More

    ಡಿಜಿಟಲ್ ಸಾಕ್ಷರತೆಯತ್ತ ಚೀಲೂರು ಗ್ರಾಮದ ಹೆಜ್ಜೆ

    ರಮೇಶ ಜಹಗೀರದಾರ್ ದಾವಣಗೆರೆ
     ಜಿಲ್ಲೆಯ ಮೊದಲ ಸಂಪೂರ್ಣ ಡಿಜಿಟಲ್ ಸಾಕ್ಷರತೆ ಗ್ರಾಮವಾಗುವತ್ತ ನ್ಯಾಮತಿ ತಾಲೂಕು ಚೀಲೂರು ಗ್ರಾಮ ಹೆಜ್ಜೆ ಇಟ್ಟಿದೆ. ತಂತ್ರಜ್ಞಾನದಿಂದ ಗ್ರಾಮೀಣ ಸಮುದಾಯಕ್ಕೆ ಲಾಭವಾಗಬೇಕು ಎನ್ನುವ ಆಶಯದೊಂದಿಗೆ ಜಾಗೃತಿ ಮೂಡಿಸಿ ಅದರ ಬಳಕೆಯ ಬಗ್ಗೆ ಮನೆ ಬಾಗಿಲಲ್ಲೇ ಮಾಹಿತಿ ನೀಡಲಾಗುತ್ತಿದೆ.
     ಗ್ರಾಮದ 16 ರಿಂದ 60 ವರ್ಷದೊಳಗಿನವರನ್ನು ಡಿಜಿಟಲ್ ಸಾಕ್ಷರರನ್ನಾಗಿ ಮಾಡುವ ಪ್ರಯತ್ನ ಸಾಗಿದ್ದು ದೈನಂದಿನ ವ್ಯವಹಾರಗಳಲ್ಲಿ ತಂತ್ರಜ್ಞಾನದ ಉಪಯೋಗದ ಕುರಿತು ಹಳ್ಳಿಯ ಜನರಿಗೆ ಪಾಠ ಹೇಳಿಕೊಡಲಾಗುತ್ತಿದೆ.
     ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಶಿಕ್ಷಣ ಫೌಂಡೇಷನ್ ಮತ್ತು ಡೆಲ್ ಸಂಸ್ಥೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಇಲ್ಲಿನ ಯಶಸ್ಸನ್ನು ಆಧರಿಸಿ ಮುಂಬರುವ ದಿನಗಳಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳಿಗೆ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ.
     ಶಿಕ್ಷಣ ಫೌಂಡೇಷನ್‌ನ 8 ಜನರ ತಂಡ ವಾರಕ್ಕೆ ಎರಡು ದಿನ ಈ ಗ್ರಾಮಕ್ಕೆ ಭೇಟಿ ನೀಡಿ ಡಿಜಿಟಲ್ ಸಾಕ್ಷರತೆ ಮೂಡಿಸುತ್ತಿದೆ. ಈ ಕಾರ್ಯಕ್ಕೆ ಸ್ಥಳೀಯ ಸ್ವಯಂ ಸೇವಕರು, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ವಿದ್ಯಾರ್ಥಿಗಳ ನೆರವು ಪಡೆಯಲಾಗುತ್ತಿದೆ. ಜನಪ್ರತಿನಿಧಿಗಳೂ ಇದಕ್ಕೆ ಕೈಜೋಡಿಸಿದ್ದಾರೆ.
     ಸ್ಮಾರ್ಟ್ ಫೋನ್ ಬಳಕೆ, ಡಿಜಿಟಲ್ ಪಾವತಿ, ಆನ್‌ಲೈನ್ ಸೇವೆಗಳು, ಇಂಟರ್‌ನೆಟ್ ಸುರಕ್ಷತೆ, ಡಿಜಿಟಲ್ ಉಪಕರಣಗಳ ಬಳಕೆಯ ಕುರಿತು ಜನರಿಗೆ ತಿಳಿವಳಿಕೆ ನೀಡಲಾಗುತ್ತಿದೆ. ಊರಿನಲ್ಲಿ 16 ರಿಂದ 60 ವರ್ಷದೊಳಗಿನ 3300 ಜನರಿದ್ದಾರೆ, ಇದುವರೆಗೆ ಶೇ. 30ರಷ್ಟು ಮಂದಿಗೆ ಜಾಗೃತಿ ಮೂಡಿಸಲಾಗಿದೆ. ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ ಈ ಬಗ್ಗೆ ಪಾಠ ಮಾಡಲಾಗುತ್ತಿದೆ.
     …
     
     * ಗ್ರಾಮ ಡಿಜಿ ವಿಕಸನ
     ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಶಿಕ್ಷಣ ಫೌಂಡೇಷನ್ ಮತ್ತು ಡೆಲ್ ಸಂಸ್ಥೆಯ ಸಹಯೋಗದಲ್ಲಿ ಜಿಲ್ಲೆಯ 61 ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಡಿಜಿಟಲೀಕರಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ.
     ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಕೌಶಲಗಳನ್ನು ಅಭಿವೃದ್ಧಿಪಡಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಇದಕ್ಕೆ ಪೂರಕವಾಗಿ ಲ್ಯಾಪ್‌ಟಾಪ್, ಆ್ಯಂಡ್ರಾಯಿಡ್ ಮೊಬೈಲ್. ಮಾನಿಟರ್, ಟಿವಿ, ಇಂಟರ್‌ನೆಟ್ ಸಂಪರ್ಕ ಸೇರಿ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
     ಶಿಕ್ಷಣ ಪೀಡಿಯಾ ಆ್ಯಪ್ ಮೂಲಕ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪಾಠ, ನೋಟ್ಸ್, ಸಂಬಂಧಿಸಿದ ವಿಡಿಯೋ, ಚಿತ್ರಗಳನ್ನು ಒದಗಿಸಲಾಗಿದೆ. ಪಿಯುಸಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳಿವೆ. ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸಣ್ಣ ಕತೆಗಳಿವೆ. ಅಲ್ಲದೇ ಯುವಕರು ಡಿಜಿಟಲ್ ಕೌಶಲಗಳನ್ನು ಬೆಳೆಸಿಕೊಳ್ಳಲು ಬೇಕಾದ ವ್ಯವಸ್ಥೆಯಿದೆ.
     ವಿದ್ಯಾರ್ಥಿಗಳು ತಮ್ಮ ಸದಸ್ಯತ್ವ ಸಂಖ್ಯೆಯನ್ನು ನಮೂದಿಸುವ ಮೂಲಕ ಈ ಆ್ಯಪ್‌ನ ಪ್ರಯೋಜನ ಪಡೆಯಬಹುದಾಗಿದೆ. ಜತೆಗೆ ಆನ್‌ಲೈನ್ ಸೇವೆಗಳು, ಅರ್ಜಿ ಸಲ್ಲಿಕೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಮಾಹಿತಿ ಇಲ್ಲಿ ಲಭ್ಯ.
     …
     
     (ಕೋಟ್)
     ಸಂಪೂರ್ಣ ಡಿಜಿಟಲ್ ಸಾಕ್ಷರತೆಗೆ ಪೈಲಟ್ ಯೋಜನೆಯಾಗಿ ಚೀಲೂರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅಲ್ಲಿನ ಯಶಸ್ಸು ನೋಡಿಕೊಂಡು ಕ್ರಮೇಣ ಇತರ ಗ್ರಾಮಗಳಿಗೆ ವಿಸ್ತರಿಸಲಾಗುವುದು. ಜನವರಿ 26ರೊಳಗೆ ಜಿಲ್ಲೆಯ 143 ಗ್ರಾಮ ಪಂಚಾಯಿತಿ ಲೈಬ್ರರಿಗಳ ಡಿಜಿಟಲೀಕರಣ ಮಾಡುವ ಗುರಿಯಿದೆ. ಪ್ರೌಢಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಕಲ್ಪಿಸಲಾಗುತ್ತಿದೆ.
      ಸುರೇಶ ಬಿ. ಇಟ್ನಾಳ್, ಜಿ.ಪಂ. ಸಿಇಒ
     
     …
     
     (ಕೋಟ್)
     ಸಂಪೂರ್ಣ ಡಿಜಿಟಲ್ ಸಾಕ್ಷರತೆ ಸಾಧಿಸುವ ಇದೊಂದು ಹೊಸ ಪ್ರಯತ್ನವಾಗಿದೆ. ಬಹಳ ಜನರಿಗೆ ಇದರ ಅಗತ್ಯವಿದೆ. ಡಿಜಿಟಲ್ ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಇದರಿಂದ ಸಮುದಾಯಕ್ಕೆ ಸಹಾಯವಾಗುತ್ತಿದೆ.
      ಗುರುಪಾದಪ್ಪ ಶಿರಬಡಗಿ, ಶಿಕ್ಷಣ ಫೌಂಡೇಷನ್ ಜಿಲ್ಲಾ ಸಂಯೋಜಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts