More

    ಜಿಲ್ಲೆಯ ಕುರಿತು ವಿಧಾನಸೌಧ ಮಟ್ಟದಲ್ಲಿ ಚರ್ಚೆ

    ದಾವಣಗೆರೆ: ಕೋವಿಡ್ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಕೈಗೊಂಡ ಕ್ರಮಗಳ ಕುರಿತು ವಿಧಾನಸೌಧ ಮಟ್ಟದಲ್ಲಿ ಚರ್ಚೆಯಾಗುತ್ತಿರುವುದು ಸಂತಸ ತಂದಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

    ದಾವಣಗೆರೆ ಲಾಡ್ಜಿಂಗ್ ಉದ್ದಿಮೆದಾರರ ಸಂಘದಿಂದ ನಗರದ ಅಪೂರ್ವ ನ್ಯೂ ರೆಸ್ಟೋರೆಂಟ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, ಕರೊನಾ ಸಮರದ ಯಶಸ್ವಿ ನಿರ್ವಹಣೆಗಾಗಿ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

    ಮಾರ್ಚ್ 4 ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಅಧಿಕಾರಿಗಳೆಲ್ಲ ತಂಡವಾಗಿ ಕೆಲಸ ಮಾಡಿದ್ದೇವೆ. ಇಲ್ಲಿನ ಉತ್ತಮ ಕೆಲಸವಾಗುತ್ತಿದೆ ಎಂಬ ಮೆಚ್ಚುಗೆಯ ಮಾತುಗಳು ಕೇಳಿಬಂದಿವೆ. ಇದರಿಂದ ಮನಸ್ಸು ತುಂಬಿ ಬಂದಿದೆ ಎಂದರು.

    ಜಿಲ್ಲಾಡಳಿತದ ಜತೆಗೆ ಸಮಾಜದ ವಿವಿಧ ಅಂಗಗಳೂ ಕೈಜೋಡಿಸಿದ್ದರಿಂದ ಇದೆಲ್ಲ ಸಾಧ್ಯವಾಗಿದೆ. ಈ ಯುದ್ಧದಲ್ಲಿ ಹೋಟೆಲ್ ಉದ್ಯಮಿಗಳೂ ಉತ್ತಮ ಸಹಕಾರ ನೀಡಿದ್ದೀರಿ ಎಂದು ಹೇಳಿದರು.

    ಕರೊನಾ ವಿಷಯದಲ್ಲಿ ಪರಿಸ್ಥಿತಿ ಈಗ ನಾಜೂಕಾಗಿದೆ. ಬೆಂಗಳೂರಿನಲ್ಲಂತೂ ಬಹಳ ಸೂಕ್ಷ್ಮವಾಗಿದೆ. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಅವರು ಬೆಳಗ್ಗೆ ದೂರವಾಣಿ ಕರೆ ಮಾಡಿ, ಬಿಎಂಟಿಸಿ ಉದ್ಯೋಗಿಯೊಬ್ಬರು ಬೆಂಗಳೂರಿನ ಪರಿಸ್ಥಿತಿಗೆ ಹೆದರಿ ತಮ್ಮ ಊರಿಗೆ ಬಂದಿದ್ದಾರೆ. ಆತನಿಗೆ ಜ್ವರ ಬಂದಿದೆಯಂತೆ, ಉಸಿರಾಟದ ತೊಂದರೆಯಂತೆ ಎಂದು ತಿಳಿಸಿದರು.

    ಅದಾಗಿ ಒಂದು ಗಂಟೆ 20 ನಿಮಿಷದೊಳಗೆ ಆತನನ್ನು ಚಿಗಟೇರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಆರಂಭಿಸಲಾಯಿತು. ಜಿಲ್ಲಾಡಳಿತದ ಈ ಸ್ಪಂದನೆಗೆ ಹಿರಿಯ ಅಧಿಕಾರಿ ಶಿಖಾ ಮೆಚ್ಚುಗೆ ವ್ಯಕ್ತಪಡಿಸಿದರು.

    ಲಾಡ್ಜಿಂಗ್ ಉದ್ದಿಮೆದಾರರ ಸಂಘದ ಕಾರ್ಯದರ್ಶಿ ನಾರಾಯಣಸ್ವಾಮಿ ವಂದಿಸಿದರು. ಹೋಟೆಲ್ ಉದ್ಯಮಿ ವಿಠ್ಠಲರಾವ್ ಅತಿಥಿಗಳನ್ನು ಪರಿಚಯಿಸಿದರು. ಬಿ.ಕೆ.ಸುಬ್ರಹ್ಮಣ್ಯ ನಿರೂಪಿಸಿದರು.

    ಕರೊನಾದಿಂದ ಹೋಟೆಲ್ ಉದ್ಯಮಕ್ಕೆ ಪೆಟ್ಟು: ಕರೊನಾದಿಂದ ಹೋಟೆಲ್ ಉದ್ಯಮಕ್ಕೆ ಪೆಟ್ಟು ಬಿದ್ದಿದೆ. ಹೆದರಿಕೆಯಿಂದ ಜನರು ಊಟ, ತಿಂಡಿಗೂ ಬರುತ್ತಿಲ್ಲ, ಲಾಡ್ಜ್‌ಗಳನ್ನು ಬಳಸುತ್ತಿಲ್ಲ ಎಂದು ದಾವಣಗೆರೆ ಲಾಡ್ಜಿಂಗ್ ಉದ್ದಿಮೆದಾರರ ಸಂಘದ ಅಧ್ಯಕ್ಷ ಅಣಬೇರು ರಾಜಣ್ಣ ಹೇಳಿದರು.

    ಹೋಟೆಲ್ ಉದ್ಯಮದಲ್ಲಿ ಬಡ ಕಾರ್ಮಿಕರು ಕೆಲಸ ಮಾಡುತ್ತಿದ್ದು ಅವರ ಜೀವನ ನಿರ್ವಹಣೆಗೆ ತೊಂದರೆಯಾಗದಂತೆ ನೋಡಿಕೊಂಡಿದ್ದೇವೆ. ದುಡಿಮೆ, ಹಣವೇ ಮುಖ್ಯವಲ್ಲ ಎಂದರು.

    ಕರೊನಾ ವಿಶ್ವವ್ಯಾಪಿಯಾಗಿದೆ. ಮೊಬೈಲ್, ಲ್ಯಾಪ್‌ಟಾಪ್ ಮುಂತಾದ ತಂತ್ರಜ್ಞಾನವನ್ನು ಬಳಸಿ ಮನೆಯಲ್ಲೇ ಕುಳಿತು ಕೆಲಸ ಮಾಡುವ ಪರಿವರ್ತನೆಯಾಗುತ್ತಿದೆ ಎಂದು ತಿಳಿಸಿದರು.

    ನಮ್ಮ ಸಂಘದಿಂದ ಸಿಎಂ ಪರಿಹಾರ ನಿಧಿಗೆ 2 ಲಕ್ಷ ರೂ. ನೀಡಿದ್ದೇವೆ. 3 ಲಕ್ಷ ರೂ. ವೆಚ್ಚದಲ್ಲಿ ಬಡವರಿಗೆ ಆಹಾರದ ಕಿಟ್ ವಿತರಿಸಿದ್ದೇವೆ ಎಂದು ಮಾಹಿತಿ ನೀಡಿದರು.

    ಜಿಲ್ಲಾಧಿಕಾರಿ ದೈವಭಕ್ತರಿದ್ದಾರೆ, ಅದರಿಂದಾಗಿಯೇ ಅವರ ಎಲ್ಲ ಕಾರ್ಯಗಳಿಗೂ ಯಶಸ್ಸು ಸಿಗುತ್ತಿದೆ, ಆ ಶಕ್ತಿ ಅವರಿಗಿದೆ. ಜಿಲ್ಲಾಡಳಿತದಿಂದ ದೊಡ್ಡ ಸೈನ್ಯ ಕಟ್ಟಿಕೊಂಡು ಕೋವಿಡ್ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ಮಾಡಿದ್ದಾರೆ. ಜಿಲ್ಲೆಯ ಜನರು ಆರೋಗ್ಯವಾಗಿರುವಂತೆ ನೋಡಿಕೊಂಡಿದ್ದಾರೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts