More

    ಕೃಷಿ ಪಂಪ್‌ಸೆಟ್‌ಗಳಿಗೆ 7 ಗಂಟೆ ವಿದ್ಯುತ್ ನೀಡಲು ಆಗ್ರಹ

    ದಾವಣಗೆರೆ : ಕೃಷಿ ಪಂಪ್‌ಸೆಟ್‌ಗಳಿಗೆ 7 ಗಂಟೆ 3-ಫೇಸ್ ವಿದ್ಯುತ್ ಸರಬರಾಜು ಮಾಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ (ಪುಟ್ಟಣ್ಣಯ್ಯ ಬಣ) ಕಾರ್ಯಕರ್ತರು ನಗರದ ಬೆಸ್ಕಾಂ ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
     ಮೆರವಣಿಗೆಯಲ್ಲಿ ಆಗಮಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ನೀತಿಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಧೀಕ್ಷಕ ಇಂಜಿನಿಯರ್ ಬಿ.ಎಸ್. ಜಗದೀಶ್ ಮತ್ತು ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಕೆ. ಪಟೇಲ್ ಅವರಿಗೆ ಮನವಿ ಸಲ್ಲಿಸಿದರು.
     ರಾಜ್ಯದ 45 ಲಕ್ಷಕ್ಕಿಂತ ಹೆಚ್ಚು ರೈತ ಕುಟುಂಬಗಳು ಪಂಪ್‌ಸೆಟ್ ನೀರಾವರಿ ಮೂಲಕ ತೋಟಗಾರಿಕೆ ಹಾಗೂ ಇತರೆ ಫಸಲುಗಳನ್ನು ಬೆಳೆದಿದ್ದಾರೆ. ವಿದ್ಯುತ್ ಸರಬರಾಜು ವ್ಯತ್ಯಯದಿಂದಾಗಿ ನಷ್ಟ ಅನುಭವಿಸಬೇಕಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.
     ಮುನ್ಸೂಚನೆ ಇದ್ದರೂ ಸರ್ಕಾರ ವಿದ್ಯುತ್ ಕ್ಷಾಮದ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳದಿರುವುದು ಖಂಡನೀಯ. ಕೈಗಾರಿಕೆಗಳಿಗೆ ಎಂದಿನಂತೆ ವಿದ್ಯುತ್ ವಿತರಣೆ ಮುಂದುವರಿಸಿ, ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
     ಸೌರ ವಿದ್ಯುತ್ ಉತ್ಪಾದನೆಗೆ ಹೆಚ್ಚು ಒತ್ತು ನೀಡಬೇಕು. ಎಲ್ಲ ಸಕ್ಕರೆ ಕಾರ್ಖಾನೆಗಳು ವಿದ್ಯುತ್ ಉತ್ಪಾದನೆ ಮಾಡುವುದನ್ನು ಕಡ್ಡಾಯಗೊಳಿಸಬೇಕು. ರಾಜ್ಯಾದ್ಯಂತ ಅವಶ್ಯಕತೆ ಇರುವ ಕಡೆ ವಿದ್ಯುತ್ ಉಪ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
     ಸುಟ್ಟು ಹೋಗಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳನ್ನು ಸರ್ಕಾರ ನಿಗದಿ ಮಾಡಿರುವ ಸಮಯದೊಳಗೆ ಬದಲಾಯಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.
     ಮನವಿ ಸ್ವೀಕರಿಸಿದ ಅಧೀಕ್ಷಕ ಇಂಜಿನಿಯರ್ ಜಗದೀಶ್ ಮಾತನಾಡಿ, ಮಳೆ ಕೊರತೆಯಿಂದ ಜಲ ವಿದ್ಯುತ್ ಉತ್ಪಾದನೆ ಕ್ಷೀಣವಾಗಿದೆ. ವಾಡಿಕೆಯಂತೆ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಬಿಸಿಲು ಮತ್ತು ಗಾಳಿ ಬೀಸುವ ಪ್ರಮಾಣ ಕಡಿಮೆ ಇರುವುದರಿಂದ ಸೌರ ಮತ್ತು ಪವನ ವಿದ್ಯುತ್ ಉತ್ಪಾದನೆಯು ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ.
     ಹೀಗಾಗಿ 7 ಗಂಟೆ ಬದಲು 5 ಗಂಟೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಲು ಅಗತ್ಯ ಕ್ರಮ ವಹಿಸಲಾಗುವುದು. ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಸಭಾಂಗಣದಲ್ಲಿ ರೈತರ ಮತ್ತು ಬೆಸ್ಕಾಂ ಅಧಿಕಾರಿಗಳ ಸಭೆ ನಡೆಸಿ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು.
     ಕಾರ್ಯಪಾಲಕ ಇಂಜಿನಿಯರ್ ಎಸ್.ಕೆ. ಪಟೇಲ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಜಿ.ಎಂ. ನಾಯಕ್ ಇದ್ದರು.
     ಸಂಘದ ಜಿಲ್ಲಾಧ್ಯಕ್ಷ ಬಳ್ಳಾಪುರ ಹನುಮಂತಪ್ಪ, ಕೊಗ್ಗನೂರು ಹನುಮಂತಪ್ಪ, ಕರಿಲಕ್ಕೆನಳ್ಳಿ ರೇವಣಸಿದ್ದಪ್ಪ, ಅಣಬೇರು ಅಣ್ಣಪ್ಪ, ಚಿನ್ನಸಮುದ್ರದ ಭೀಮಾನಾಯ್ಕ್, ಕೊಗ್ಗನೂರು ಎ ಮಂಜುನಾಥ, ಬಲ್ಲೂರು ಅಣ್ಣಪ್ಪ, ಎಸ್.ಟಿ. ಪರಮೇಶ್ವರಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
     ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್, ರೈತ ಮುಖಂಡರಾದ ಕೊಳೇನಹಳ್ಳಿ ಬಿ.ಎಂ. ಸತೀಶ್, ಧನಂಜಯ ಕಡ್ಲೆಬಾಳ್, ಎನ್.ಎಚ್. ಹಾಲೇಶ್, ವಾಟರ್ ಮಂಜುನಾಥ, ಪರಶುರಾಮ ಪ್ರತಿಭಟನೆಗೆ ಬೆಂಬಲ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts