More

    ವೀರಶೈವ ಮಹಾಸಭಾ ಅಧಿವೇಶನಕ್ಕೆ ದಾವಣಗೆರೆ ಸಜ್ಜು

    ರಮೇಶ ಜಹಗೀರದಾರ್ ದಾವಣಗೆರೆ
     ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನ ಮಧ್ಯ ಕರ್ನಾಟಕದ ದಾವಣಗೆರೆ ನಗರದಲ್ಲಿ ಶನಿವಾರ ಆರಂಭವಾಗಲಿದ್ದು ಸಿದ್ಧತೆಗಳು ಪೂರ್ಣಗೊಂಡಿವೆ.
     ರಾಜ್ಯದಲ್ಲಿ ಜಾತಿಗಣತಿ ವಿಚಾರ ಸದ್ದು ಮಾಡುತ್ತಿರುವ ಹೊತ್ತಿನಲ್ಲಿ ಈ ಅಧಿವೇಶನ ಮಹತ್ವ ಪಡೆದುಕೊಂಡಿದೆ. ಸಮುದಾಯದ ಒಳ ಪಂಗಡಗಳಿಗೆ ಕೇಂದ್ರದ ಒಬಿಸಿ ಮೀಸಲಾತಿ ಸಿಗಬೇಕು ಎಂಬುದು ಈ ಸಮಾವೇಶದ ಪ್ರಮುಖ ಆಶಯವಾಗಿದೆ.
     ಹಾನಗಲ್ ಕುಮಾರಸ್ವಾಮಿಗಳು 119 ವರ್ಷಗಳ ಹಿಂದೆ ಆರಂಭಿಸಿದ ಮಹಾಸಭಾ ಈಗ ದೊಡ್ಡದಾಗಿ ಬೆಳೆದಿದೆ. ಸಮಾಜದ ಸಂಘಟನೆ, ಒಗ್ಗಟ್ಟು ಮತ್ತು ಜಾಗೃತಿ ಈ ಸಂಸ್ಥೆಯ ಮೂಲ ಮಂತ್ರವಾಗಿದೆ. ಸಮುದಾಯ ಎದುರಿಸುತ್ತಿರುವ ಸವಾಲುಗಳಿಗೆ ಉತ್ತರ ಕಂಡುಕೊಳ್ಳಲು ಅಧಿವೇಶನಗಳು ಮಹತ್ವದ ಪಾತ್ರ ವಹಿಸುತ್ತ ಬಂದಿವೆ.
     ದಾವಣಗೆರೆಯಲ್ಲಿ 1917 ರಲ್ಲಿ ಮೊದಲ ಬಾರಿ ಅಧಿವೇಶನ ನಡೆದಿತ್ತು. ಆಗ ಕೆ.ಪಿ. ಪುಟ್ಟಣ್ಣ ಚೆಟ್ಟಿ ಅಧ್ಯಕ್ಷರಾಗಿದ್ದರು. 106 ವರ್ಷಗಳ ನಂತರ, ಹಾಲಿ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಅವರ ತವರಿನಲ್ಲೇ ನಡೆಯುತ್ತಿರುವುದು ವಿಶೇಷ.
     ಈ ಹಿನ್ನೆಲೆಯಲ್ಲಿ ಬೆಣ್ಣೆನಗರಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಎರಡು ದಿನಗಳ ಈ ಸಮಾವೇಶಕ್ಕೆ 2 ಲಕ್ಷಕ್ಕೂ ಹೆಚ್ಚು ಜನರು ಬರುವ ನಿರೀಕ್ಷೆಯಿದೆ. ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಫ್ಲೆಕ್ಸ್, ಬ್ಯಾನರ್, ಕಟೌಟ್‌ಗಳು ರಾರಾಜಿಸುತ್ತಿವೆ.
     ಅಧಿವೇಶನ ನಡೆಯಲಿರುವ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ಎರಡು ವೇದಿಕೆಗಳನ್ನು ನಿರ್ಮಿಸಲಾಗಿದೆ. ಪ್ರಧಾನ ವೇದಿಕೆಗೆ ಎಸ್. ನಿಜಲಿಂಗಪ್ಪ ಅವರ ಹೆಸರಿಡಲಾಗಿದ್ದು ಮತ್ತೊಂದು ವೇದಿಕೆಗೆ ಜೆ.ಎಚ್. ಪಟೇಲ್ ವೇದಿಕೆ ಎಂದು ನಾಮಕರಣ ಮಾಡಲಾಗಿದೆ. 400 ಅಡಿ ಉದ್ದ, 220 ಅಡಿ ಅಗಲದ ಪೆಂಡಾಲ್, 100 ಅಡಿ ಅಗಲ, 60 ಅಡಿ ಉದ್ದದ ಪ್ರಧಾನ ವೇದಿಕೆಯನ್ನು ಸಿದ್ಧಪಡಿಸಲಾಗಿದೆ.
     ಒಟ್ಟು 40 ಸಾವಿರಕ್ಕೂ ಹೆಚ್ಚು ಆಸನಗಳನ್ನು ಹಾಕಲಾಗಿದೆ. 10 ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ. ಜತೆಗೆ ಎಲ್‌ಇಡಿ ವಿದ್ಯುದ್ದೀಪಗಳ ಬೆಳಕು ಇರಲಿದೆ. ವಾಹನಗಳ ನಿಲುಗಡೆಗೆ 8-10 ಕಡೆಗಳಲ್ಲಿ ವ್ಯವಸ್ಥೆ ಕೈಗೊಳ್ಳಲಾಗಿದೆ. ಕೃಷಿ ಮತ್ತು ಕೈಗಾರಿಕೆ ವಸ್ತುಪ್ರದರ್ಶನಕ್ಕೆ 120 ಮಳಿಗೆಗಳನ್ನು ತೆರೆಯಲಾಗಿದೆ.
     ನಗರದ ಹೋಟೆಲ್‌ಗಳು, ಕಲ್ಯಾಣ ಮಂಟಪ, ಹಾಸ್ಟೆಲ್, ಅತಿಥಿಗೃಹ, ಪಿಜಿಗಳು, ಅಪಾರ್ಟ್‌ಮೆಂಟ್‌ಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಹರಿಹರದ ಪಂಚಮಸಾಲಿ ಮಠ, ಸಿರಿಗೆರೆ ತರಳಬಾಳು ಮಠ, ಚಿತ್ರದುರ್ಗದ ಮುರುಘಾ ಮಠ, ಹರಪನಹಳ್ಳಿಯ ತೆಗ್ಗಿನ ಮಠ ಇನ್ನಿತರ ಕಡೆಗಳಲ್ಲಿ ತಂಗಲು ವ್ಯವಸ್ಥೆಯಾಗಿದೆ. ಸಮಾವೇಶದ ಯಶಸ್ಸಿಗಾಗಿ 2 ಸಾವಿರ ಸ್ವಯಂ ಸೇವಕರು ಟೊಂಕ ಕಟ್ಟಿ ನಿಂತಿದ್ದಾರೆ.
     ಸಮಾಜದ ವಿವಿಧ ಮಠಗಳ ಜಗದ್ಗುರುಗಳು, ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್, ಕೇಂದ್ರ ಮತ್ತು ರಾಜ್ಯದ ಸಚಿವರು, ಶಾಸಕರು ಸೇರಿ ಗಣ್ಯರ ದಂಡೇ ಭಾಗವಹಿಸಲಿದೆ. ಸಾಹಿತಿಗಳು, ಕಲಾವಿದರು, ನೌಕರರು, ಮಹಿಳೆಯರು, ಯುವಜನರು ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ.
     ನಾಡಿನ ವಿವಿಧೆಡೆಯಿಂದ 1 ಸಾವಿರ ಬಸ್‌ಗಳು, 300 ಕ್ರೂಸರ್ ವ್ಯವಸ್ಥೆ ಮಾಡಲಾಗಿದ್ದು ಖಾಸಗಿ ವಾಹನಗಳಲ್ಲೂ ಜನರು ಬರಲಿದ್ದಾರೆ. ಶನಿವಾರ ಬೆಳಗ್ಗೆ 10.35ಕ್ಕೆ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಅವರನ್ನು ಸಾರೋಟಿನಲ್ಲಿ ಮೆರವಣಿಗೆ ಮಾಡುವ ಮೂಲಕ ಮೊದಲ ದಿನದ ಕಾರ್ಯಕ್ರಮಗಳು ಆರಂಭವಾಗಲಿವೆ.
     …
     
     * ಊಟದ ಮೆನು
     ದಾವಣಗೆರೆ ಅಧಿವೇಶನಕ್ಕೆ ಬರುವವರಿಗೆ ರುಚಿಕಟ್ಟಾದ ಊಟದ ವ್ಯವಸ್ಥೆ ಮಾಡಲಾಗಿದೆ. ಗೋಧಿ ಹುಗ್ಗಿ, ಲಾಡು, ರೊಟ್ಟಿ, ಚಟ್ನಿಪುಡಿ, ಅನ್ನ, ಸಾಂಬರ್, ಮೊಸರು, ಬಜಿ, ಪಲ್ಯ, ಚಿತ್ರನ್ನದ ಸವಿಯನ್ನು ಸವಿಯಬಹುದು. ಊಟ ಬಡಿಸಲು 100 ಕೌಂಟರ್‌ಗಳನ್ನು ತೆರೆಯಲಾಗಿದೆ. ಇದೇ ವೇಳೆ ಬೆಣ್ಣೆದೋಸೆಯನ್ನು ಬ್ರಾೃಂಡ್ ಮಾಡುವ ಉದ್ದೇಶದಿಂದ ಜಿಲ್ಲಾಡಳಿತದಿಂದ ದೋಸೆ ಉತ್ಸವವನ್ನೂ ಆಯೋಜಿಸಿದ್ದು ಅಧಿವೇಶನ ನಡೆಯುವ ಸಮೀಪದಲ್ಲಿ ಮತ್ತು ಗಾಜಿನ ಮನೆ ಆವರಣದಲ್ಲಿ 8ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ.
     …
     
     (ಕೋಟ್)
     ಅಧಿವೇಶನಕ್ಕೆ 2.5 ಲಕ್ಷದಿಂದ 3 ಲಕ್ಷ ಜನರು ಬರಬಹುದು. ಊಟ ಸೇರಿ ಎಲ್ಲ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದ್ದೇವೆ. ಸಮಾಜದ ಸಂಘಟನೆ ನಮ್ಮ ಉದ್ದೇಶವಾಗಿದ್ದು ಒಳ ಪಂಗಡಗಳಿಗೆ ಒಬಿಸಿ ಮೀಸಲಾತಿ ಕೊಡಿಸುವುದು ಪ್ರಮುಖ ಅಜೆಂಡಾ ಆಗಿದೆ. ಪಕ್ಷಾತೀತವಾದ ಈ ಸಮಾವೇಶದ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು.
      ಡಾ. ಶಾಮನೂರು ಶಿವಶಂಕರಪ್ಪ, ಮಹಾಸಭಾ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts