More

    ಕೋವಿಡ್ ತಡೆಗೆ ಕೈತೊಳೆಯುವುದು ಸಹಕಾರಿ

    ದಾವಣಗೆರೆ: ಕ್ರಮಬದ್ಧವಾಗಿ ಕೈತೊಳೆಯುವುದರಿಂದ ಕೋವಿಡ್ ಸೋಂಕನ್ನು ದೂರವಿಡಬಹುದು ಎಂದು ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಹೇಳಿದರು.

    ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯಲ್ಲಿ ಗುರುವಾರ ಆಯೋಜಿಸಿದ್ದ ಜಾಗತಿಕ ಕೈ ತೊಳೆಯುವ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

    ಸಾಬೂನಿನಿಂದ ಸ್ವಚ್ಛವಾಗಿ ಕೈತೊಳೆಯಬೇಕು. ಕೋವಿಡ್ ಆರಂಭದ ದಿನಗಳಲ್ಲಿ ಸಾರ್ವಜನಿಕರು ಕೈತೊಳೆಯಲು ಅಲ್ಲಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಪ್ರಸ್ತುತ ಸಂದರ್ಭದಲ್ಲಿ ಅದಕ್ಕೆ ಬಹಳ ಮಹತ್ವ ಬಂದಿದೆ. ಇದರ ಜತೆಗೆ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡುವುದರಿಂದ ಕರೊನಾದಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು ಎಂದು ತಿಳಿಸಿದರು.

    ರೆಡ್‌ಕ್ರಾಸ್ ಸಂಸ್ಥೆಯು ಸಮಾಜಮುಖಿ ಕಾರ್ಯಗಳನ್ನು ಮೊದಲಿನಿಂದಲೂ ಮಾಡುತ್ತ ಬಂದಿದೆ. ಕರೊನಾ ಸಂದರ್ಭದಲ್ಲಂತೂ ಹೆಚ್ಚು ಕ್ರಿಯಾಶೀಲ ಕೆಲಸಗಳನ್ನು ಮಾಡಿದೆ. ಜನಜಾಗೃತಿ ಮೂಡಿಸುತ್ತ ಬಂದಿದೆ. ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚು ಮಾಡುವಂತೆ ಸರ್ಕಾರದಿಂದಲೂ ಸೂಚನೆಯಿದೆ ಎಂದು ಮಾಹಿತಿ ನೀಡಿದರು.

    ಸಂಸ್ಥೆಯ ಚೇರ್ಮನ್ ಡಾ.ಎ.ಎಂ.ಶಿವಕುಮಾರ್ ಮಾತನಾಡಿ, ಸ್ವಚ್ಛವಾಗಿ ಕೈತೊಳೆಯುವ ಅಭ್ಯಾಸವನ್ನು ಜೀವನಪರ್ಯಂತ ಪಾಲಿಸಬೇಕು. ಮಕ್ಕಳಲ್ಲಿ ಈ ಹವ್ಯಾಸವನ್ನು ರೂಢಿಸಬೇಕು ಎಂದು ಹೇಳಿದರು.

    ಕೈತೊಳೆಯುವುದರಿಂದ ಮಕ್ಕಳಲ್ಲಿ ಭೇದಿಯ ಸಮಸ್ಯೆ ಶೇ.50ರಷ್ಟು, ಶ್ವಾಸಕೋಶದ ಕಾಯಿಲೆ ಶೇ.21ರಷ್ಟು ಕಡಿಮೆಯಾಗಿರುವ ಉದಾಹರಣೆಯಿದೆ. ಸಾಬೂನು ಹಚ್ಚಿ ಕೈತೊಳೆಯವುದನ್ನು ಕುಟುಂಬದ ಎಲ್ಲರೂ ಅನುಸರಿಸಬೇಕು. ಇದರಿಂದ ಎಲ್ಲರ ಸ್ವಾಸ್ಥೃ ಕಾಪಾಡಿಕೊಳ್ಳಬಹುದು ಎಂದರು.

    ಸಂಸ್ಥೆಯ ವೈಸ್ ಚೇರ್ಮನ್ ಗೌಡ್ರ ಚನ್ನಬಸಪ್ಪ ಮಾತನಾಡಿ, ರೆಡ್‌ಕ್ರಾಸ್ ಸಂಸ್ಥೆಯ ಯುವಕರು ಮೂರ್ನಾಲ್ಕು ತಿಂಗಳಿಂದ ಸಾರ್ವಜನಿಕರಲ್ಲಿ ಕೋವಿಡ್ ನಿಯಂತ್ರಣ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ ಎಂದು ತಿಳಿಸಿದರು.

    ಸಂಸ್ಥೆಯ ಇನ್ನೊಬ್ಬ ವೈಸ್ ಚೇರ್ಮನ್ ಸಿದ್ದಣ್ಣ ಮಾತನಾಡಿ, ಕರೊನಾಗೆ ಔಷಧಿ ಬರುವ ವರೆಗೆ ಎಲ್ಲರೂ ಎಚ್ಚರಿಕೆ ವಹಿಸಬೇಕಿದೆ. ರೆಡ್‌ಕ್ರಾಸ್ ಸಂಸ್ಥೆಯು ರಕ್ತದ ಕೊರತೆಯನ್ನು ನೀಗಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.

    ಇದೇ ಸಂದರ್ಭದಲ್ಲಿ ಕೋವಿಡ್- 19 ನಿಯಂತ್ರಣ ಜಾಗೃತಿಯ ಪ್ರಚಾರ ವಾಹನವನ್ನು ಉದ್ಘಾಟಿಸಲಾಯಿತು. ಕರೊನಾ ವಾರಿಯರ್‌ಗಳಿಗೆ ಶಕ್ತಿದಾಯಕ ಪಾನೀಯ ಹಸ್ತಾಂತರಿಸಲಾಯಿತು.

    ಸಂಸ್ಥೆಯ ಕಾರ್ಯದರ್ಶಿ ಉಮೇಶ ಶೆಟ್ಟಿ, ಶ್ರೀಕಾಂತ್ ಎಂ.ಜಿ, ಶ್ರೀಕಾಂತ್ ಬಗರೆ ಇದ್ದರು. ಅನಿಲ್ ಬಾರೆಂಗಳ್ ಕಾರ್ಯಕ್ರಮ ನಿರೂಪಿಸಿದರು. ಆನಂದಜ್ಯೋತಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts