More

    ಮೂಲಸೌಲಭ್ಯ ಅಭಿವೃದ್ಧಿ, ಅನುದಾನ ಸದ್ಬಳಕೆ

    ದಾವಣಗೆರೆ : ಮೂಲ ಸೌಲಭ್ಯಗಳ ಅಭಿವೃದ್ಧಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನದ ಸದ್ಬಳಕೆ, ಕಳೆದ ವರ್ಷದ ಬಜೆಟ್‌ನಲ್ಲಿ ಘೋಷಣೆಯಾಗಿ ಅನುಷ್ಠಾನಕ್ಕೆ ಬರದ ಯೋಜನೆಗಳನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳುವುದು, ಪಾಲಿಕೆ ಅಧಿಕಾರಿಗಳು ಮತ್ತು ನೌಕರರ ಯೋಗಕ್ಷೇಮ.
     ಪಾಲಿಕೆಯ 2024-25ನೇ ಸಾಲಿನ ಆಯವ್ಯಯದ ತಯಾರಿಗಾಗಿ ಕೌನ್ಸಿಲ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಎರಡನೇ ಸಭೆಯಲ್ಲಿ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರಿಂದ ವ್ಯಕ್ತವಾದ ಸಲಹೆಗಳಿವು.
     ಪಾಲಿಕೆಯ ಕಾಂಗ್ರೆಸ್ ಸದಸ್ಯ ಚಮನ್‌ಸಾಬ್ ಮಾತನಾಡಿ, ಕಳೆದ ಬಜೆಟ್‌ನಲ್ಲಿ ಸ್ಕೈ ವಾಕ್‌ಗಳ ನಿರ್ಮಾಣ, ಡಿಜಿಟಲ್ ಗ್ರಂಥಾಲಯಗಳ ಸ್ಥಾಪನೆಯ ಬಗ್ಗೆ ಪ್ರಸ್ತಾಪವಾಗಿತ್ತು, ಅವುಗಳು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಗಮನ ಸೆಳೆದರು.
     ಒಂದೆರಡು ಫ್ಲೈ ಓವರ್‌ಗಳನ್ನು ನಿರ್ಮಿಸಬೇಕು. ಅರುಣಾ ಟಾಕೀಸ್ ಬಳಿ ಅಂಡರ್‌ಪಾಸ್ ಮಾಡಬೇಕು. ಸುಸಜ್ಜಿತ ಕಸಾಯಿ ಖಾನೆಗಳನ್ನು ಮಾಡಿ, ಮಾಂಸ ಮಾರುಕಟ್ಟೆಯನ್ನು ಒಂದೇ ಕಡೆಗೆ ನಿರ್ಮಿಸಬೇಕು ಎಂದು ಆಗ್ರಹಿಸಿದರು.
     ಬಿಜೆಪಿ ಸದಸ್ಯೆ ಉಮಾ ಪ್ರಕಾಶ್ ಮಾತನಾಡಿ, ನಮ್ಮ ವಾರ್ಡ್‌ನಲ್ಲಿ ಮಾದರಿ ರಸ್ತೆ ಅಭಿವೃದ್ಧಿಗೆ ಆಯ್ಕೆ ಮಾಡಲಾಗಿತ್ತು, ಆದರೆ ಅದು ಕಾರ್ಯಗತವಾಗಿಲ್ಲ. ಮುಂದಿನ ಬಜೆಟ್‌ನಲ್ಲಾದರೂ ಅನುಷ್ಠಾನಗೊಳಿಸಬೇಕು. ಅಪೂರ್ಣವಾಗಿರುವ ಸಮುದಾಯ ಭವನ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
     ಇತರ ವಾರ್ಡುಗಳಲ್ಲಿ ಸುಸ್ಥಿತಿಯಲ್ಲಿರುವ ಕಾಮಗಾರಿಗಳನ್ನು ತೆರವುಗೊಳಿಸಿ ಹೊಸದಾಗಿ ಮಾಡುತ್ತಿದ್ದಾರೆ. ನಮ್ಮ ವಾರ್ಡ್‌ನಲ್ಲಿ ಅವಶ್ಯಕತೆ ಇದ್ದರೂ ಮಾಡುತ್ತಿಲ್ಲ. ಈ ತಾರತಮ್ಯ ಏಕೆ ಎಂದು ಪ್ರಶ್ನಿಸಿದರು.
     ಮತ್ತೊಬ್ಬ ಸದಸ್ಯ ಶಿವಪ್ರಕಾಶ್ ಮಾತನಾಡಿ, ನಗರ ದೇವತೆ ದುರ್ಗಾಂಬಿಕಾ ದೇವಿ ಜಾತ್ರೆ ಸಮೀಪಿಸುತ್ತಿದೆ. ಜಾತ್ರೆ ಹಿನ್ನೆಲೆಯಲ್ಲಿ ಬಲಿ ಕೊಡುವ ಪದ್ಧತಿಯಿದೆ. ಹಳೆಯ ಭಾಗದಲ್ಲಿ ತೆರೆದ ಚರಂಡಿಗಳು ಇಲ್ಲ. ಪ್ರಾಣಿ ಬಲಿ ಕೊಟ್ಟಾಗ ರಕ್ತ ಹರಿದು ಹೋಗಲು ವ್ಯವಸ್ಥೆ ಇಲ್ಲ. ಆದ್ದರಿಂದ ಹಬ್ಬದ ಒಳಗಾಗಿ ತೆರೆದ ಚರಂಡಿಗಳನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದರು.
     ಕೆ.ಎಂ. ವೀರೇಶ್ ಮಾತನಾಡಿ, ನಿಟ್ಟುವಳ್ಳಿ ಭಾಗದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಮಾಡಬೇಕು. ಆ ಭಾಗದಲ್ಲಿ ಕರಿಯಮ್ಮ ದೇವಸ್ಥಾನದ ಜಾತ್ರೆ 5 ವರ್ಷಗಳಿಗೊಮ್ಮೆ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಸುಣ್ಣ, ಬಣ್ಣ ಬಳಿಯಬೇಕು. ಪೌರ ಕಾರ್ಮಿಕರಿಗೆ ವಿಶ್ರಾಂತಿ ಗೃಹ ನಿರ್ಮಿಸಬೇಕು ಎಂದು ಮನವಿ ಮಾಡಿದರು.
     ಸುಧಾ ಇಟ್ಟಿಗುಡಿ ಮಾತನಾಡಿ, ಪ್ರತಿ ವಾರ್ಡಿಗೆ ಒಂದು ವಾಚನಾಲಯ ಆಗಬೇಕು. ವಿಶಾಖಪಟ್ಟಣಂ ಮಾದರಿಯಲ್ಲಿ ಕಸ ಸಾಗಿಸುವ ವಾಹನಗಳಿಗೆ ಡೀಸೆಲ್ ಬದಲು ವಿದ್ಯುತ್ ಚಾರ್ಜಿಂಗ್ ವ್ಯವಸ್ಥೆ ಜಾರಿಗೆ ತರಬೇಕು ಎಂದು ಸಲಹೆ ಕೊಟ್ಟರು.
     ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಗೋವಿಂದರಾಜು ಮಾತನಾಡಿ, ಪಾಲಿಕೆಯ ಅಧಿಕಾರಿಗಳು, ನೌಕರರಿಗೆ ಆರೋಗ್ಯ ವಿಮೆ ಯೋಜನೆ ಜಾರಿಗೆ ತರಬೇಕು. ಆರೋಗ್ಯ ತಪಾಸಣೆ ಮಾಡಿಸಬೇಕು ಎಂದು ಹೇಳಿದರು.
     ವೆಂಕಾಭೋವಿ ಕಾಲನಿಯಲ್ಲಿರುವ ಸಿದ್ದರಾಮೇಶ್ವರ ದೇವಸ್ಥಾನ ಕಟ್ಟಡ ಶಿಥಿಲವಾಗಿದೆ. ಅದರ ದುರಸ್ತಿಗೆ ಹಣ ಬಿಡುಗಡೆ ಮಾಡಬೇಕು ಎಂದು ಭೋವಿ ಸಮಾಜದ ಮುಖಂಡ ಮನವಿ ಮಾಡಿದರು.
     ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಇಂಗಳೇಶ್ವರ ಮಾತನಾಡಿ, ದಾವಣಗೆರೆ ಹಳೇ ಭಾಗದಲ್ಲಿರುವ ನಾಗಣ್ಣ ಗರಡಿ ಮನೆಯನ್ನು ಅಭಿವೃದ್ಧಿಪಡಿಸಬೇಕು, ಇಲ್ಲವೇ ಗ್ರಂಥಾಲಯ ಮಾಡಬೇಕು. ಕೊಂಡಜ್ಜಿ ರಸ್ತೆಯಲ್ಲಿ ಬೀದಿ ದೀಪಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.
     ಮುಖಂಡ ಸೋಮಲಾಪುರ ಹನುಮಂತಪ್ಪ, ಎಲ್.ಎಂ.ಎಚ್. ಸಾಗರ್, ಮಹ್ಮದ್ ಸಲೀಂ, ಸೋಮಶೇಖರ್ ಮಾತನಾಡಿದರು. ಮೇಯರ್ ವಿನಾಯಕ ಪೈಲ್ವಾನ್, ಉಪ ಮೇಯರ್ ಯಶೋದಾ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ, ಮುಖ್ಯ ಲೆಕ್ಕಾಧಿಕಾರಿ ಪ್ರಿಯಾಂಕಾ ಇದ್ದರು.
     …
     * ಆಯುಕ್ತರ ನಿವಾಸವೇ ಶಿಥಿಲ!
     ಮಹಾನಗರ ಪಾಲಿಕೆಯ ಅಧಿಕಾರಿಗಳ ವಸತಿಗೃಹಗಳು ಶಿಥಿಲಾವಸ್ಥೆ ತಲುಪಿರುವ ವಿಷಯವನ್ನು ಆಯುಕ್ತೆ ರೇಣುಕಾ ಸಭೆಯಲ್ಲಿ ಪ್ರಸ್ತಾಪಿಸಿದರು.
     ಈ ವಸತಿಗೃಹಗಳನ್ನು 1952 ರಲ್ಲಿ ನಿರ್ಮಿಸಲಾಗಿದ್ದು ದುರಸ್ತಿಯ ಅಗತ್ಯವಿದೆ. ನನ್ನ ನಿವಾಸವೂ ಶಿಥಿಲವಾಗಿದೆ. ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗುವುದು ಎಂದು ತಿಳಿಸಿದರು. ಪಾಲಿಕೆ ನೌಕರರಿಗಾಗಿ ಷಟಲ್‌ಕಾಕ್ ಕೋರ್ಟ್ ನಿರ್ಮಿಸುವ ಉದ್ದೇಶವಿದೆ ಎಂದು ತಿಳಿಸಿದರು.
     …
     * 1 ಸಾವಿರ ಮನೆ ಮಂಜೂರು
     ಬಸವ ವಸತಿ ಯೋಜನೆ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆ (ಗ್ರಾಮೀಣ) ಅಡಿಯಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ 1 ಸಾವಿರ ಮನೆಗಳು ಮಂಜೂರಾಗಿವೆ.
     ಈ ಯೋಜನೆಯಡಿ ಫಲಾನುಭವಿಗಳಿಗೆ ಸರ್ಕಾರದಿಂದ ಸಬ್ಸಿಡಿ ಹಣ ಬಿಡುಗಡೆಯಾಗಲಿದೆ. ಈ ಕುರಿತು ಮಹಾನಗರ ಪಾಲಿಕೆಗೆ ಆದೇಶ ಪತ್ರ ಬಂದಿದೆ.
     …
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts