More

    ಆತ್ಮ ಭಾವದೆಡೆಗೆ ಸಾಗಲು ಭಜನೆ ಸಾಧನ

    ದಾವಣಗೆರೆ : ದೇಹ ಭಾವದಿಂದ ಆತ್ಮ ಭಾವದೆಡೆಗೆ ಸಾಗಲು ಭಜನೆಯೂ ಒಂದು ಸಾಧನ ಎಂದು ಹಿರಿಯ ವ್ಯಂಗ್ಯಚಿತ್ರಕಾರ ಎಚ್.ಬಿ. ಮಂಜುನಾಥ ಹೇಳಿದರು.
     ನಗರದ ಶ್ರೀ ಶಿವಾನಂದ ತೀರ್ಥ ಗುರು ಅಧ್ಯಾತ್ಮ ಮಂದಿರದಲ್ಲಿ ಇತ್ತೀಚೆಗೆ, ಶ್ರೀ ಶಿವಾನಂದ ತೀರ್ಥರ ಜಯಂತ್ಯುತ್ಸವ ಅಂಗವಾಗಿ ಶ್ರೀ ವಾಸವಿ ಭಜನಾ ಮಂಡಳಿಯ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.
     ನಾಮ ರೂಪಾತ್ಮಕವಾದ ಈ ಶರೀರದ ದೇಹ ಭಾವವೇ ಪ್ರಧಾನವಾದಾಗ ಭೋಗ ಲಾಲಸೆಗಳೇ ಮನಸ್ಸಿನಲ್ಲಿ ಸದಾ ಸುಳಿಯುತ್ತವೆ. ಭೋಗ ಪ್ರಧಾನವಾದ ಆಧುನಿಕ ಜೀವನ ಶೈಲಿಯಲ್ಲಿ ಹಣ ಗಳಿಕೆಯೊಂದೇ ಪ್ರಧಾನ ಅಂಶವಾದಾಗ ಮಾನಸಿಕ ಶಾಂತಿ ಕಡಿಮೆಯಾಗುತ್ತದೆ. ಇದು ದೈಹಿಕ ಹಾಗೂ ಮಾನಸಿಕ ಒತ್ತಡಗಳಿಗೆ ಕಾರಣವಾಗುತ್ತದೆ ಎಂದು ತಿಳಿಸಿದರು.
     ಈ ಗುಂಗಿನಿಂದ ತುಸುವಾದರೂ ಹೊರ ಬರಲು ಭಜನೆಯೂ ಒಂದು ವಿಧಾನವಾಗಿದೆ. ಅಬ್ಬರದ ವಾದ್ಯ, ಕರ್ಕಶ ಧ್ವನಿ ಇಲ್ಲದ ಮೃದು ಮಧುರ ಭಜನೆ ಯೋಗ್ಯ. ದೇಹ ಭಾವವು ಸ್ವಾರ್ಥವನ್ನು ಪ್ರೇರೇಪಿಸುತ್ತದೆ, ಆತ್ಮ ಭಾವವು ಪಾರಮಾರ್ಥವನ್ನು ತೋರಿಸುತ್ತದೆ. ದೇಹ ಭಾವವು ತಾನು ತಿಂದುಂಡು ಸಂತೋಷ ಪಡಬೇಕೆಂದರೆ ಆತ್ಮಭಾವವು ಯೋಗ್ಯರಿಗೆ ಹಂಚುವುದರಲ್ಲಿ ಸಂತೋಷ ಕಾಣುತ್ತದೆ ಎಂಬುದನ್ನು ಪುಟ್ಟ ಕತೆಯ ಮೂಲಕ ನಿರೂಪಿಸಿದರು.
     ವನ, ಅರಣ್ಯ, ಗಿರಿ, ಪರ್ವತ, ಸಾಗರ, ತೀರ್ಥ, ಪುರಿ, ಆಶ್ರಮ, ಭಾರತಿ, ಸರಸ್ವತಿ ಎಂಬ ಸನ್ಯಾಸದ ಹತ್ತು ಬಗೆಯನ್ನು ವಿವರಿಸಿ ಶಿವಾನಂದ ತೀರ್ಥರ ಆಧ್ಯಾತ್ಮಿಕ ಪರಂಪರೆಯ ಬಗ್ಗೆ ಹೇಳಿದರು. ಮಂದಿರದ ಕಾರ್ಯದರ್ಶಿ ಶ್ರೀಧರ ಶ್ರೇಷ್ಠಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts