More

    ಅಧ್ಯಾತ್ಮದಿಂದ ಗ್ರಾಮೀಣ ಸಂಸ್ಕೃತಿ ಮರು ನಿರ್ಮಾಣ

    ದಾವಣಗೆರೆ : ಅಧ್ಯಾತ್ಮದಿಂದ ಗ್ರಾಮೀಣ ಸಂಸ್ಕೃತಿಯನ್ನು ಮರು ನಿರ್ಮಿಸುವ ಅವಶ್ಯಕತೆಯಿದೆ ಎಂದು ಅಬುಪರ್ವತ ಬ್ರಹ್ಮಕುಮಾರೀಸ್ ಸಂಸ್ಥೆಯ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ವಿಭಾಗದ ಅಧ್ಯಕ್ಷರಾದ ರಾಜಯೋಗಿನಿ ಬ್ರಹ್ಮಕುಮಾರಿ ಸರಳಾಜಿ ಹೇಳಿದರು.
     ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಿಂದ ನಗರದ ದೇವರಾಜ ಅರಸು ಬಡಾವಣೆಯ ಶಿವಧ್ಯಾನ ಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಅಧ್ಯಾತ್ಮದಿಂದ ಅನ್ನದಾತರ ಸಬಲೀಕರಣ’ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
     ಒಂದು ಕಾಲದಲ್ಲಿ ಕೃಷಿಯಿಂದ ಭಾರತ ಸಮೃದ್ಧ ಹಾಗೂ ಸಂಪದ್ಭರಿತ ದೇಶವಾಗಿತ್ತು. ಋಷಿ ಮತ್ತು ಕೃಷಿ ಸಂಸ್ಕೃತಿ ಎರಡೂ ಸೇರಿದ್ದವು. ಋಷಿ ಎಂದರೆ ಪವಿತ್ರತೆ, ವಿಚಾರದಲ್ಲಿ ಶುದ್ಧತೆ, ಭೂಮಿಯ ಬಗ್ಗೆ ಪ್ರೀತಿ ಹಾಗೂ ಸೇವೆಯಾಗಿದ್ದು, ಇದರಿಂದಾಗಿ ಭೂಮಿಯ ಶಕ್ತಿ ಹೆಚ್ಚಾಗುವ ಜತೆಗೆ ಶುದ್ಧ ಸಾತ್ವಿಕ ಆಹಾರ ಉತ್ಪಾದನೆಯಾಗುತ್ತಿತ್ತು ಎಂದು ತಿಳಿಸಿದರು.
     ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಇಳುವರಿಗಾಗಿ ರಸಗೊಬ್ಬರ ಹಾಗೂ ಕೀಟನಾಶಕಗಳ ಬಳಕೆ ಹೆಚ್ಚಾಗಿದ್ದು, ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆ ಜತೆಗೆ ರೈತರ ಆದಾಯವೂ ಹೆಚ್ಚಾಗಿದೆ. ಆದರೆ, ರೈತರ ಯೋಚನೆ ಮತ್ತು ಪರಿಸ್ಥಿತಿಯ ದಿಕ್ಕು ಬದಲಾಗಿದೆ. ಲೋಭ ಅಧಿಕವಾಗಿ ಸ್ವಾಸ್ಥೃ ಹಾಳಾಗಿದೆ. ಮನಸ್ಸಿನ ಮೇಲಾದ ಪರಿಣಾಮಗಳು ಭೂಮಿಯ ಮೇಲೂ ಆಗುತ್ತಿವೆ. ರೈತರು ಆತ್ಮಹತ್ಯೆಗೆ ಸಿಲುಕುತ್ತಿದ್ದಾರೆ ಎಂದರು.
     ಸರ್ಕಾರಗಳು ಭೌತಿಕ ಸೌಲಭ್ಯ ನೀಡುತ್ತಿದ್ದರೂ ಜ್ಞಾನ ಮೌಲ್ಯದ ಕೊರತೆಯಿದೆ. ಯೋಗಿಕ ಕೃಷಿಯಿಂದ ರೈತರ ಹಾಗೂ ಗ್ರಾಮಗಳ ಅಭಿವೃದ್ಧಿ ಆಗಬೇಕು. ಗ್ರಾಮೀಣ ಸಂಸ್ಕೃತಿ ಉಳಿಸಬೇಕು. ಇದಕ್ಕಾಗಿ ಪ್ರಾಚೀನ ಕೃಷಿ ಪದ್ಧತಿ ಜಾಗೃತಿಗೊಳಿಸುವ ಅವಶ್ಯಕತೆಯಿದ್ದು, ಗ್ರಾಮಗಳಲ್ಲಿ ಯೋಗಿಕ ಕೃಷಿ ಬಗ್ಗೆ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
     ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ವಿಭಾಗದ ರಾಷ್ಟ್ರೀಯ ಸಂಯೋಜಕರಾದ ರಾಜಯೋಗಿನಿ ಬ್ರಹ್ಮಕುಮಾರಿ ಸುನಂದಾಜಿ ದಿಕ್ಸೂಜಿ ಮಾತನಾಡಿ, ಭೂಮಿತಾಯಿಯ ಬಗ್ಗೆ ಶ್ರದ್ಧೆ ಹಾಗೂ ಪ್ರೀತಿಯ ಭಾವನೆ ಇರಬೇಕು. ಇದರಿಂದ ನೂರಕ್ಕೆ ನೂರರಷ್ಟು ಫಲ ದೊರಕುತ್ತದೆ. ಧ್ಯಾನದ ಮೂಲಕ ಒಳ್ಳೆಯ ಫಲ ತೆಗೆಯಲು ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ವಿಭಾಗದಿಂದ ರೈತರಿಗೆ ಪ್ರಶಿಕ್ಷಣ ತರಬೇತಿ ನೀಡಲಾಗುತ್ತಿದೆ ಎಂದರು.
     ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ವಿಭಾಗದ ಉಪಾಧ್ಯಕ್ಷರಾದ ರಾಜಯೋಗಿ ಬ್ರಹ್ಮಕುಮಾರ ರಾಜು ಅವರು ವಿಶೇಷ ಉಪನ್ಯಾಸ ನೀಡಿದರು. ಸಂಸ್ಥೆಯ ಹಳಿಯಾಳದ ರಾಜಯೋಗಿನಿ ಬ್ರಹ್ಮಕುಮಾರಿ ಪದ್ಮಕ್ಕ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಇಲಾಖೆ ಉಪ ನಿರ್ದೇಶಕ ಎಸ್. ಅಶೋಕ್, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಟಿ.ಎನ್. ದೇವರಾಜ್, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ತೇಜಸ್ವಿ ವಿ. ಪಟೇಲ್, ರಾಜ್ಯ ರೈತ ಸಂಘದ ಉಪಾಧ್ಯಕ್ಷ ಅರುಣ್‌ಕುಮಾರ್ ಕುರುಡಿ ಇತರರು ಇದ್ದರು.
     ಬಿ.ಕೆ. ಉಮಾದೇವಿ ಸ್ವಾಗತಿಸಿದರು, ಸಂಸ್ಥೆಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts