ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ಹರಿಹರ ಶಾಸಕ ಬಿ.ಪಿ. ಹರೀಶ್, ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್, ದೂಡಾ ಆಯುಕ್ತ ಬಸವನಗೌಡ ಕೋಟೂರ, ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಸಭೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts