More

    ಅ.ಭಾ. ವೀರಶೈವ ಲಿಂಗಾಯತ ಮಹಾಸಭಾ ಮಹಾ ಅಧಿವೇಶನ

    ದಾವಣಗೆರೆ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನ ನಗರದ ಎಂ.ಬಿ.ಎ ಕಾಲೇಜು ಮೈದಾನದಲ್ಲಿ ಡಿ. 23 ಮತ್ತು 24ರಂದು ನಡೆಯಲಿದೆ.
     ನಗರದಲ್ಲಿ ಶುಕ್ರವಾರ ಪೂರ್ವಭಾವಿ ಸಭೆಯ ನಂತರ ಮಹಾಸಭಾದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
     ಮಹಾ ಅಧಿವೇಶನಕ್ಕೆ ಗುರು-ವಿರಕ್ತರು, ವಿವಿಧ ಕ್ಷೇತ್ರಗಳ ಗಣ್ಯರಿಗೆ ಆಹ್ವಾನ ನೀಡಲಾಗುವುದು. ಜಗತ್ತಿನ ಎಲ್ಲ ವೀರಶೈವ ಲಿಂಗಾಯತರನ್ನು ಒಂದೆಡೆ ಸೇರಿಸುವ ಐತಿಹಾಸಿಕ ಅಧಿವೇಶನ ಇದಾಗಿದೆ ಎಂದು ಹೇಳಿದರು.
     ಈ ಅಧಿವೇಶನ ಕಳೆದ ವರ್ಷವೇ ನಡೆಯಬೇಕಿತ್ತು. ಕೋವಿಡ್, ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಪ್ರತಿ ಬಾರಿ 3 ದಿನಗಳ ಕಾಲ ಅಧಿವೇಶನ ನಡೆಯುತ್ತಿತ್ತು. ಈ ವರ್ಷ ಬರಗಾಲ ಇರುವುದರಿಂದ 2 ದಿನಗಳಿಗೆ ಸೀಮಿತಗೊಳಿಸಲಾಗಿದೆ ಎಂದು ತಿಳಿಸಿದರು.
     ಅಧಿವೇಶನದಲ್ಲಿ ಮಹಿಳೆಯರು, ಯುವಕರು, ರೈತರ ಗೋಷ್ಠಿಗಳನ್ನು ಆಯೋಜಿಸಲಾಗುವುದು. ಪ್ರಸ್ತುತ ಸಮುದಾಯ ಎದುರಿಸುತ್ತಿರುವ ಸವಾಲುಗಳು, ಸಾಗಿ ಬಂದಿರುವ ಹಾದಿಯ ಕುರಿತು ಚರ್ಚೆ ನಡೆಯಲಿದ್ದು ಕೆಲವು ನಿರ್ಣಯಗಳನ್ನು ಅಂಗೀಕರಿಸಿ ಸರ್ಕಾರಕ್ಕೆ ಸಲ್ಲಿಸಿ ಹಕ್ಕೊತ್ತಾಯ ಮಾಡಲಾಗುವುದು. ವೀರಶೈವ ಲಿಂಗಾಯತರನ್ನು ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡುವುದು ಸೇರಿ ಪ್ರಮುಖ ವಿಚಾರಗಳ ಕುರಿತು ಚಿಂತನ ಮಂಥನ ನಡೆಯಲಿದೆ ಎಂದರು.
     ಅಧಿವೇಶನದ ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ರಚಿಸಿ ಸ್ಥಳೀಯ ಮುಖಂಡರಿಗೆ ಜವಾಬ್ದಾರಿ ವಹಿಸಲಾಗುವುದು. ಸ್ಮರಣ ಸಂಚಿಕೆಯನ್ನು ಹೊರ ತರಲಾಗುವುದು ಎಂದು ಮಾಹಿತಿ ನೀಡಿದರು.
     ಇದುವರೆಗೆ ನಡೆದ ಅಧಿವೇಶನಗಳಲ್ಲಿ ವೀರಶೈವ ಲಿಂಗಾಯತ ಭವನಗಳ ನಿರ್ಮಾಣ, ಯುವಜನರಿಗೆ ಐಎಎಸ್, ಐಪಿಎಸ್ ಪರೀಕ್ಷಾ ತರಬೇತಿ, ಕೌಶಲ ತರಬೇತಿ, ಹಾಸ್ಟೆಲ್‌ಗಳ ನಿರ್ಮಾಣ ಸೇರಿ ಹಲವು ನಿರ್ಣಯಗಳನ್ನು ಅಂಗೀಕರಿಸಲಾಗಿತ್ತು, ಅವುಗಳಲ್ಲಿ ಬಹುತೇಕ ಜಾರಿಯಾಗಿವೆ, ಕೆಲವು ವಿಷಯಗಳು ಬಾಕಿ ಇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
     ಮಹಾಸಭಾ ರಾಜ್ಯ ಘಟಕ ಅಧ್ಯಕ್ಷ ಎನ್. ತಿಪ್ಪಣ್ಣ, ರಾಷ್ಟ್ರೀಯ ಉಪಾಧ್ಯಕ್ಷರಾದ ಅಥಣಿ ವೀರಣ್ಣ, ಅಣಬೇರು ರಾಜಣ್ಣ, ಎಸ್.ಎಸ್. ಗಣೇಶ್, ಆಂಧ್ರಪ್ರದೇಶ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ, ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್, ವೀರಣ್ಣ ಮತ್ತಿಕಟ್ಟಿ, ಶಂಕರ್ ಬಿದರಿ, ಸರ್ವಮಂಗಳಮ್ಮ ಸೇರಿ ಸಮಾಜದ ಮುಖಂಡರು, ಕಾರ್ಯಕಾರಿ ಸಮಿತಿ, ಕೇಂದ್ರ ಸಮಿತಿ ಸದಸ್ಯರು, ಮಹಾರಾಷ್ಟ್ರದ ಪ್ರತಿನಿಧಿಗಳು, ಜಿಲ್ಲಾ ಘಟಕಗಳ ಅಧ್ಯಕ್ಷರು, ಮಹಿಳಾ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಯುವ ಮುಖಂಡರು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಸಲಹೆ ನೀಡಿದರು.
     …
     
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts