More

    ಹೆಚ್ಚುವರಿ ಆಹಾರಧಾನ್ಯ ನೀಡಲು ರಾಜಕೀಯ

    ದಾವಣಗೆರೆ : ಅನ್ನಭಾಗ್ಯ ಯೋಜನೆಗಾಗಿ ರಾಜ್ಯಕ್ಕೆ ಅಕ್ಕಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿರುವುದನ್ನು ಖಂಡಿಸಿ ಸಿಪಿಐ(ಎಂ) ಜಿಲ್ಲಾ ಘಟಕದಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
     ಮಹಾತ್ಮ ಗಾಂಧಿ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
     ರಾಜ್ಯ ಸರ್ಕಾರ ಜುಲೈ 1ರಿಂದ ಎಲ್ಲ ಬಿಪಿಎಲ್, ಅಂತ್ಯೋದಯ ಕಾರ್ಡ್‌ದಾರರಿಗೆ ಈಗ ನೀಡಲಾಗುತ್ತಿದ್ದ 5 ಕೆಜಿ ಅಕ್ಕಿಯನ್ನು ತಲಾ 10 ಕೆಜಿಗೆ ಹೆಚ್ಚಿಸಲು ನಿರ್ಧರಿಸಿರುವುದು ಸ್ವಾಗತಾರ್ಹವಾಗಿದೆ. ಆದರೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚುವರಿ ಆಹಾರಧಾನ್ಯ ನೀಡುವಲ್ಲಿ ರಾಜಕೀಯ ಮಾಡುತ್ತಿರುವುದು ಖಂಡನೀಯವಾಗಿದೆ ಎಂದರು.
     ರಾಜ್ಯ ಸರ್ಕಾರದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಹೆಚ್ಚುವರಿ ಆಹಾರಧಾನ್ಯ ನೀಡಲು ಭಾರತ ಆಹಾರ ನಿಗಮದ ಅಧಿಕಾರಿಗಳು ಒಪ್ಪಿದ್ದರೂ ಕೂಡ, ಕೇಂದ್ರ ಸರ್ಕಾರ ಬಡವರ ವಿರೋಧಿಯಾಗಿ ನಿಂತಿರುವುದು ಅಕ್ಷಮ್ಯವಾಗಿದೆ. ಇಂಥ ಸಂಕುಚಿತ, ಜನ ವಿರೋಧಿ ರಾಜಕಾರಣವನ್ನು ಬಿಟ್ಟು, ಒಪ್ಪಂದದಂತೆ ಭಾರತ ಆಹಾರ ನಿಗಮದ ಮೂಲಕ ಆಹಾರ ಧಾನ್ಯಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒತ್ತಾಯಿಸಿದರು.
     ರಾಜ್ಯ ಸರ್ಕಾರದ ಈ ಯೋಜನೆಯು ಬಡವರ ಹಸಿವು ನೀಗಿಸಲು ನೆರವಾಗುತ್ತದೆ. ಹಸಿವಿನ ಸೂಚ್ಯಂಕದಲ್ಲಿ ಅತ್ಯಂತ ತಳ ಮಟ್ಟದಲ್ಲಿರುವ ನಮ್ಮ ದೇಶವನ್ನು ಸ್ವಲ್ಪವಾದರೂ ಮೇಲೆತ್ತುವ ಯೋಜನೆಯೆಂಬುದನ್ನು ಕೇಮದ್ರ ಸರ್ಕಾರ ಅರಿಯಬೇಕು ಎಂದು ಹೇಳಿದರು.
     ರಾಜ್ಯದ ಬಹುತೇಕ ಬಿಜೆಪಿ ಸಂಸದರು ಮೌನವಾಗಿರುವುದು ಅವರು ಬಡವರ ವಿರೋಧಿ ಎಂಬುದನ್ನು ಬಯಲುಗೊಳಿಸುತ್ತದೆ ಎಂದು ಟೀಕಿಸಿದರು.
     ಆಹಾರ ಧಾನ್ಯದ ಬದಲು ನಗದು ವರ್ಗಾವಣೆ ಮಾಡುವಂತೆ ಸೂಚಿಸುವ ಬಿಜೆಪಿ ಧೋರಣೆಯು ಬಡವರ ಪರವಾಗಿರದೆ ಲೂಟಿಕೋರ ಕಾರ್ಪೊರೇಟ್ ಕಂಪನಿಗಳ ಪರವಾಗಿದೆ ಎಂದು ಆರೋಪಿಸಿದರು.
     ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ಎಚ್. ಆನಂದರಾಜು, ಆಟೋ ಚಾಲಕರ ಸಂಘದ ರಾಜ್ಯ ನಾಯಕ ಕೆ.ಎಸ್. ಶ್ರೀನಿವಾಸಮೂರ್ತಿ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡ ಇ. ಶ್ರೀನಿವಾಸ, ಕಟ್ಟಡ ಕಾರ್ಮಿಕ ಸಂಘದ ನೇತ್ರಾವತಿ, ರಕ್ಷಿತಾ, ಏಕಾಂತಯ್ಯ ಎಂ., ಹಾಲೇಶನಾಯ್ಕ, ಬಸವರಾಜ್, ಗದಿಗೇಶ್, ರಾಜು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts