More

    ರಾಜ್ಯದಲ್ಲಿ ಹಿಂದು ವಿರೋಧಿ ಸರ್ಕಾರ

    ದಾವಣಗೆರೆ : ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದು ವಿರೋಧಿ ಸರ್ಕಾರ. ಹಿಂದುಗಳ ಭಾವನೆಗೆ ವಿರುದ್ಧವಾಗಿ ಆಡಳಿತ ನಡೆಸುತ್ತಿದ್ದು, ಇದರ ವಿರುದ್ಧ ಜನಾಂದೋಲನ ರೂಪಿಸಲಾಗುವುದು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಎಚ್ಚರಿಸಿದರು.
     ಅಯೋಧ್ಯೆಯಲ್ಲಿ ಭವ್ಯ ಶ್ರೀ ರಾಮಮಂದಿರ ಲೋಕಾರ್ಪಣೆ ಆಗುತ್ತಿರುವ ಪೂರ್ವದಲ್ಲಿ ಒಂದು ಕಡೆ ಸರ್ಕಾರ ಕರಸೇವಕನನ್ನು ಬಂಧಿಸಿದ್ದರೆ, ಕೆಲವು ಮುಖಂಡರು ಪ್ರಚೋದನಾ ಹೇಳಿಕೆ ನೀಡುವ ಮೂಲಕ ಜನರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಖಂಡಿಸಿದರು.
     ಸುಮಾರು 32 ವರ್ಷದ ಹಿಂದೆ ನಡೆದ ಘಟನೆಗೆ ಸಂಬಂಧಿಸಿದಂತೆ ಸರ್ಕಾರ ಒಬ್ಬ ಬಡ ಆಟೋ ಚಾಲಕ ಶ್ರೀಕಾಂತ್ ಪೂಜಾರಿಯನ್ನು ಬಂಧಿಸಿದೆ. ಇದು ಪ್ರತಿಯೊಬ್ಬ ಭಾರತೀಯರ ಸ್ವಾಭಿಮಾನದ ಪ್ರಶ್ನೆಯಾಗಿದ್ದು, ಪ್ರತಿಯೊಬ್ಬ ಕರಸೇವಕರು ಬೀದಿಗೆ ಇಳಿಯುತ್ತೇವೆ. ಸರ್ಕಾರಕ್ಕೆ ತಾಕತ್ತಿದ್ದರೆ ಎಲ್ಲರನ್ನೂ ಬಂಧಿಸಲಿ ಎಂದು ಸವಾಲು ಹಾಕಿದರು.
     ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ಇಲ್ಲ. ಮೂರು ರಾಜ್ಯಗಳಲ್ಲಿ ಹೀನಾಯವಾಗಿ ಸೋತಿರುವ ಕಾಂಗ್ರೆಸ್ ಪಕ್ಷಕ್ಕೆ ಹಿಂದುಗಳು ಮತ ಹಾಕುವುದಿಲ್ಲ ಎಂಬುದು ಗೊತ್ತಿದೆ. ಹಾಗಾಗಿ, ಅಲ್ಪಸಂಖ್ಯಾತರನ್ನು ಓಲೈಸಲು ಹೊರಟಿದ್ದು, 10 ಸಾವಿರ ಕೋಟಿ ಹಣ ನೀಡುವುದಾಗಿ ಹೇಳಿದೆ. ದೇವಸ್ಥಾನಗಳ ಹಣ ವಕ್ಫ್ ಬೋರ್ಡ್‌ಗಳಿಗೆ ವರ್ಗಾಯಿಸುತ್ತಿದ್ದಾರೆ ಎಂದು ದೂರಿದರು.
     ಸುಪ್ರೀಂಕೋರ್ಟ್‌ನಲ್ಲಿ ಶ್ರೀರಾಮ ಮಂದಿರ ಟ್ರಸ್ಟ್ ಪರವಾಗಿ ತೀರ್ಪು ಬಂದ ನಂತರ ಅದನ್ನು ಗೌರವಿಸಿ ಭವ್ಯ ಮಂದಿರ ನಿರ್ಮಿಸಲಾಗಿದೆ. ಆದರೆ, ಮಂದಿರ ಜಾಗ ವಿವಾದಿತವೆಂದು ಹೇಳುವ ಸಿದ್ದರಾಮಯ್ಯ ಸುಪ್ರೀಂಕೋರ್ಟ್‌ಗಿಂತ ದೊಡ್ಡವರಾ, ಈ ದೇಶದ ಕಾನೂನು ಗೌರವಿಸದಿದ್ದರೆ ಹೇಗೆ? ಎಂದು ಪ್ರಶ್ನಿಸಿದರು.
     ಸಿಎಂ ಯಾರ ಪರ?: ಮುಖ್ಯಮಂತ್ರಿ ಸಿದ್ದರಾಮಯ್ಯ ದೇಶಭಕ್ತ ಕರಸೇವಕರ ಪರವೋ ಅಥವಾ ಭಯೋತ್ಪಾದಕರ ಪರವಾಗಿದ್ದಾರೋ ಎಂಬುದನ್ನು ದೇಶದ ಜನತೆಗೆ ಸ್ಪಷ್ಟಪಡಿಸಬೇಕು. ಸಿದ್ದರಾಮಯ್ಯ ಅವರು ಕರಸೇವಕರು ಹಾಗೂ ರಾಮಭಕ್ತರು ಕ್ರಿಮಿನಲ್ಸ್ ಎಂದು ಹೇಳುತ್ತಾರೆ. ಹಾಗಾದರೆ ಬಾಂಬ್ ಬ್ಲಾಸ್ಟ್, ಕುಕ್ಕರ್ ಬ್ಲಾಸ್ಟ್ ಮಾಡಿದವರು, ದೇಶ ವಿರೋಧಿ ಚಟುವಟಿಕೆ ನಡೆಸುವವರು ಯಾರು ಎಂದು ಪ್ರಶ್ನಿಸಿದರು.
     ರಾಜ್ಯದಲ್ಲಿ ಸರ್ಕಾರ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದು ಸಿರಿಯಾ ಕಾನೂನು ತರಲು ಹೊರಟಿದೆ. ಇದು ನಡೆಯುವುದಿಲ್ಲ. ಇದೇ ರೀತಿ ಆಡಳಿತ ನಡೆಸಿದರೆ ಸರ್ಕಾರ ಬಹಳ ದಿನ ಉಳಿಯುವುದಿಲ್ಲ. ಹಿಂದುಗಳು ದಂಗೆ ಏಳುತ್ತಾರೆ. ಲೋಕಸಭಾ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಸರ್ಕಾರ ಆಂತರಿಕ ಕಲಹದಿಂದ ಪತನಗೊಳ್ಳಲಿದೆ ಎಂದರು.
     ಕಾಂಗ್ರೆಸ್‌ನಲ್ಲಿ ಒಳಸಂಚು: ರಾಜ್ಯದಲ್ಲಿ ಕಾಂಗ್ರೆಸ್ ಒಡೆದ ಮನೆಯಾಗಿದ್ದು, ಪಕ್ಷದಲ್ಲಿ ಗುಂಪುಗಾರಿಕೆ ಶುರುವಾಗಿದೆ. ಸಚಿವ ಸ್ಥಾನ ಸಿಗದೆ ಬಿ.ಕೆ. ಹರಿಪ್ರಸಾದ್ ಹತಾಶರಾಗಿದ್ದು, ಅವರ ಗೋದ್ರಾ ಕುರಿತ ಹೇಳಿಕೆ ನೋಡಿದರೆ ಸಿದ್ದರಾಮಯ್ಯರನ್ನು ಅಧಿಕಾರದಿಂದ ಇಳಿಸಲು ಒಳಸಂಚು ನಡೆಸಿರಬಹುದು. ಇನ್ನು ಸಿದ್ದರಾಮಯ್ಯಗೆ ಲೋಕಸಭಾ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್ ಅಧ್ಯಕ್ಷಾವಧಿಯಲ್ಲಿ ಒಂದು ಸ್ಥಾನವೂ ಬರಬಾರದೆಂಬ ಲೆಕ್ಕಾಚಾರವೂ ಇರಬಹುದು ಎಂದು ಹೇಳಿದರು.
     ಪೊಲೀಸ್ ಠಾಣೆಗೆ ಮುತ್ತಿಗೆ: ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಹೊನ್ನಾಳಿಯಲ್ಲಿ ಶನಿವಾರ ಬೆಳಗ್ಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದರು.
     ಬಿಜೆಪಿ ಮುಖಂಡರಾದ ಬಿ.ಜೆ. ಅಜಯ್‌ಕುಮಾರ್, ಲೋಕಿಕೆರೆ ನಾಗರಾಜ್, ಡಾ.ರವಿಕುಮಾರ್, ಕೆ.ಪಿ. ಕಲ್ಲಿಂಗಪ್ಪ, ರಾಜುವೀರಣ್ಣ, ದಯಾನಂದ್, ಚಂದ್ರು ಪಾಟೀಲ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts