More

    600 ಶಿಕ್ಷಕರಿಗೆ ಮುಳುವಾಯ್ತು ಮಿತವ್ಯಯದ ಆದೇಶ

    ಶ್ರೀಕಾಂತ್ ಕುರುವತ್ತಿ ದಾವಣಗೆರೆ: ನೇಮಕಾತಿ ನಿರೀಕ್ಷೆಯಲ್ಲಿ ಅನುದಾನಿತ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯದ 600ಕ್ಕೂ ಹೆಚ್ಚು ಶಿಕ್ಷಕರು ಅತಂತ್ರರಾಗಿದ್ದಾರೆ.ಆರ್ಥಿಕ ಮಿತವ್ಯಯದ ಹ್ನಿನೆಲೆಯಲ್ಲಿ ಅನುಮೋದನೆ ದೊರೆಯದ ಕಾರಣ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಸ್ಥಿತಿ ಬಂದಿದೆ.

    2015ರ ಡಿಸೆಂಬರ್ 31ರವರೆಗೆ ಅನುದಾನಿತ ಪ್ರೌಢ ಶಾಲೆಗಳಲ್ಲಿ ಖಾಲಿ ಇದ್ದ 3600 ಹುದ್ದೆಗಳ ನೇಮಕಕ್ಕೆ ಸರ್ಕಾರ ಈ ಹಿಂದೆ ಆದೇಶಿಸಿತ್ತು. ಖಾಸಗಿ ಸಂಸ್ಥೆಗಳು 2016-17ರಿಂದಲೇ ಅಭ್ಯರ್ಥಿಗಳ ಸಂದರ್ಶನ ನಡೆಸಿ 600ಕ್ಕೂ ಹೆಚ್ಚು ಜನರನ್ನು ಅಂತಿಮಗೊಳಿಸಿ ಅನುಮೋದನೆ ಕೋರಿ ಶಿಕ್ಷಣ ಇಲಾಖೆಗೆ ಕಳುಹಿಸಿದ್ದರೂ ಅನುಮೋದನೆ ದೊರೆತಿಲ್ಲ.

    ವಿಲೇ ಆಗದ ಕಡತಗಳು: ಜೂ.10ರಂದು ಆರ್ಥಿಕ ಮಿತವ್ಯಯದ ಆದೇಶ ಹೊರಬಿದ್ದ ಕಾರಣ ಅನುಮೋದನೆ ಹಂತದಲ್ಲಿರುವ ಶಿಕ್ಷಕರ ಕಡತಗಳು ವಿಲೇ ಆಗದೆ ಉಳಿದಿವೆ. ಶೀಘ್ರ ವಿಲೇ ಮಾಡಬೇಕೆಂಬುದು ಶಿಕ್ಷಕರ ಒತ್ತಾಸೆ. ಈನಡುವೆ ಅಭ್ಯರ್ಥಿಗಳಿಗೆ ವಯೋಮಿತಿ ಮೀರುವ ಆತಂಕ ಎದುರಾಗಿದೆ.
    ಧರಣಿಗೂ ಸಿಗಲಿಲ್ಲ ಮನ್ನಣೆ: ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ತಿಂಗಳ ಹಿಂದಷ್ಟೆ ಹದಿನೈದು ದಿನಗಳ ಕಾಲ ಧರಣಿ ನಡೆಸಿದರೂ, ಆಡಳಿತ ವಿಪಕ್ಷ ನಾಯಕರಿಗೆ ಮನವಿ ಸಲ್ಲಿಸಿದರೂ ಸ್ಪಂದನಕ್ಕೆ ಸಿಕ್ಕಿಲ್ಲ. ಸಮಸ್ಯೆ ಕುರಿತು ಸದನದಲ್ಲಿ ಚರ್ಚಿಸುವುದಾಗಿ ಹೇಳಿದ್ದ ಜನನಾಯಕರು ಅಲ್ಲೂ ಸಹ ಚಕಾರ ಎತ್ತಿಲ್ಲ. ಇನ್ನೊಂದು ತಿಂಗಳಲ್ಲಿ ಸಮಸ್ಯೆ ಪರಿಹರಿಸುವುದಾಗಿ ಸರ್ಕಾರ ನೀಡಿದ್ದ ಭರವಸೆ ಕನಸಾಗೇ ಉಳಿದಿದೆ ಎಂದು ಅಭ್ಯರ್ಥಿಗಳು ದೂರಿದ್ದಾರೆ.

    ಆತ್ಮಹತ್ಯೆ ದಾರಿಯೊಂದೇ ಉಳಿದಿದೆ: ಇಂದು, ನಾಳೆ ಎನ್ನುತ್ತ ಯಾವುದೇ ಸಂಭಾವನೆ, ಸೇವಾ ಭದ್ರತೆ ಇಲ್ಲದೆ ಮೂರ್ನಾಲ್ಕು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಮಗೆ ಬದುಕೇ ಬೇಡವೆನಿಸಿದೆ. ಹಣಕಾಸು ಇಲಾಖೆ ಕೂಡಲೇ ಆರ್ಥಿಕ ಮಿತವ್ಯಯದ ಆದೇಶ ಹಿಂಪಡೆದು ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಬೇಕು. ಇಲ್ಲದಿದ್ದರೆ ಸಾಮೂಹಿಕವಾಗಿ ಆತ್ಮಹತ್ಯೆಯೊಂದೇ ನಮಗೆ ದಾರಿ ಎಂದು ಅನುದಾನಿತ ಶಾಲೆಗಳಿಗೆ ನೇಮಕಗೊಂಡ ಹರಿಹರದ ಬಿ.ಎನ್. ಮಾರುತಿ, ಬಳ್ಳಾರಿಯ ಕೆ.ಬಿ. ಸೋಮಶೇಖರ್, ಮೈಸೂರಿನ ರವಿ, ತುಮಕೂರಿನ ಕೆ.ಸಿ. ಪ್ರಸನ್ನ ಕುಮಾರ್ ಇತರರು ಅಸಹಾಯಕತೆ ತೋಡಿಕೊಂಡಿದ್ದಾರೆ.

    ಕೋವಿಡ್-19 ಆರ್ಥಿಕ ಮಿತವ್ಯಯದ ಕಾರಣ ಸರ್ಕಾರ ಯಾವುದೇ ನೇಮಕಾತಿ ಪ್ರಕ್ರಿಯೆ ನಡೆಸದಂತೆ ಆದೇಶಿಸಿದೆ. ಹೀಗಾಗಿ ತಾತ್ಕಾಲಿಕವಾಗಿ ಎಲ್ಲ ನೇಮಕಾತಿ ಸ್ಥಗಿತಗೊಳಿಸಿದ್ದು, ಸರ್ಕಾರದ ಮುಂದಿನ ಆದೇಶದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
    > ಸಿ.ಆರ್. ಪರಮೇಶ್ವರಪ್ಪ, ಡಿಡಿಪಿಐ ದಾವಣಗೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts