More

    ದಾವಣಗೆರೆಯಲ್ಲಿ ‘ಬಾಳನೌಕೆಗೆ ಬೆಳಕಿನ ದೀಪ’ ಕೃತಿ ಬಿಡುಗಡೆ

    ದಾವಣಗೆರೆ : ಎಲ್ಲ ಕವಿಗಳು ಜನರ ಕವಿ ಆಗಬೇಕು. ಜನಸಾಮಾನ್ಯರ ಭಾಷೆಯಲ್ಲಿ ಬರೆದ ಕಾವ್ಯಗಳು ಹೆಚ್ಚು ಓದುಗರನ್ನು ತಲುಪಲಿವೆ ಎಂದು ಸಾಹಿತಿ ಡಾ. ಲೋಕೇಶ್ ಅಗಸನಕಟ್ಟೆ ಹೇಳಿದರು.

    ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ, ಉಪನ್ಯಾಸಕ ಜಿ.ಆರ್. ರೇವಣಸಿದ್ದಪ್ಪ ಅವರ ‘ಬಾಳನೌಕೆಗೆ ಬೆಳಕಿನ ದೀಪ’ ಚೊಚ್ಚಲ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.

    ಜನರು ಬಳಸುವ ಅಪರೂಪದ ಪದ ಬಳಸಿ ಅದಕ್ಕೆ ಹೊಳಪು ನೀಡಿದಾಗ ಅನೇಕರನ್ನು ಮುಟ್ಟುತ್ತದೆ. ಜನಮಾನಸವಲ್ಲದ ಪದಗಳನ್ನು ಬಳಸಿದಂಥ ಕೃತಿಗಳು ಜನರಿಗೆ ತಲುಪುವುದಿಲ್ಲ. ನವ್ಯ ಸಾಹಿತ್ಯಕ್ಕೆ ಈ ಸವಾಲಿದೆ. ಈ ವಿಚಾರದಲ್ಲಿ ಕವಿ ಎಚ್ಚರವಾಗಿರಬೇಕು ಎಂದರು. ಕವಿ, ಪ್ರಾಧ್ಯಾಪಕ, ಸ್ವಾಮೀಜಿಗಳು ಅಹಂಕಾರ ತ್ಯಜಿಸಿದರೆ ಸಾಕು, ಸಿರಿಧಾನ್ಯ ಸೇವಿಸುವ ಪ್ರಮೇಯ ಬಾರದು ಎಂದು ಹೇಳಿದರು.

    ಸಂವೇದನಾಶೀಲ ಕವಿಗೆ ಪ್ರತಿ ಕ್ಷಣವೂ ಆತ್ಮ ಕಾಡುತ್ತಿರುತ್ತದೆ. ಕೇವಲ ಐಡೆಂಟಿಟಿ, ಪ್ರಶಸ್ತಿಗಾಗಿ ಬರವಣಿಗೆ ರೂಢಿಸಿಕೊಳ್ಳುವುದು ವಿದ್ರೋಹ ಎಂದ ಅವರು, ಭವಿಷ್ಯದ ನಿರೀಕ್ಷೆಯಲ್ಲಿ ಅಮೃತಕ್ಕೆ ಹಾರಾಡುವ ಗರುಡನ ಹಾಗೆ ಕವಿತೆಗಳು ರಚನೆಯಾಗಬೇಕು ಎಂದು ಆಶಿಸಿದರು.

    ಸಾಹಿತ್ಯ ಪರಿಷತ್ತು, ಅಕಾಡೆಮಿಗಳು ಎಲೆಮರೆಯ ಸಾಹಿತಿಗಳನ್ನು ಗುರ್ತಿಸಿ ಅವರ ಕೃತಿ ಬಿಡುಗಡೆ ಮಾಡಬೇಕಿದೆ. ಜಿಲ್ಲಾ ಕನಡ್ನಸಾಹಿತ್ಯ ಸಮ್ಮೇಳನಗಳಲ್ಲಿ ಸ್ವಂತ ಜಿಲ್ಲೆಯ ಸಾಹಿತಿಗಳಿದ್ದರೂ ಹೊರ ಜಿಲ್ಲೆಯವರನ್ನು ಕರೆಯುವ ಅಗತ್ಯವೇನಿದೆ? ಅವರು ಅದ್ಭುತವಾಗಿ ಮಾತನಾಡುತ್ತಾರೆ ಎಂಬ ಕಲ್ಪನೆ ಇದೆಯೇ? ಎಂದೂ ಕಿಡಿ ಕಾರಿದರು.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಧರಾಮ ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ.ಕೆ.ಎಸ್. ಈಶ್ವರಪ್ಪ, ಕವಿ ಅಥವಾ ಬರಹಗಾರರು ತತ್ವಜ್ಞಾನಿ ಆಗಬೇಕು. ಪ್ರೀತಿಯ ಜ್ಞಾನ ಹೊಂದಿರಬೇಕು. ಹೊಸತನದ ಶೋಧನೆ ಮಾಡಬೇಕು. ಇಲ್ಲವಾದಲ್ಲಿ ಬರಹಕ್ಕೆ ಜಡತ್ವ ಬರಲಿದೆ. ಓದುಗರನ್ನು ತಲುಪದು ಎಂದು ಹೇಳಿದರು.

    ಸಾಹಿತಿ ಡಾ.ಆನಂದ ಋಗ್ವೇದಿ ಮಾತನಾಡಿ, ಜಿ.ಆರ್. ರೇವಣಸಿದ್ದಪ್ಪ ಅವರ ಕವನಗಳಲ್ಲಿ ತಾತ್ವಿಕ ಚಿಂತನೆಗಳಿವೆ. ಮಾನವತ್ವದ ಆಶಯಗಳಿವೆ. ಪುಸ್ತಕದ ಮೂಲಕ ಎಲ್ಲರಿಗೂ ದೀಪ ಹಚ್ಚಿ ಕೊಟ್ಟಿದ್ದಾರೆ ಎಂದರು.

    ಲೇಖಕ ಪಾಪು ಗುರು ಸ್ವಾಗತಿಸಿದರು. ಸಿರಿಗೆರೆ ನಾಗರಾಜ್ ನಿರೂಪಿಸಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts