More

    ಹಡಪದ ಅಪ್ಪಣ್ಣ ಸಮಾಜಕ್ಕೆ 2ಎ ಮೀಸಲಾತಿ ಕೊಡಿ

    ದಾವಣಗೆರೆ : ರಾಜ್ಯ ಸರ್ಕಾರ ಹಡಪದ ಅಪ್ಪಣ್ಣ ಸಮಾಜಕ್ಕೆ 2ಎ ಮೀಸಲಾತಿ ನೀಡುವ ವಿಚಾರದಲ್ಲಿ ಆಗಿರುವ ಕಾನೂನಾತ್ಮಕ ತೊಂದರೆ ಸರಿಪಡಿಸಬೇಕು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಮಹಾಪೀಠದ ಬಸವ ಜಯ ಮೃತ್ಯುಂಜಯ ಶ್ರೀಗಳು ಒತ್ತಾಯಿಸಿದರು.
     ನಗರದ ಜಯದೇವ ವೃತ್ತದ ಶಿವಯೋಗಾಶ್ರಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನಿಜಸುಖಿ ಹಡಪದ ಅಪ್ಪಣ್ಣ ಶರಣರ 889ನೇ ಜಯಂತ್ಯುತ್ಸವ ಹಾಗೂ ಜನ ಜಾಗೃತಿ ಸಮಾವೇಶದಲ್ಲಿ ಮಾತನಾಡಿದರು.
     ರಾಜ್ಯದಲ್ಲಿ ಪ್ರಸ್ತುತ ಲಿಂಗಾಯತದ ಜತೆಗೆ ಉಪನಾಮ ಬರೆಸಿದರೆ ಮೀಸಲಾತಿ ಇಲ್ಲ ಎನ್ನುವಂತಾಗಿದ್ದು, ಸರ್ಕಾರ ಹಡಪದ ಸೇರಿ ಲಿಂಗಾಯತ ಉಪನಾಮಗಳಲ್ಲಿ ಕರೆಯಲ್ಪಡುವ ಯಾವುದೇ ಸಮಾಜಗಳಿಗೆ 2ಎ ಮೀಸಲಾತಿ ನೀಡಲು ತಿದ್ದುಪಡಿ ಮಾಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದರು.
     ಲಿಂಗಾಯತ ಧರ್ಮ ಎಲ್ಲ ಕಾಯಕ ಸಮಾಜಗಳ ಫೆಡರೇಷನ್. ರಾಜಕಾರಣಿಗಳು ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ಸಮುದಾಯಗಳನ್ನು ಲಿಂಗಾಯತದಿಂದ ಬೇರ್ಪಡಿಸುವ ಕೆಲಸ ಮಾಡಿದ್ದಾರೆ. ಸುಮಾರು 99 ಕಾಯಕ ಸಮುದಾಯಗಳು ಶಿಕ್ಷಣ ಹಾಗೂ ಉದ್ಯೋಗದ ಕಾರಣಕ್ಕೆ ಲಿಂಗಾಯತವನ್ನು ಬಿಟ್ಟು ಅನಿವಾರ್ಯವಾಗಿ ಹೊರಹೋಗಿವೆ ಎಂದು ತಿಳಿಸಿದರು.
     ರಾಜ್ಯ ಸರ್ಕಾರ ಈಗಾಗಲೇ ಕುಂಚಿಟಿಗ ಸಮಾಜವನ್ನು ಹಿಂದುಳಿದ ವರ್ಗಕ್ಕೆ ಹಾಗೂ ಹಾಲುಮತ ಸಮಾಜವನ್ನು ಎಸ್‌ಟಿಗೆ ಸೇರ್ಪಡೆಗೊಳಿಸಲು ಶಿಫಾರಸು ಮಾಡಿದ್ದು ಸರ್ಕಾರಕ್ಕೆ ಸುಮಾರು 34 ಶಾಸಕರನ್ನು ಕೊಟ್ಟಿರುವ ಲಿಂಗಾಯತ ಸಮಾಜವನ್ನು ಸಹ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಇದರಿಂದ ಸಮಾಜದ ಜನರು ಉನ್ನತ ಹುದ್ದೆ ಪಡೆಯಲು ಅನುಕೂಲ ಆಗಲಿದೆ ಎಂದು ಹೇಳಿದರು.
     ತಂಗಡಗಿ ಕ್ಷೇತ್ರದ ಶ್ರೀ ಅನ್ನದಾನಿ ಭಾರತಿ ಬಸವಪ್ರಿಯ ಹಡಪದ ಅಪ್ಪಣ್ಣ ಸ್ವಾಮೀಜಿ ಮಾತನಾಡಿ, ಹಡಪದ ಅಪ್ಪಣ್ಣ ಸಮಾಜವು ತಮ್ಮ ಮಕ್ಕಳ ಉಜ್ವಲ ಭವಿಷ್ಯ ಹಾಗೂ ಬದುಕಿಗೆ ನೆಲೆ ಒದಗಿಸುವ ಉದ್ದೇಶದಿಂದ ಸಂಘಟಿತರಾಗುವ ಮೂಲಕ ಮೀಸಲಾತಿ ಹೋರಾಟಕ್ಕೆ ದುಮುಕಬೇಕು ಎಂದು ತಿಳಿಸಿದರು.
     ರಾಜ್ಯದಲ್ಲಿ ಈಗಾಗಲೇ ಎಲ್ಲ ಸಮಾಜಗಳು ಮೀಸಲಾತಿಗಾಗಿ ವಿಧಾನಸೌಧದ ಮೆಟ್ಟಿಲೇರಿದ್ದರೆ ಹಡಪದ ಸಮಾಜ ಜನಪ್ರತಿನಿಧಿಗಳ ಭೇಟಿಗೆ ಇನ್ನೂ ಅನುಮತಿ ಪಡೆಯುವ ಪರಿಸ್ಥಿತಿಯಿದೆ. ಸಮಾಜವು ಇದೇರೀತಿ ನಿರ್ಲಕ್ಷೃ ಮುಂದುವರಿಸಿದರೆ ತನ್ನ ಅಸ್ತಿತ್ವವನ್ನೆ ಕಳೆದುಕೊಳ್ಳುವ ಸ್ಥಿತಿ ಎದುರಾಗಲಿದೆ ಎಂದು ಎಚ್ಚರಿಸಿದರು.
     ಲಿಂಗಾಯತ ಕಾರಣಕ್ಕಾಗಿ ಹಡಪದ ಸಮಾಜ 2ಎ ಮೀಸಲಾತಿ ಸೌಲಭ್ಯದಿಂದ ವಂಚಿತವಾಗಿದೆ. ಹಾಗಾದರೆ ಇಲ್ಲಿದ್ದೂ ಪ್ರಯೋಜನವೇನು ಎಂದು ಈ ಹಿಂದೆ ಬೌದ್ಧ ಧರ್ಮ ಸ್ವೀಕರಿಸುವ ಮಾತುಗಳನ್ನೂ ಆಡಿದ್ದೇನೆ ಎಂದ ಅವರು, ಮೀಸಲಾತಿಗೆ ಯಾರೂ ಸ್ಪಂದಿಸುತ್ತಿಲ್ಲ ಎಂದು ಒಂದು ಹಂತದಲ್ಲಿ ಶ್ರೀಗಳು ಆವೇಶಕ್ಕೆ ಒಳಗಾದರು.
     ಚಿತ್ರದುರ್ಗ ಮುರುಘಾಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಸರ್ಕಾರದಿಂದ ಮೀಸಲಾತಿ ಪಡೆಯುವ ನಿಟ್ಟಿನಲ್ಲಿ ಜಯ ಮೃತ್ಯುಂಜಯ ಶ್ರೀಗಳು ನಡೆಸುತ್ತಿರುವ ಶಾಂತಿಯುತ ಹೋರಾಟ ಎಲ್ಲರಿಗೂ ಮಾದರಿ ಆಗಬೇಕು. ಮೀಸಲಾತಿಗಾಗಿ ಪಾದಯಾತ್ರೆ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆದರೆ ಖಂಡಿತಾ ನ್ಯಾಯ ಸಿಗಲಿದೆ ಎಂದರು.
     ಗಾಣಿಗೇರ ಗುರುಪೀಠದ ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿ, ಎಲ್.ಜಿ. ಹಾವನೂರು ವರದಿ ಪ್ರಕಾರ ಹಡಪದ ಸಮಾಜ ಹಿಂದುಳಿದ ವರ್ಗದ ಪಟ್ಟಿಯಲ್ಲಿ ಸೇರಿದ್ದರೂ ಲಿಂಗಾಯತ ಕಾರಣಕ್ಕಾಗಿ 2ಎ ಮೀಸಲಾತಿ ಸಿಗುತ್ತಿಲ್ಲ. ಕಾಯಕ ಸಮುದಾಯಗಳಿಗೆ 2ಎ ಮೀಸಲಾತಿ ನೀಡಲು ಸರ್ಕಾರ ಸಮೀಕ್ಷೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
     ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಆರ್ಥಿಕವಾಗಿ ಹಿಂದುಳಿದಿರುವ ಹಡಪದ ಅಪ್ಪಣ್ಣ ಸಮಾಜವು ಕಾನೂನು ತೊಡಕಿನಿಂದ ಮೀಸಲಾತಿ ಸೌಲಭ್ಯದಿಂದ ವಂಚಿತವಾಗಿದ್ದು ಇದರಿಂದ ಧೃತಿಗೆಡುವ ಅಗತ್ಯವಿಲ್ಲ. ಮಕ್ಕಳ ಶಿಕ್ಷಣಕ್ಕೆ  ಮೀಸಲಾತಿ ಅಗತ್ಯವಾಗಿದ್ದು ಇದಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು. ಸಮಾಜದಲ್ಲಿ ಅಸಮಾನತೆ ಇರುವವರೆಗೂ ಮೀಸಲಾತಿ ಬೇಕು ಎಂದು ತಿಳಿಸಿದರು.
     ಹೊಸದುರ್ಗದ ಬಸವ ಶಾಂತವೀರ ಶ್ರೀ , ಚಿತ್ರದುರ್ಗದ ಶ್ರೀ ಬಸವ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸಾನ್ನಿದ್ಯ ವಹಿಸಿದ್ದರು. ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾಧ್ಯಕ್ಷ ಎಚ್. ಶಶಿಧರ ಬಸಾಪುರ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಬಾಮ ಬಸವರಾಜಯ್ಯ,  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಸಮಾಜದ ಮುಖಂಡರಾದ ನಾಗರಾಜ್ ಸರ್ಜಾಪುರ್, ಶಿವಯೋಗಿ ಕಲಿವೀರಪ್ಪ ಹೊಸರಿತ್ತಿ, ಚೇತನಾ ಶಿವಕುಮಾರ್ ಇತರರು ಇದ್ದರು.
     ಕೋಟ್..
     ಸರ್ಕಾರ ಒಂದು ಕಡೆ ಗ್ಯಾರಂಟಿ ಯೋಜನೆ ಕೊಟ್ಟು ಮತ್ತೊಂದೆಡೆ ಬಾರ್‌ಗಳನ್ನು ತೆರೆಯುತ್ತಿದೆ. ಗ್ಯಾರಂಟಿಗಳನ್ನು ಕಡಿಮೆ ಮಾಡಿದರೂ ಪರವಾಗಿಲ್ಲ. ಬಾರ್‌ಗಳನ್ನು ತೆರೆಯಲು ಅನುಮತಿ ನೀಡುವುದು ಸರಿಯಲ್ಲ. ಗ್ಯಾರಂಟಿಯಿಂದ ಬಂದ ಹಣ ಬಾರ್ ಬಾಗಿಲಿಗೆ ಹೋಗವಂತಾಗಬಾರದು.
      ತೇಜಸ್ವಿ ಪಟೇಲ್, ರೈತ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts