More

    ವಿನೋಬನಗರ ಗಣಪತಿಯ ಅದ್ದೂರಿ ಮೆರವಣಿಗೆ

    ದಾವಣಗೆರೆ : ಶ್ರೀ ವೀರ ವರಸಿದ್ಧಿ ವಿನಾಯಕ ಸೇವಾ ಸಮಿತಿ ವಿನೋಬ ನಗರದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿಯ ವಿಸರ್ಜನಾ ಮೆರವಣಿಗೆ ವಿವಿಧ ಕಲಾತಂಡ ಹಾಗೂ ಅಪಾರ ಜನಸ್ತೋಮದ ನಡುವೆ ವಿಜೃಂಭಣೆಯಿಂದ ನಡೆಯಿತು.
     ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಂಗಳವಾರ ಗಣಪತಿಗೆ ಪೂಜೆ ಸಲ್ಲಿಸುವ ಮೂಲಕ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.
     ಅಯೋಧ್ಯೆ ಶ್ರೀರಾಮನಂತೆ ಬಿಲ್ಲುಬಾಣದೊಂದಿಗೆ ವಿರಾಜಮಾನನಾದ ಗಣೇಶನನ್ನು ಹೊತ್ತ ಟ್ರಾೃಕ್ಟರ್‌ನ್ನು ಸ್ವತಃ ಸಚಿವರೇ ಚಲಾಯಿಸಿದರು. ಈ ವೇಳೆ ಪುಷ್ಪವೃಷ್ಟಿ ನಡೆಸಲಾಯಿತು. ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಆನೆ, ನಂದಿಕೋಲು, ಸಮಾಳ, ಡೊಳ್ಳು, ನಾಸಿಕ್ ಡೋಲು ಮೊದಲಾದ ಕಲಾ ತಂಡಗಳು ಮೆರುಗು ನೀಡಿದವು.
     ಡಿಜೆ ಸೌಂಡ್‌ನಲ್ಲಿ ಮೊಳಗಿದ ದೇವ ಶ್ರೀ ಗಣೇಶ, ವಂದೇ ಮಾತರಂ, ಕರುನಾಡೇ, ಕುಚುಕು-ಕುಚುಕು ಮೊದಲಾದ ಹಾಡುಗಳಿಗೆ ಯುವಕರು ಕೇಸರಿ ಶಲ್ಯ ಬೀಸಿ ಅತ್ಯುತ್ಸಾಹದಿಂದ ಕುಣಿದು ಕುಪ್ಪಳಿಸಿದರು. ಯುವತಿಯರು ಸಹ ಹಾಡುಗಳಿಗೆ ಹೆಜ್ಜೆ ಹಾಕಿದರು. ಶ್ರೀರಾಮಸೇನೆ ಯುವಕರ ತಂಡದ ಬೃಹತ್ ಭಗವಾಧ್ವಜ ರಾರಾಜಿಸಿತು.
     ಮೆರವಣಿಗೆ ಸಾಗಿದ ದಾರಿಯುದ್ದಕ್ಕೂ ಜನಸಾಗರವೇ ನೆರೆದಿತ್ತು. ಎರಡೂ ಬದಿಯ ಕಟ್ಟಡಗಳ ಮೇಲೆ ನಿಂತು ಮೆರವಣಿಗೆ ವೀಕ್ಷಿಸಿದ ಜನರು ಪುಷ್ಪವೃಷ್ಟಿಯೊಂದಿಗೆ ಗಜಮುಖನಿಗೆ ನಮನ ಸಲ್ಲಿಸಿದರು. ಮೊಬೈಲ್‌ಗಳಲ್ಲಿ ಮೆರವಣಿಗೆ ಚಿತ್ರೀಕರಣ ಹಾಗೂ ಸೆಲ್ಫಿ ತೆಗೆದುಕೊಳ್ಳುವುದು ಎಲ್ಲೆಡೆ ನಡೆದಿತ್ತು.
     ವಿನೋಬನಗರ ಎರಡನೇ ಮುಖ್ಯರಸ್ತೆ  ಮೂಲಕ ನಗರದ ಪಿ.ಬಿ. ರಸ್ತೆ, ಅರುಣ ಸರ್ಕಲ್, ರಾಂ ಅಂಡ್ ಕೋ ಸರ್ಕಲ್, ಶ್ರೀ ಚೌಡೇಶ್ವರಿ ದೇವಸ್ಥಾನ ರಸ್ತೆಗಳಲ್ಲಿ ಮೆರವಣಿಗೆ ಸಾಗಿತು. ಕೊನೆಗೆ ಬಾತಿ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.
     ಮೆರವಣಿಗೆ ಹಾಗೂ ಮಾರ್ಗದುದ್ದಕ್ಕೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಬೆಸ್ಕಾಂ, ಅಗ್ನಿಶಾಮಕ ದಳ, ಆಂಬುಲೆನ್ಸ್ ಸಿಬ್ಬಂದಿ ಇದ್ದರು.
     ಪಾಲಿಕೆ ಮೇಯರ್ ವಿನಾಯಕ ಪೈಲ್ವಾನ್, ಸದಸ್ಯ ಎ. ನಾಗರಾಜ್, ದೇವರಮನೆ ಶಿವಕುಮಾರ್, ಸುರೇಶ್ ಗಂಡಗಾಳೆ, ಸಮಿತಿ ಗೌರವಾಧ್ಯಕ್ಷ ಶಿವರಾಜ್ ದೇವರಮನೆ, ಅಧ್ಯಕ್ಷ ಗುರುನಾಥರಾವ್, ಉಪಾಧ್ಯಕ್ಷ ನಾಗರಾಜಗೌಡ್ರು, ಕಾರ್ಯದರ್ಶಿ ಡಿ.ಕೆ. ರಮೇಶ್, ಮಂಜುನಾಥ್, ರಾಜನಹಳ್ಳಿ ಶಿವಕುಮಾರ್, ಸತೀಶ್ ಪೂಜಾರ್, ಮಣಿ ಸರ್ಕಾರ್ ಇತರರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts