More

    ಚಿಕ್ಕತೊಗಲೇರಿ ಕೆಪಿಟಿಸಿಎಲ್ ಉಪಕೇಂದ್ರಕ್ಕೆ ಮುತ್ತಿಗೆ

    ದಾವಣಗೆರೆ : ಸಮರ್ಪಕ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ತಾಲೂಕಿನ ಚಿಕ್ಕತೊಗಲೇರಿ ಕೆಪಿಟಿಸಿಎಲ್ ಉಪಕೇಂದ್ರಕ್ಕೆ ಗುರುವಾರ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
     ರೈತ ಮುಖಂಡ ಕೊಳೇನಹಳ್ಳಿ ಬಿ.ಎಂ.ಸತೀಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು ಅನಿಯಮಿತ ಲೋಡ್ ಶೆಡ್ಡಿಂಗ್‌ನಿಂದ ಬೆಳೆಗಳಿಗೆ ನೀರುಣಿಸಲಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
     ಮುಖಂಡ ಬಿ. ಎಂ. ಸತೀಶ್ ಮಾತನಾಡಿ, ಅನೇಕ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದ್ದು, ಪವರ್ ಜನರೇಷನ್ ಸಮಸ್ಯೆ ಇದೆ. ಅದಕ್ಕಾಗಿ ಸೌರ ವಿದ್ಯುತ್ ಉತ್ಪಾದನೆಯಿಂದ ನಿರ್ವಹಣೆ ಮಾಡಿ ಹಗಲಿನಲ್ಲಿ ಮಾತ್ರ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ನೀಡುತ್ತಿರುವ ಹೇಳಿಕೆಯನ್ನು ಖಂಡಿಸಿದರು.
     ರಾಜ್ಯದ ಜನತೆ ಕೇಳದಿದ್ದರೂ ಎಲ್ಲರ ಮನೆಗಳಿಗೆ ಮಾಸಿಕ 200 ಯೂನಿಟ್ ವಿದ್ಯುತ್ ಪುಕ್ಕಟೆ ಕೊಡುವುದಾಗಿ ಗ್ಯಾರಂಟಿ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಗೃಹಜ್ಯೋತಿ ಯೋಜನೆ ಜಾರಿ ಮಾಡಿದೆ. ಇದರಿಂದ ವಿದ್ಯುತ್ ಬಳಕೆ ಹೆಚ್ಚಾಗಿ ಅಭಾವ ತಲೆದೋರಿ ಅನ್ನದಾತರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ ಎಂದು ದೂರಿದರು.
     ಕಾಂಗ್ರೆಸ್ ಸರ್ಕಾರ ರೈತರಿಗೆ ಯಾವುದೇ ಗ್ಯಾರಂಟಿ ನೀಡಿಲ್ಲ. ಅವರಿಗೆ ಆತ್ಮಹತ್ಯೆಯೇ ಗ್ಯಾರಂಟಿಯಾಗಿದೆ. ಇದು ರೈತ ವಿರೋಧಿ ಸರ್ಕಾರ ಎಂದು ತೀವ್ರವಾಗಿ ಖಂಡಿಸಿದರು.
     ಸ್ಥಳಕ್ಕೆ ಆಗಮಿಸಿದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ತೀರ್ಥೇಶ್ ಅವರು ರೈತರ ಸಮಸ್ಯೆ ಆಲಿಸಿದರು. ರೈತರೊಂದಿಗೆ ಚರ್ಚಿಸಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಮತ್ತು ರಾತ್ರಿ 10 ರಿಂದ ಬೆಳಗಿನ ಜಾವ 5 ಗಂಟೆಯವರೆಗೆ 2 ಪಾಳಿಯಲ್ಲಿ ವಿದ್ಯುತ್ ಪೂರೈಕೆ ಮಾಡುವುದಾಗಿ ಭರವಸೆ ನೀಡಿದರು.
     ಅತ್ತಿಗೆರೆ ದೇವರಾಜ್, ಚಂದ್ರನಹಳ್ಳಿ ಮಲ್ಲಿಕಾರ್ಜುನ, ಕಿರುವಾಡಿ ಸುಭಾಷ್‌ಚಂದ್ರ, ಚಂದ್ರನಹಳ್ಳಿ ಬಸವರಾಜಪ್ಪ, ತೋಳಹುಣಸೆ ವಿನಾಯಕ, ಅತ್ತಿಗೆರೆ ಸಿ.ಎಂ.ಸುರೇಶ, ಕೆ.ಎಂ.ಮಂಜುನಾಥ, ಮಂಜುನಾಥಯ್ಯ, ಬೆಳವನೂರು ಮರುಳಸಿದ್ದಪ್ಪ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts