More

    ಮುಂಗಾರು ಸ್ಪರ್ಶಕ್ಕೆ ಕಾತರ, ಕೃಷಿ ಇಲಾಖೆ ಸಜ್ಜು

     ರಮೇಶ ಜಹಗೀರದಾರ್ ದಾವಣಗೆರೆ
     ಮುಂಗಾರು ಪ್ರವೇಶಕ್ಕೆ ಮುಹೂರ್ತ ಸಮೀಪಿಸುತ್ತಿದ್ದಂತೆ ಕೃಷಿ ಇಲಾಖೆಯು ಸಕಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಅಲ್ಲಲ್ಲಿ ಮಾಗಿ ಉಳುಮೆ ಮಾಡಿಕೊಂಡಿರುವ ರೈತರು ಮುಗಿಲಿನತ್ತ ದೃಷ್ಟಿ ನೆಟ್ಟು ಮಳೆರಾಯನ ಬರುವಿಕೆಗೆ ಕಾದಿದ್ದಾರೆ.
     ಮುಂಗಾರು ಪೂರ್ವದಲ್ಲಿ ಜಿಲ್ಲೆಯ ಅಲ್ಲಲ್ಲಿ ಸುರಿದ ಮಳೆ ನೂರಾರು ಹೆಕ್ಟೇರ್ ಬೆಳೆಯನ್ನು ಆಪೋಶನ ತೆಗೆದುಕೊಂಡಿದೆ. ಅದಾದ ನಂತರ ವರುಣನ ಸುಳಿವೇ ಇಲ್ಲ. ಹಂಗಾಮಿನ ಆರಂಭವನ್ನು ಅನ್ನದಾತರು ಎದುರು ನೋಡುತ್ತಿದ್ದಾರೆ.
     ಮೇ ತಿಂಗಳಲ್ಲಿ ವಾಡಿಕೆಯಂತೆ ಜಿಲ್ಲೆಯಲ್ಲಿ 62.9 ಮಿ.ಮೀ. ಮಳೆಯಾಗಬೇಕಿತ್ತು. ಕೇವಲ 48.3 ಮಿ.ಮೀ. ಸುರಿದಿದ್ದು ಶೇ. 23ರಷ್ಟು ಕೊರತೆಯಾಗಿದೆ. ಮಾರ್ಚ್ 1ರಿಂದ ಮೇ ಅಂತ್ಯದ ವರೆಗೆ 102 ಮಿ.ಮೀ.ಗೆ ಬದಲಾಗಿ 66 ಮಿ.ಮೀ. ಮಾತ್ರ ಮಳೆಯಾಗಿದೆ (ಶೇ. 36ರಷ್ಟು ಕೊರತೆ).
     ಮುಂಗಾರು ಮಳೆ ಆಶಾದಾಯಕವಾಗಿರಲಿದೆ ಎನ್ನುವ ನಿರೀಕ್ಷೆಯೊಂದಿಗೆ ಕೃಷಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಸಭೆಗಳ ಮೇಲೆ ಸಭೆಗಳನ್ನು ನಡೆಸುತ್ತಿದ್ದಾರೆ.
     ಮಳೆ ಬೀಳುತ್ತಿದ್ದಂತೆ ಮುಖ್ಯವಾಗಿ ರೈತರು ಕೇಳುವುದು ಬಿತ್ತನೆ ಬೀಜಗಳನ್ನು. ಆದ್ದರಿಂದ ಅಧಿಕಾರಿಗಳು ಬೇಡಿಕೆ ಆಧರಿಸಿ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿದ್ದಾರೆ.
     ಈ ಹಂಗಾಮಿನಲ್ಲಿ 41,132 ಕ್ವಿಂಟಾಲ್ ಬೀಜಗಳಿಗೆ ಬೇಡಿಕೆಯಿದ್ದು 42,743 ಕ್ವಿಂಟಾಲ್‌ನಷ್ಟು ದಾಸ್ತಾನು ಮಾಡಿಕೊಳ್ಳಲಾಗಿದೆ. ಅದರಲ್ಲೂ ಪ್ರಮುಖ ಬೆಳೆಯಾದ ಮೆಕ್ಕೆಜೋಳ 19,108 ಕ್ವಿಂಟಾಲ್ ಬೀಜಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದ್ದು 19,763 ಕ್ವಿಂಟಾಲ್ ಲಭ್ಯತೆ ಇದೆ.
     ಈ ಸಾಲಿನಲ್ಲಿ ಯೂರಿಯಾ, ಡಿ.ಎ.ಪಿ, ಎನ್.ಪಿ.ಕೆ. ಕಾಂಪ್ಲೆಕ್ಸ್, ಎಂ.ಒ.ಪಿ, ಎಸ್.ಎಸ್.ಪಿ ಸೇರಿ ಒಟ್ಟು 1.54 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆಯಿದೆ. ಜೂನ್ ತಿಂಗಳೊಂದಕ್ಕೆ 29,480 ಮೆಟ್ರಿಕ್ ಟನ್ ಬೇಡಿಕೆಯಿದ್ದು 42,089 ಮೆಟ್ರಿಕ್ ಟನ್ ದಾಸ್ತಾನು ಲಭ್ಯವಿದೆ.
     …
     * ಬೀಜೋಪಚಾರ ಆಂದೋಲನ
     ಹಂಗಾಮು ಆರಂಭದ ಹೊತ್ತಿನಲ್ಲಿ ಬೀಜೋಪಚಾರ ಆಂದೋಲನ ಮಾಡಲು ಇಲಾಖೆ ತಯಾರಿ ನಡೆಸಿದೆ.
     ಅಧಿಕ ಇಳುವರಿ ಪಡೆಯಲು ಉತ್ತಮ ಬೀಜದ ಕೊಡುಗೆ ಅಪಾರವಾಗಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿನಂತೆ ಉತ್ತಮ ಇಳುವರಿ ಪಡೆಯುವಲ್ಲಿ ಆರೋಗ್ಯವಂತ ಸಸಿಗಳ ಪಾತ್ರ ಪ್ರಮುಖವಾಗಿದೆ.
     ಆದ್ದರಿಂದ ಮಣ್ಣಿನಿಂದ ಹಾಗೂ ಬೀಜದಿಂದ ಹರಡುವ ರೋಗಗಳನ್ನು ತಡೆಗಟ್ಟಲು, ಸಾರಜನಕ ಮತ್ತು ರಂಜಕ, ಪೋಷಕಾಂಶಗಳ ಲಭ್ಯತೆಯನ್ನು ಹೆಚ್ಚಿಸಲು ಬೀಜೋಪಚಾರ ಅವಶ್ಯಕವಾಗಿದೆ.
     ಬೀಜ ಉತ್ಪಾದಕ ಕಂಪನಿಗಳು ಸಂಗ್ರಹಣಾ ಹಂತದಲ್ಲಿ ಕೀಟಗಳ ಬಾಧೆ ತಡೆಯಲು ಬೀಜೋಪಚಾರ ಮಾಡುತ್ತವೆ. ಬಿತ್ತನೆಗೆ ಮುಂಚೆ ಬೀಜೋಪಚಾರ ಮಾಡುವುದರಿಂದ ಕೀಟಗಳಿಂದ ಮತ್ತಷ್ಟು ರಕ್ಷಣೆ ಸಿಗುತ್ತದೆ. ಇದರಿಂದ ಸಸಿಗಳ ಬೆಳವಣಿಗೆ ಆರೋಗ್ಯಕರವಾಗಿರುತ್ತದೆ. ಗೊಬ್ಬರ ಹೀರಿಕೊಳ್ಳುವ ಸಾಮರ್ಥ್ಯ ಬರುತ್ತದೆ. ಒಟ್ಟಾರೆ ಇಳುವರಿ ಸುಧಾರಿಸುತ್ತದೆ.
     …
     (ಕೋಟ್)
     ಮುಂಗಾರು ಹಂಗಾಮಿಗೆ ಬೇಕಾದ ಬೀಜ, ಗೊಬ್ಬರ ದಾಸ್ತಾನು ಸೇರಿ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ. ಇದರ ಜತೆಗೆ ಬೀಜೋಪಚಾರಕ್ಕೆ ಒತ್ತು ಕೊಡಲಾಗಿದೆ. ಈ ನಿಟ್ಟಿನಲ್ಲಿ ರೈತರಿಗೆ ಅರಿವು ಮೂಡಿಸಿ, ಜಮೀನುಗಳಲ್ಲಿ ಪ್ರಾತ್ಯಕ್ಷಿಕೆ ನಡೆಸಲಾಗುವುದು.
      ಶ್ರೀನಿವಾಸ ಚಿಂತಾಲ್, ಕೃಷಿ ಇಲಾಖೆ ಜಂಟಿ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts