More

    ಶಿಕ್ಷಣದ ಜತೆ ಮಾನವೀಯ ಮೌಲ್ಯ ಅಗತ್ಯ

    ದಾವಣಗೆರೆ : ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಕೌಶಲ್ಯ, ಮಾನವೀಯ ಮೌಲ್ಯ ಹಾಗೂ ಸಾಮಾಜಿಕ ಕಾಳಜಿ ಬೆಳೆಸಿಕೊಳ್ಳಬೇಕು ಎಂದು ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯೆ ಡಾ.ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
     ನಗರದ ಕುವೆಂಪು ಕನ್ನಡ ಭವನದಲ್ಲಿ ಮಂಗಳವಾರ ಡಿ.ಆರ್.ಆರ್. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ 2023-24ನೇ ಸಾಲಿನ ಪ್ರಥಮ ವರ್ಷದ ಹಾಗೂ ಲ್ಯಾಟರಲ್ ಎಂಟ್ರಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಶೈಕ್ಷಣಿಕ ಪೀಠಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
     ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಗಳಿಸಿದ್ದರೂ ಸಂವಹನ ಕೌಶಲ್ಯ ತುಂಬಾ ಮುಖ್ಯ. ಇದು ಉದ್ಯೋಗಕ್ಕೆ ಆಯ್ಕೆ ಮಾಡಿಕೊಳ್ಳುವ ಕಂಪನಿಗಳ ನಿರೀಕ್ಷೆಯೂ ಆಗಿರುತ್ತದೆ. ಸಂವಹನ ಕೌಶಲ್ಯ ಇಲ್ಲದಿದ್ದರೆ ಉದ್ಯೋಗದಿಂದ ವಂಚಿತರಾಗಬೇಕಾಗುತ್ತದೆ ಎಂದು ಹೇಳಿದರು.
     ವಿದ್ಯಾರ್ಥಿ ಜೀವನ ಎಂಬುದು ಒಂದು ರಚನಾತ್ಮಕ ಅವಧಿ. ಪ್ರಸ್ತುತ ಆಧುನಿಕ ಒತ್ತಡದ ಜೀವನದ ನಡುವೆ ಶೈಕ್ಷಣಿಕ ಕೌಶಲ್ಯದ ಜತೆಯಲ್ಲಿ ವ್ಯಕ್ತಿತ್ವ ವಿಕಸನದ ಬೆಳವಣಿಗೆ ಕೂಡ  ಒಂದು ಸವಾಲಾಗಿದೆ. ಇದಕ್ಕಾಗಿ ಜೀವನದ ದಿನಚರಿ ಬಹಳ ಮುಖ್ಯ. ಕ್ರಮಬದ್ಧ ಆಹಾರ ಸೇವನೆ, ಯೋಗ, ಪ್ರಾಣಯಾಮ ಹಾಗೂ ಧ್ಯಾನಕ್ಕೆ ಒತ್ತು ನೀಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
     ಶೈಕ್ಷಣಿಕ ಅವಧಿಯಲ್ಲಿ ಮೊಬೈಲ್, ಲ್ಯಾಪ್‌ಟಾಪ್ ಮೊದಲಾದವುಗಳನ್ನು ಅಗತ್ಯವಿದ್ದರೆ ಶಿಕ್ಷಣಕ್ಕೆ ಮಾತ್ರ ಬಳಸಬೇಕು, ದುಶ್ಚಟಗಳಿಂದ ದೂರವಿರಬೇಕು, ಪ್ರಮುಖವಾಗಿ ಕೌಟುಂಬಿಕ ಹೊಣೆಗಾರಿಕೆಯೊಂದಿಗೆ ಪರಿಸರ ಮತ್ತು ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳಬೇಕು, ವಿದ್ಯಾರ್ಥಿ ಜೀವನದಲ್ಲಿ ಕಲಿತ ಶಿಸ್ತು , ಸಮಯ ಪ್ರಜ್ಞೆ ಹಾಗೂ ಪ್ರಾಮಾಣಿಕತೆ ದೇಶದ ಜವಾಬ್ಧಾರಿಯುತ ಪ್ರಜೆಗಳನ್ನಾಗಿಸುತ್ತದೆ ಎಂದು ತಿಳಿಸಿದರು.
     ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ, ಪ್ರಸಕ್ತ ದಿನಗಳಲ್ಲಿ ಸರ್ಕಾರದ ಪ್ರತಿಯೊಂದು ಇಲಾಖೆಗಳಲ್ಲೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಿಪುಲ ಉದ್ಯೋಗವಕಾಶಗಳಿವೆ.  ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಉನ್ನತ ಹುದ್ದೆ ಪಡೆಯಲು ಉತ್ತಮ ಅಧ್ಯಯನದೊಂದಿಗೆ ಇಚ್ಛಾಶಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
     ಡಿಆರ್‌ಆರ್ ಸರ್ಕಾರಿ ಕಾಲೇಜು ಪ್ರಾಚಾರ್ಯ ಡಾ.ಎ.ಎಂ. ರವಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜಿಗೆ ಇನ್ನೂ ನಾಲ್ಕೈದು ಅಡ್ವಾನ್ಸ್‌ಡ್ ಕೋರ್ಸ್ ಹಾಗೂ ಸುಸಜ್ಜಿತ ಸಭಾಂಗಣ ಹಾಗೂ ಹೆಚ್ಚುವರಿ ಕೊಠಡಿಗಳ ಅಗತ್ಯವಿದ್ದು  ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಸಚಿವರ ಬಳಿ ಈ ಬಗ್ಗೆ ಮಾತನಾಡಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಡಾ.ಪ್ರಭಾ ಅವರಲ್ಲಿ ಮನವಿ ಮಾಡಿದರಲ್ಲದೆ, ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಪಡೆಯಲು ಹಾಗೂ ಇಂಜಿನಿಯರಿಂಗ್ ವೃತ್ತಿಯಲ್ಲಿ ಬೆಳವಣಿಗೆ ಸಾಧಿಸಲು ವಿದ್ಯಾರ್ಥಿಗಳು ಸದಾ ಕ್ರಿಯಾಶೀಲರಾಗಿರಬೇಕು ಎಂದು ತಿಳಿಸಿದರು.
     ಕುಲಸಚಿವ ಎಚ್. ಜಗದೀಶ್, ಇ ಅಂಡ್ ಇ ವಿಭಾಗಾಧಿಕಾರಿ ಎಚ್.ಕೆ. ಮಂಜಪ್ಪ, ಇಸಿಸಿ ವಿಭಾಗಾಧಿಕಾರಿ ಜ್ಯೋತಿಶ್ರೀ, ಕೆ.ಜಿ.ನಿರಂಜನ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts