More

    ಚಂದ್ರಯಾನದ ಯಶಸ್ಸಿಗೆ ಬೆಣ್ಣೆನಗರಿಯಲ್ಲಿ ಸಂಭ್ರಮ

    ದಾವಣಗೆರೆ : ಚಂದ್ರಯಾನ-3 ಯಶಸ್ವಿಯಾಗುತ್ತಿದ್ದಂತೆ ಬೆಣ್ಣೆನಗರಿ ದಾವಣಗೆರೆಯಲ್ಲಿ ಸಂಭ್ರಮದ ವಾತಾವರಣ. ‘ಭಾರತ್ ಮಾತಾ ಕೀ ಜೈ’ ಘೋಷಣೆಗಳು ಮೊಳಗಿದವು. ತ್ರಿವರ್ಣ ಧ್ವಜಗಳು ಹಾರಾಡಿದವು. ಶಾಲಾ ಕಾಲೇಜು ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು. ಪಟಾಕಿಗಳ ಸದ್ದು ಒಂದು ಕಡೆಯಾದರೆ ಸಿಹಿ ಹಂಚುವ ಮೂಲಕ ವಿಜ್ಞಾನಿಗಳ ಸಾಧನೆಗೆ ಸಲಾಂ ಹೇಳಲಾಯಿತು.
     ನಗರದ ಜಯದೇವ ವೃತ್ತದಲ್ಲಿ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಪಟಾಕಿ ಸಿಡಿಸಿ, ರಾಷ್ಟ್ರ ಧ್ವಜ ಹಿಡಿದು ಇಸ್ರೋ ವಿಜ್ಞಾನಿಗಳಿಗೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೈಕಾರ ಹಾಕಿದರು.
     ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಲ್ಯಾಂಡ್ ಆಗುತ್ತಿದ್ದಂತೆ ಶಾಮನೂರಿನಲ್ಲಿರುವ ತಿಮ್ಮಾರೆಡ್ಡಿ ಶಾಲೆಯ ಮಕ್ಕಳು ಕುಣಿದು ಕುಪ್ಪಳಿಸಿದರು. ಡ್ರಮ್ ವಾದ್ಯಗಳನ್ನು ನುಡಿಸಲಾಯಿತು. ಶಾಲೆ ಆವರಣದಲ್ಲಿ ಎಲ್‌ಇಡಿ ಪರದೆಯನ್ನು ಅಳವಡಿಸಲಾಗಿತ್ತು. ನೂರಾರು ವಿದ್ಯಾರ್ಥಿಗಳು ಆ ದೃಶ್ಯವನ್ನು ಕಣ್ತುಂಬಿಕೊಂಡರು. ಚಂದ್ರಯಾನ -3 ಕುರಿತು ಪ್ರಾಚಾರ್ಯ ಡಾ.ಮಾಹಾಂತೇಶ ಆರ್. ಕಮ್ಮಾರ ಮಾಹಿತಿ ನೀಡಿದರು.
     ನಗರದ ತರಳಬಾಳು ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಐತಿಹಾಸಿಕ, ಅವಿಸ್ಮರಣೀಯ ಚಂದ್ರಯಾನ 3ರ ನೇರ ಪ್ರಸಾರ ಕಾರ್ಯಕ್ರಮವನ್ನು ವೀಕ್ಷಿಸಲು ಅನುವು ಮಾಡಿಕೊಡಲಾಗಿತ್ತು. ಪ್ರಾಚಾರ್ಯ ಡಾ. ಎಚ್.ಎನ್. ಪ್ರದೀಪ್ ಇದ್ದರು.
     ಗಡಿಯಾರ ಕಂಬದ ಬಳಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು. ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಶಿವನಗೌಡ ಟಿ. ಪಾಟೀಲ್ ಮಾತನಾಡಿದರು. ಮಹೇಂದ್ರ ಕೊಠಾರಿ,ಪ್ರವೀಣ್ ಜೈನ್, ಲಲಿತ್ ಜೈನ್, ಕಾಂತಿಲಾಲ್, ಆಟೋ ಶೇಖರ್ ಇದ್ದರು.
     …
     * ಎಸ್ಸೆಸ್, ಎಸ್ಸೆಸ್ಸೆಂ ಸಂತಸ
     ಚಂದ್ರಯಾನ-3ರ ಯಶಸ್ಸು ನಮ್ಮ ವೈಜ್ಞಾನಿಕ ಪರಾಕ್ರಮ ಮತ್ತು ದೃಢತೆಗೆ ಸಾಕ್ಷಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಕೇರ್ ಟ್ರಸ್ಟ್‌ನ ಲೈಫ್ ಟ್ರಸ್ಟಿ ಪ್ರಭಾ ಮಲ್ಲಿಕಾರ್ಜುನ ಸಂತಸ ವ್ಯಕ್ತಪಡಿಸಿದ್ದಾರೆ.
     ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪ್ರೋತ್ಸಾಹದಿಂದ ಬಾಹ್ಯಾಕಾಶ ತಂತ್ರಜ್ಞಾನವನ್ನು ಮುಂದುವರಿಸುವ ಬದ್ಧತೆಯೇ ಭಾರತವು ಜಾಗತಿಕ ನಾಯಕನಾಗಲು ಕಾರಣವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ಗಮನಾರ್ಹ ಸಾಧನೆಗಾಗಿ ಮತ್ತು ಆವಿಷ್ಕಾರದ ಗಡಿಗಳನ್ನು ವಿಸ್ತರಿಸಿದ್ದಕ್ಕಾಗಿ ಇಸ್ರೋದ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts