More

    ಕಾಣೆಯಾದ ಮಳೆ, ಒಣಗಿದ ಇಳೆ, ಬಾಡಿದ ಬೆಳೆ

    ರಮೇಶ ಜಹಗೀರದಾರ್ ದಾವಣಗೆರೆ
     ಗ್ರಾಮೀಣ ಪ್ರದೇಶಗಳಲ್ಲಿ ಸುತ್ತು ಹಾಕಿದರೆ ಬಾಡಿದ ಬೆಳೆಗಳು, ರೈತರ ಸೊರಗಿದ ಮುಖಗಳು ಕಾಣಿಸುತ್ತವೆ. ಹಸಿರಿನಿಂದ ನಳ ನಳಿಸಬೇಕಿದ್ದ ಹೊಲಗಳಲ್ಲಿ ಜೀವಕಳೆ ಇಲ್ಲದಂತಾಗಿದೆ. ಭವಿಷ್ಯದ ಬಗ್ಗೆ ಅನ್ನದಾತರು ಆತಂಕಗೊಂಡಿದ್ದಾರೆ.
     ಜಿಲ್ಲೆಯನ್ನು ಬರ ಹೇಗೆ ಆವರಿಸಿದೆ ಎನ್ನುವುದಕ್ಕೆ ಇದೊಂದು ಝಲಕ್. ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಂಡ ಸರ್ಕಾರ ಅಧಿಕಾರಿಗಳಿಂದ ಮಾಹಿತಿ ತರಿಸಿಕೊಂಡು ಆರೂ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿದೆ.
     ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಮಳೆ ಕಣ್ಣಾಮುಚ್ಚಾಲೆ ಆಟವಾಡಿದೆ. ಬೆಳೆಗಳಿಗೆ ಬೇಕಿದ್ದಾಗ ಮಳೆರಾಯ ಸುಳಿಯಲೇ ಇಲ್ಲ. ಜೂನ್ ತಿಂಗಳಲ್ಲಿ ಶೇ. 39ರಷ್ಟು ಮಳೆಯ ಕೊರತೆಯಾಯಿತು. ವಾಡಿಕೆಯಂತೆ 79 ಮಿ.ಮೀ. ಮಳೆಯಾಗಬೇಕಿತ್ತು, 48 ಮಿ.ಮೀ. ಮಾತ್ರ ಆಯಿತು.
     ಜುಲೈನಲ್ಲಿ ಉತ್ತಮ ಮಳೆಯಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿತು. 108 ಮಿ.ಮೀ. ವಾಡಿಕೆಗೆ 169 ಮಿ.ಮೀ. ಮಳೆಯಾಯಿತು (ಶೇ. 57ರಷ್ಟು ಅಧಿಕ). ಆ ಹಂತದಲ್ಲಿ ಬಿತ್ತನೆ ಚುರುಕುಗೊಂಡಿತು.
     ಆದರೆ ಆಗಸ್ಟ್ ತಿಂಗಳಲ್ಲಿ ಮಳೆ ಮತ್ತೆ ಕೈಕೊಟ್ಟಿತು. ವಾಡಿಕೆಯಂತೆ 99 ಮಿ.ಮೀ. ಮಳೆಯಾಗಬೇಕಿತ್ತು, ಆದರೆ ಕೇವಲ 24 ಮಿ.ಮೀ. ಆಗಿದ್ದು ಶೇ. 75ರಷ್ಟು ಕೊರತೆಯುಂಟಾಯಿತು. ಬೆಳೆಗಳು ಬೆಳವಣಿಗೆ ಹಂತದಲ್ಲಿದ್ದಾಗಲೇ ಸೊರಗುವಂತಾಯಿತು. ರೈತರಿಗೆ ಆದಾಯ ತಂದುಕೊಡಬೇಕಿದ್ದ ಮೆಕ್ಕೆಜೋಳ, ರಾಗಿ, ಶೇಂಗಾ, ಹತ್ತಿ, ಈರುಳ್ಳಿ ಬೆಳೆಗಳು ಹಾನಿಗೀಡಾಗಿವೆ.
     ಸರ್ಕಾರದ ಸೂಚನೆಯಂತೆ ವಾಸ್ತವ ಸ್ಥಿತಿ ಅರಿಯಲು ಅಧಿಕಾರಿಗಳು ಆರೂ ತಾಲೂಕುಗಳಲ್ಲಿ ಸಮೀಕ್ಷೆ ಕೈಗೊಂಡರು. 89 ಹಳ್ಳಿಗಳ ಆಯ್ದ 560 ಕಡೆಗಳಲ್ಲಿ ಸಮೀಕ್ಷೆ ನಡೆಸಲಾಯಿತು. ಅದರ ವರದಿಯನ್ನು ಗಮನಿಸಿದರೆ ಬರದ ಭೀಕರತೆಯ ಅರಿವಾಗುತ್ತದೆ.
     ಶೇ. 97.38ರಷ್ಟು ಬೆಳೆ ಶೇ. 50ಕ್ಕಿಂತ ಹೆಚ್ಚು ಹಾನಿ ಅನುಭವಿಸಿದೆ. ಶೇ. 2.62ರಷ್ಟು ಬೆಳೆ ಶೇ. 33 ರಿಂದ 50ರಷ್ಟು, ಶೇ. 0.16ರಷ್ಟು ಬೆಳೆ ಶೇ. 33ಕ್ಕಿಂತ ಕಡಿಮೆ ಹಾನಿಗೊಳಗಾಗಿರುವುದು ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.
     ಅಧಿಕಾರಿಗಳ ಪ್ರಕಾರ ಸದ್ಯಕ್ಕೆ ಮೇವಿನ ಅಭಾವವೇನೂ ಇಲ್ಲ. ಜಿಲ್ಲೆಯಲ್ಲಿ 3.29 ಲಕ್ಷ ದನ ಮತ್ತು ಎಮ್ಮೆಗಳು, 3.17 ಲಕ್ಷ ಕುರಿ ಮತ್ತು ಮೇಕೆಗಳಿವೆ. 40 ವಾರಗಳಿಗೆ ಆಗುವಷ್ಟು ಮೇವಿನ ಲಭ್ಯತೆಯಿದೆ.
     …
     * ಕುಡಿಯುವ ನೀರು, ಅಂತರ್ಜಲ ಮಟ್ಟ
     ಸದ್ಯಕ್ಕೆ ಕುಡಿಯುವ ನೀರಿನ ಅಭಾವ ಎಲ್ಲೂ ಸೃಷ್ಟಿಯಾಗಿಲ್ಲ. ಟ್ಯಾಂಕರ್‌ಗಳಲ್ಲಿ ಸರಬರಾಜು ಮಾಡುವ ಸ್ಥಿತಿ ಇಲ್ಲ. ಆದರೆ 3 ತಿಂಗಳ ನಂತರ 49 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ.
     ದಾವಣಗೆರೆ ತಾಲೂಕಿನಲ್ಲಿ 15, ಹರಿಹರ 4, ಚನ್ನಗಿರಿ 13, ಹೊನ್ನಾಳಿ 7, ಜಗಳೂರು ತಾಲೂಕಿನ 10 ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಎದುರಾಗಬಹುದು ಎಂದು ಗುರುತಿಸಲಾಗಿದೆ.
     ಮಳೆಯ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕಳೆದ ವರ್ಷಕ್ಕಿಂತ ಈ ವರ್ಷ ನೆಲ ಮಟ್ಟದಿಂದ 3.53 ಮೀಟರ್‌ನಷ್ಟು ಕುಸಿದಿದೆ.
     …
     (ಕೋಟ್)
     ಜಿಲ್ಲೆಯಲ್ಲಿ ಸತತ ಶುಷ್ಕ ವಾತಾವರಣ ಇದ್ದುದರಿಂದ ಮೆಕ್ಕೆಜೋಳ, ರಾಜಿ, ಶೇಂಗಾ ಇನ್ನಿತರ ಬೆಳೆಗಳು ಹಾನಿಗೊಳಗಾಗಿವೆ. ಇಳುವರಿ ಕುಂಠಿತಗೊಳ್ಳುವ ಸಾಧ್ಯತೆಯಿದೆ. ಈ ಬಗ್ಗೆ ಸರ್ಕಾರಕ್ಕೆ ವಿಸ್ತೃತ ವರದಿಯನ್ನು ಸಲ್ಲಿಸಲಾಗುವುದು. ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದ್ದು ತಹಸೀಲ್ದಾರ್‌ಗಳು ಸೇರಿ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕುಡಿಯುವ ನೀರು, ಮೇವಿನ ಅಭಾವ ಉಂಟಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು.
      ಡಾ.ಎಂ.ವಿ. ವೆಂಕಟೇಶ್, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts