More

    ಕಾಂಗ್ರೆಸ್ ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲಿ

    ದಾವಣಗೆರೆ : ಕಾಂಗ್ರೆಸ್ ಪಕ್ಷದವರು ಚುನಾವಣೆಗೆ ಮುಂಚೆ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಆಗ್ರಹಿಸಿದರು.
     ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ಯಾರಂಟಿ ಯೋಜನೆಗಳನ್ನು ಈಡೇರಿಸುವ ವಿಚಾರದಲ್ಲಿ ವಚನ ಭ್ರಷ್ಟರಾಗಬಾರದು ಎಂದು ಹೇಳಿದರು.
     ಐದು ಗ್ಯಾರಂಟಿ ಯೋಜನೆಗಳನ್ನು ಈಡೇರಿಸಲು ಸಂಪನ್ಮೂಲವನ್ನು ಹೇಗೆ ಹೊಂದಿಸುತ್ತೀರಿ ಎಂಬುದನ್ನು ಜನರ ಮುಂದಿಡಬೇಕು. ಒಂದೊಂದಾಗಿ ಷರತ್ತುಗಳನ್ನು ವಿಧಿಸಿ ಮಾತಿಗೆ ತಪ್ಪಬಾರದು ಎಂದು ಎಚ್ಚರಿಸಿದರು.
     ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಎಂದು ಹೇಳಿದ್ದವರು ಈಗ 12 ತಿಂಗಳ ಸರಾಸರಿ ನೋಡುವುದಾಗಿ ತಿಳಿಸಿದ್ದಾರೆ. ಮಂತ್ರಿಗಳು ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಸಚಿವ ಪ್ರಿಯಾಂಕ ಖರ್ಗೆ ಸೂಪರ್ ಸಿಎಂ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.
     ರಾಜ್ಯದ ಜನರು ವಿದ್ಯುತ್ ದರ ಹೆಚ್ಚಳದ ಶಾಕ್ ಅನುಭವಿಸುತ್ತಿದ್ದಾರೆ. 2 ರಿಂದ 3 ಪಟ್ಟು ಹೆಚ್ಚು ಮೊತ್ತದ ಬಿಲ್ ಬಂದಿವೆ. ಇದರಿಂದ ಜನ ಸಾಮಾನ್ಯರಿಗೆ ಕಷ್ಟವಾಗುತ್ತಿದೆ. ಸರ್ಕಾರ ದರ ಹೆಚ್ಚಳ ನಿರ್ಧಾರವನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು. ಜನರೂ ಕೂಡ ಬಿಲ್ ಪಾವತಿ ಮಾಡಬಾರದು ಎಂದು ಮನವಿ ಮಾಡಿದರು.
     ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡುವುದಾಗಿ ಹೇಳುತ್ತಿದ್ದವರು ಈಗ ಕೇಂದ್ರ ಸರ್ಕಾರದ ಕಡೆಗೆ ಬೆರಳು ತೋರಿಸುವುದು ಸರಿಯಲ್ಲ. ಕೇಂದ್ರ ಸರ್ಕಾರ ನೀಡುವ 5 ಕೆಜಿ ಅಕ್ಕಿಯನ್ನು ಹೊರತುಪಡಿಸಿ ನೀವು ಮಾತು ಕೊಟ್ಟಂತೆ 10 ಕೆಜಿ ಅಕ್ಕಿ ನೀಡಬೇಕು ಎಂದು ಆಗ್ರಹಿಸಿದರು.
     ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ಒದಗಿಸಲಾಗಿದೆ. ಮೊದಲು ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ವ್ಯವಸ್ಥೆಯಾಗಬೇಕು, ಹೆಚ್ಚು ಬಸ್‌ಗಳನ್ನು ಬಿಡಬೇಕು. ಅದು ಆಗದ ಹೊರತು ಪ್ರಯೋಜನವಿಲ್ಲ ಎಂದರು. ಖಾಸಗಿ ಬಸ್ ಮಾಲೀಕರು ಮತ್ತು ಆಟೋದವರಿಗೂ ಪರ್ಯಾಯ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದರು.
     ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತರುವ ಮೂಲಕ ಸರ್ಕಾರ ಅತ್ತೆ-ಸೊಸೆಯಂದಿರ ನಡುವೆ ಜಗಳ ಹುಟ್ಟುಹಾಕಿದೆ. ಕೊಡುವುದಾದರೆ ಎಲ್ಲ ಮಹಿಳೆಯರಿಗೂ ತಲಾ 2 ಸಾವಿರ ರೂ. ನೀಡಿದರೆ ಮಹಿಳಾ ಸಬಲೀಕರಣ ಆಗುತ್ತದೆ ಎಂದು ಹೇಳಿದರು.
     ಯುವ ನಿಧಿ ಯೋಜನೆಯಡಿ ಪ್ರತಿಯೊಬ್ಬ ನಿರುದ್ಯೋಗಿಗೂ ಭತ್ಯೆ ನೀಡಬೇಕು. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ಕಾರ್ಯಕರ್ತೆಯರು, ಎನ್‌ಪಿಎಸ್ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
     ಪ್ರತಿಪಕ್ಷ ನಾಯಕನ ಆಯ್ಕೆಗೆ ಅಧಿವೇಶನ ಆರಂಭದ ವರೆಗೂ ಸಮಯವಿದೆ. ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
     ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ ಹನಗವಾಡಿ ಮಾತನಾಡಿದರು. ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಮುಖಂಡರಾದ ಲೋಕಿಕೆರೆ ನಾಗರಾಜ್, ಬಿ.ಎಸ್. ಜಗದೀಶ್, ರಾಜನಹಳ್ಳಿ ಶಿವಕುಮಾರ್, ಎನ್. ರಾಜಶೇಖರ್, ಪಿ.ಸಿ. ಶ್ರೀನಿವಾಸ್, ಶಿವನಗೌಡ ಪಾಟಿಲ್‌ಲ್, ರಾಜು ವೀರಣ್ಣ, ಪಿ.ಎಸ್. ಬಸವರಾಜ ಇದ್ದರು.
     …
     * ಯಾವುದೇ ತನಿಖೆಗೆ ಸಿದ್ಧ
     ತಾವು ಶಾಸಕರಿದ್ದಾಗ ಪ್ರವಾಹದಿಂದ ಹಾನಿಗೀಡಾದ ಮನೆಗಳಿಗೆ ಪರಿಹಾರ ಕೊಡಿಸುವಲ್ಲಿ ಪಕ್ಷಪಾತ ಮಾಡಿಲ್ಲ. ಆ ಬಗ್ಗೆ ಯಾವುದೇ ತನಿಖೆಗೆ ಸಿದ್ಧ ಎಂದು ರೇಣುಕಾಚಾರ್ಯ ಹೇಳಿದರು.
     ಕಾಂಗ್ರೆಸ್, ಬಿಜೆಪಿ ಎಂದು ನೋಡದೆ ಅರ್ಹರಿಗೆ ಸೌಲಭ್ಯ ನೀಡಿದ್ದೇವೆ, ಬೇಕಿದ್ದರೆ ಪಟ್ಟಿಯನ್ನು ಪರಿಶೀಲಿಸಲಿ, ಫಲಾನುಭವಿಗಳನ್ನು ಕೇಳಲಿ ಎಂದು ತಿಳಿಸಿದರು.
     ಕೆಲವು ಯೋಜನೆಗಳನ್ನು ಸ್ಥಗಿತಗೊಳಿಸುವ ಪ್ರಯತ್ನ ನಡೆದಿದೆ. ಈ ಬಗ್ಗೆ ಮಂಗಳವಾರ ಸಿಎಂ ಭೇಟಿಯಾಗಿ ಮನವಿ ಸಲ್ಲಿಸುವುದಾಗಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts