More

    ಶಿಷ್ಯವೇತನ ಪಾವತಿಸಲು ಹಗ್ಗಜಗ್ಗಾಟ

    ರಮೇಶ ಜಹಗೀರದಾರ್ ದಾವಣಗೆರೆ
    ನಗರದ ಜೆಜೆಎಂ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳ ಶಿಷ್ಯವೇತನ ಪಾವತಿ ವಿಚಾರವು ರಾಜ್ಯ ಸರ್ಕಾರ ಮತ್ತು ಆಡಳಿತ ಮಂಡಳಿಯ ನಡುವೆ ಹಗ್ಗ ಜಗ್ಗಾಟಕ್ಕೆ ಕಾರಣವಾಗಿದೆ.

    ‘ನೀ ಕೊಡೆ, ನಾ ಬಿಡೆ’ ಎನ್ನುವಂತೆ 16 ತಿಂಗಳಿಂದ ತಮಗೆ ಬರಬೇಕಿರುವ ಶಿಷ್ಯವೇತನಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು 11 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದು ಈ ಕರೊನಾ ವಾರಿಯರ್‌ಗಳ ಸ್ಥಿತಿ ಅತಂತ್ರವಾಗಿದೆ.

    ಜೆಜೆಎಂ ಕಾಲೇಜಿನ 133 ಸ್ನಾತಕೋತ್ತರ ಮತ್ತು 97 ಇಂಟರ್ನ್‌ಶಿಪ್ ವಿದ್ಯಾರ್ಥಿಗಳು ಸರ್ಕಾರಿ ಕೋಟಾದಲ್ಲಿ ಆಯ್ಕೆಯಾದವರು. ವ್ಯಾಸಂಗದ ಭಾಗವಾಗಿ ಇಲ್ಲಿನ ಚಿಗಟೇರಿ ಜಿಲ್ಲಾಸ್ಪತ್ರೆ ಹಾಗೂ ಮಹಿಳಾ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

    ಈ ಕಾರಣಕ್ಕಾಗಿ ಇವರ ಶಿಷ್ಯವೇತನವನ್ನು ಸರ್ಕಾರವೇ ಮೊದಲಿನಿಂದಲೂ ಪಾವತಿಸುತ್ತಾ ಬಂದಿದೆ. ಈಗ ಆಡಿಟ್ ಆಕ್ಷೇಪಣೆ ನೆಪದಲ್ಲಿ ಸರ್ಕಾರ ಕೈಚೆಲ್ಲಿದೆ.

    2016 ರಲ್ಲೇ ಒಮ್ಮೆ ಆಡಿಟ್ ಆಕ್ಷೇಪಣೆಯಾಗಿತ್ತು. ಅದಾದ ನಂತರವೂ 2017ರವರೆಗೆ ಶಿಷ್ಯವೇತನ ನೀಡಲಾಯಿತು. 2018 ರಲ್ಲಿ ಸಮಸ್ಯೆ ಶುರುವಾಗಿ, ಸ್ಟೈಪೆಂಡ್ ಅನ್ನು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಮತ್ತು ಆರೋಗ್ಯ ಇಲಾಖೆ ಇವೆರಡರಲ್ಲಿ ಯಾರು ಪಾವತಿಸಬೇಕು ಎನ್ನುವ ಗೊಂದಲ ಉಂಟಾಯಿತು.

    ಆ ವರ್ಷದ ಅಕ್ಟೋಬರ್‌ನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ನಂತರ, ಚಿಗಟೇರಿ ಜಿಲ್ಲಾಸ್ಪತ್ರೆಯ ಎ.ಆರ್.ಎಸ್. ಖಾತೆಯಿಂದ ಪಡೆಯುವಂತೆ ಸೂಚಿಸಿ ಆದೇಶ ಹೊರಡಿಸಲಾಯಿತು. ಶಿಷ್ಯವೇತನ ಪಾವತಿಸುವಷ್ಟು ಆದಾಯ ನಮಗೆ ಬರುವುದಿಲ್ಲ ಎಂದು ಚಿಗಟೇರಿ ಜಿಲ್ಲಾಸ್ಪತ್ರೆಯವರು ಸರ್ಕಾರಕ್ಕೆ ತಿಳಿಸಿದರು.

    ಹಾಗೂ ಹೀಗೂ ಮಾಡಿ 2019ರ ಫೆಬ್ರವರಿವರೆಗೆ ಶಿಷ್ಯವೇತನ ನೀಡಿದ ಸರ್ಕಾರ, ಅಲ್ಲಿಂದ ಇದುವರೆಗೆ ನಯಾಪೈಸೆ ಬಿಡುಗಡೆ ಮಾಡಿಲ್ಲ ಎನ್ನುತ್ತಾರೆ ಹೋರಾಟನಿರತ ವಿದ್ಯಾರ್ಥಿಗಳು.

    ಸ್ನಾತಕೋತ್ತರ ವ್ಯಾಸಂಗದ ಅವಧಿಯಲ್ಲಿ ಪ್ರತಿ ವಿದ್ಯಾರ್ಥಿಗೆ 3 ವರ್ಷಕ್ಕೆ ಸುಮಾರು 12.6 ಲಕ್ಷ ರೂ, ಇಂಟರ್ನ್‌ಶಿಪ್ ಮಾಡುವ ಪ್ರತಿ ವಿದ್ಯಾರ್ಥಿಗೆ 2.40 ಲಕ್ಷ ರೂ. ಶಿಷ್ಯವೇತನವನ್ನು ಪಾವತಿಸಬೆಕಾಗುತ್ತದೆ.

    ಪ್ರತಿಭಟನಾ ನಿರತರಲ್ಲಿ 3 ವರ್ಷದ ಅವಧಿ ಪೂರೈಸುತ್ತಿರುವವರು, 1 ಮತ್ತು 2ನೇ ವರ್ಷದಲ್ಲಿ ಓದುತ್ತಿರುವವರು, ಜತೆಗೆ ಇಂಟರ್ನ್‌ಶಿಪ್ ಮಾಡುತ್ತಿರುವವರೂ ಇದ್ದಾರೆ. ಎಲ್ಲವೂ ಸೇರಿದರೆ 16 ತಿಂಗಳ ಬಾಕಿ 8.50 ಕೋಟಿ ರೂ. ಆಗುತ್ತದೆ ಎನ್ನಲಾಗಿದೆ.

    ಈ ವಿಚಾರವಾಗಿ ಈಗಾಗಲೇ ಸರ್ಕಾರದ ಮಟ್ಟದಲ್ಲಿ 3 ಸಭೆಗಳಾಗಿದ್ದರೂ ಇತ್ಯರ್ಥವಾಗಿಲ್ಲ. ಆಡಳಿತ ಮಂಡಳಿಯವರು ನೀಡಬೇಕು ಎಂಬುದು ಸರ್ಕಾರದ ವಾದ. ಯಾವ ಕಾರಣಕ್ಕೂ ನಾವು ಕೊಡುವುದಿಲ್ಲ, ಸರ್ಕಾರವೇ ಪಾವತಿಸಬೇಕು ಎಂಬುದು ಆಡಳಿತ ಮಂಡಳಿಯ ನಿಲುವಾಗಿದೆ.

    ವಿದ್ಯಾರ್ಥಿಗಳ ಕ್ಲಿನಿಕಲ್ ಶುಲ್ಕವಾಗಿ 2 ಕೋಟಿ ರೂ, ನಮ್ಮ ಕಾಲೇಜಿನ 80 ವೈದ್ಯರು ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಅವರ ವೇತನ ವರ್ಷಕ್ಕೆ 12 ಕೋಟಿ ರೂ. ಆಗುತ್ತದೆ. ಹಾಗಾಗಿ ಶಿಷ್ಯವೇತನ ಪಾವತಿಸಲು ಆಗುವುದಿಲ್ಲ.
    ಡಾ. ಶಾಮನೂರು ಶಿವಶಂಕರಪ್ಪ, ಶಾಸಕ, ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ.

    ನಾವೆಲ್ಲ ಮಧ್ಯಮ, ಕೆಳಮಧ್ಯಮ ವರ್ಗದವರು. ನನಗೆ ಮದುವೆಯಾಗಿದೆ. ಶಿಷ್ಯವೇತನವನ್ನೇ ನಂಬಿದ್ದೇವೆ. ಸರ್ಕಾರ ನಮ್ಮ ನೆರವಿಗೆ ಬರಬೇಕು.
    ಡಾ. ಹರೀಶ್, ಜೆಜೆಎಂ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts