More

    ಆರೋಗ್ಯ ಕೇಂದ್ರಗಳ ಪರಿಕರ ಖರೀದಿಗೆ ಒಡಂಬಡಿಕೆ

    ದಾವಣಗೆರೆ : ಪವರ್‌ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಜಿಲ್ಲೆಯ 10 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವಿವಿಧ ನಮೂನೆಯ 102 ಪರಿಕರ ಖರೀದಿಸಲು 6.83 ಕೋಟಿ ರೂ.ಗಳ ಜಂಟಿ ಒಡಂಬಡಿಕೆಗೆ ಸಹಿ ಹಾಕಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
     ಪಿಜಿಸಿಎಲ್ ಪವರ್‌ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಸಿ.ಎಸ್.ಆರ್. ನಿಧಿಯ ನಿರ್ದೇಶಕ ಕೆ.ಎನ್. ಓಂಕಾರಪ್ಪ, ಪವರ್‌ಗ್ರಿಡ್ ಜನರಲ್ ಮ್ಯಾನೇಜರ್ ಹರೀಶ್ ನಾಯರ್ ಅವರೊಂದಿಗೆ ಶುಕ್ರವಾರ ಜಂಟಿ ಒಡಂಬಡಿಕೆಗೆ ಸಹಿ ಹಾಕಿದ ನಂತರ ಮಾತನಾಡಿದರು.
     ದಾವಣಗೆರೆ ತಾಲೂಕಿನ ಆಲುವರ್ತಿ, ಆನಗೋಡು, ಅಣಜಿ, ಐಗೂರು, ಕೊಡಗನೂರು, ಮಾಯಕೊಂಡ, ರಾಮಗೊಂಡನಹಳ್ಳಿ, ಚನ್ನಗಿರಿ ತಾಲೂಕಿನ ತ್ಯಾವಣಿಗಿ, ಬಸವಾಪಟ್ಟಣ, ದಾಗಿನಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸರ್ಜಿಕಲ್ ಪರಿಕರ ಸೇರಿ ಆಕ್ಸಿಜನ್ ಸಿಲಿಂಡರ್, ಪೋಟೋ ಥೆರಪಿ, ಅಲ್ಟ್ರಾಸೌಂಡ್ ಚಿಕಿತ್ಸೆಗೆ ಅಗತ್ಯವಿರುವ 102 ವಿವಿಧ ಬಗೆಯ ಪರಿಕರ ಒದಗಿಸಲಾಗುತ್ತದೆ ಎಂದರು.
     ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಪೌಷ್ಟಿಕತೆ, ಆರೋಗ್ಯ, ಶುದ್ದ ಕುಡಿಯುವ ನೀರು ಪೂರೈಕೆ ಸೇರಿ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡುವ ಮೂಲಕ ಯಾರು ಸಹ ಚಿಕಿತ್ಸೆ ಲಭಿಸಲಿಲ್ಲ ಎಂಬ ಕಾರಣಕ್ಕೆ ಮರಣ ಹೊಂದಬಾರದೆಂಬ ಗುರಿಯೊಂದಿಗೆ ಸಿಎಸ್‌ಆರ್ ನಿಧಿ ಸದ್ಬಳಕೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
     ಜಿಲ್ಲಾ ಆಸ್ಪತ್ರೆಗೆ ಬೇಕಾದ ಎಲ್ಲ ಸಲಕರಣೆ ಒದಗಿಸಲು ಕ್ರಮ ಕೈಗೊಳ್ಳಲಾಗಿದ್ದು ಇಲ್ಲಿ ಚಿಕಿತ್ಸೆಗೆ ಬಂದವರಿಗೆ ಯಾವುದೇ ಹಾನಿಯಾಗದಂತೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲು ಜಿಲ್ಲಾ ಸರ್ಜನ್‌ಗೆ ಸೂಚನೆ ನೀಡಲಾಗಿದೆ ಎಂದರು.
     ಪವರ್‌ಗ್ರಿಡ್ ಸಿಎಸ್‌ಆರ್ ನಿರ್ದೇಶಕ ಕೆ.ಎನ್. ಓಂಕಾರಪ್ಪ ಮಾತನಾಡಿ, ಈ ಹಿಂದೆ ರಸ್ತೆ ಅಭಿವೃದ್ದಿಗೆ 2.85 ಕೋಟಿ ರೂ. ನೀಡಲಾಗಿದ್ದು, ಜಿಲ್ಲೆಗೆ ಈಗಾಗಲೇ 10.5 ಕೋಟಿ ರೂ. ಅನುದಾನ ಬಂದಿದೆ. ಇನ್ನೂ 20ರಿಂದ 30 ಕೋಟಿ ರೂ. ಅನುದಾನ ಬರಬೇಕಾಗಿದ್ದು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
     ದಾವಣಗೆರೆ, ಚಿತ್ರದುರ್ಗ, ಹಾವೇರಿ, ಕಲ್ಬುರ್ಗಿ ಜಿಲ್ಲೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು ಒಟ್ಟು ರಾಜ್ಯಕ್ಕೆ 100 ಕೋಟಿ ರೂ. ಅನುದಾನ ತರಬೇಕೆಂಬ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
     ಪವರ್‌ಗ್ರಿಡ್ ಜನರಲ್ ಮ್ಯಾನೇಜರ್ ಹರೀಶ್ ನಾಯರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಷಣ್ಮುಖಪ್ಪ, ಜಿಲ್ಲಾ ಸರ್ಜನ್ ಡಾ.ನಾಗೇಂದ್ರಪ್ಪ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಮಹಂತೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts