More

    ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿಲ್ಲ

    ದಾವಣಗೆರೆ: ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯ ಕ್ರಿಯಾಯೋಜನೆಯಲ್ಲಿ ತಾರತಮ್ಯ ಮಾಡಿಲ್ಲ, ಪಾಲಿಕೆಯ ಕಾಂಗ್ರೆಸ್ ಸದಸ್ಯರು ಸಾರ್ವಜನಿಕರಿಗೆ ದಾರಿ ತಪ್ಪಿಸುತ್ತಿದ್ದಾರೆ ಎಂದು ಮೇಯರ್ ಬಿ.ಜಿ. ಅಜಯಕುಮಾರ್ ಹೇಳಿದರು.

    ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಾಲಿಕೆಯ ವಿಪಕ್ಷ ನಾಯಕ ಎ. ನಾಗರಾಜ್ ಮಾಡಿರುವ ಆರೋಪ ಅಸಂಬದ್ಧ ಎಂದು ಪ್ರತಿಕ್ರಿಯಿಸಿದರು.

    ಈ ಯೋಜನೆಯಡಿ 125 ಕೋಟಿ ರೂ. 2019 ರ ಮಾರ್ಚ್‌ನಲ್ಲೇ ಮಂಜೂರಾಗಿತ್ತು. ಆಗ ಪಾಲಿಕೆಯಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್‌ನವರು ಎಲ್ಲ ವಾರ್ಡ್‌ಗಳಿಗೆ ಅನುದಾನ ಬಿಡುಗಡೆ ಮಾಡದೇ ನಿರ್ಲಕ್ಷಿಸಿದರು ಎಂದು ತಿಳಿಸಿದರು.

    ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಸಮಿತಿ ಈ ಕ್ರಿಯಾಯೋಜನೆಗೆ ಅನುಮೋದನೆ ನೀಡುತ್ತದೆ. ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ 600 ಕೋಟಿ ರೂ.ಗಳನ್ನು ದಕ್ಷಿಣ ಕ್ಷೇತ್ರಕ್ಕೆ ನೀಡಿರುವುದರಿಂದ ಉತ್ತರ ಕ್ಷೇತ್ರಕ್ಕೆ ಹೆಚ್ಚು ಅನುದಾನ ಮೀಸಲಿಡಲಾಗಿದೆ ಎಂದು ಹೇಳಿದರು.

    ದಕ್ಷಿಣದಲ್ಲಿ ಬಿಜೆಪಿ ಸದಸ್ಯರ ವಾರ್ಡುಗಳಿಗೆ 9.90 ಕೋಟಿ ರೂ. ನೀಡಿದರೆ, ಕಾಂಗ್ರೆಸ್ ಸದಸ್ಯರ ವಾರ್ಡ್‌ಗಳಿಗೆ 12.50 ಕೋಟಿ ರೂ. ನಿಗದಿ ಮಾಡಲಾಗಿದೆ ಎಂದು ವಾರ್ಡ್‌ವಾರು ಅನುದಾನ ಹಂಚಿಕೆಯ ವಿವರ ನೀಡಿದರು.

    ಶಾಸಕ ಎಸ್.ಎ. ರವೀಂದ್ರನಾಥ್ ಪುತ್ರಿಯ ವಾರ್ಡ್‌ಗೆ ನೀಡಿದ್ದಕ್ಕಿಂತ ಹೆಚ್ಚು ಅನುದಾನವನ್ನು ಕಾಂಗ್ರೆಸ್‌ನ ಜೆ.ಡಿ. ಪ್ರಕಾಶ್ ಅವರ ವಾರ್ಡ್‌ಗೆ (5.50 ಕೋಟಿ ರೂ.) ನೀಡಲಾಗಿದೆ ಎಂದು ತಿಳಿಸಿದರು.

    ಸ್ಮಾರ್ಟ್ ಸಿಟಿ ಯೋಜನೆಯಡಿ ಹೆಚ್ಚು ಅನುದಾನವನ್ನು ದಕ್ಷಿಣ ಭಾಗಕ್ಕೆ ನೀಡಿದಾಗ ಕಾಂಗ್ರೆಸ್‌ನವರು ಏಕೆ ಚಕಾರ ಎತ್ತಲಿಲ್ಲ ಎಂದು ಪ್ರಶ್ನಿಸಿದರು.
    ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಟಿ. ವೀರೇಶ್ ಮಾತನಾಡಿ, ಸರ್ವಾಂಗೀಣ ಅಭಿವೃದ್ಧಿಯ ಉದ್ದೇಶದಿಂದ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದರು. ಕಾಂಗ್ರೆಸ್ ಸದಸ್ಯರು ಅನಗತ್ಯ ಆರೋಪ ಮಾಡುತ್ತಿದ್ದಾರೆ ಎಂದು ಮತ್ತೊಂದು ಸ್ಥಾಯಿ ಸಮಿತಿಯ ಅಧ್ಯಕ್ಷ ಪ್ರಸನ್ನಕುಮಾರ್ ಹೇಳಿದರು.

    ಉಪ ಮೇಯರ್ ಸೌಮ್ಯಾ ನರೇಂದ್ರಕುಮಾರ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಮ್ಮ, ಸದಸ್ಯರಾದ ಕೆ.ಎಂ. ವೀರೇಶ್, ಗೋಣೆಪ್ಪ, ಸೋಗಿ ಶಾಂತಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts