More

    ನೇಹಾ ಹತ್ಯೆ ಖಂಡಿಸಿ ಎಬಿವಿಪಿ ಪ್ರತಿಭಟನೆ

    ದಾವಣಗೆರೆ : ಹುಬ್ಬಳ್ಳಿಯಲ್ಲಿ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ್ ಭೀಕರ ಹತ್ಯೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯ ಕರ್ತರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
     ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ನ್ಯಾಯ ಬೇಕು, ಹಂತಕನಿಗೆ ಶಿಕ್ಷೆಯಾಗಬೇಕು ಎಂದು ಘೋಷಣೆ ಕೂಗಿದರು. ನಂತರ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
     ಜ್ಞಾನ ದೇಗುಲದಲ್ಲಿ ಹಾಡಹಗಲೇ ವಿದ್ಯಾರ್ಥಿನಿಯ ಬರ್ಬರ ಹತ್ಯೆ ನಡೆದಿರುವುದು ತೀವ್ರ ಖಂಡನೀಯ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವುದಕ್ಕೆ ನಿದರ್ಶನ ಎಂದು ಪ್ರತಿಭಟನಾಕಾರರು ದೂರಿದರು.
     ಲವ್ ಜಿಹಾದ್‌ಗಾಗಿ ವಿದ್ಯಾರ್ಥಿನಿಯನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ ಆರೋಪಿಯು ಪ್ರೀತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಯಾವುದೇ ಕಾನೂನು ಭಯವಿಲ್ಲದೆ ಆಕೆಯ ಕಾಲೇಜಿಗೆ ಅಕ್ರಮವಾಗಿ ಪ್ರವೇಶಿಸಿ ಹತ್ಯೆಗೈದಿದ್ದಾನೆ ಎಂದು ಆರೋಪಿಸಿದರು.
     ಘಟನೆಯು ರಾಜ್ಯದ ವಿದ್ಯಾರ್ಥಿ ಸಮುದಾಯದಲ್ಲಿ ಭಯದ ವಾತಾವರಣ ಮೂಡಿಸಿದ್ದು, ಪೊಲೀಸರು ಸೂಕ್ತ ತನಿಖೆ ನಡೆಸಿ ಆರೋಪಿಗೆ ಉಗ್ರ ಶಿಕ್ಷೆ ವಿಧಿಸಿ ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
     ರಾಜ್ಯಾದ್ಯಂತ ಶಾಲಾ-ಕಾಲೇಜುಗಳ ಬಳಿ ಪೊಲೀಸರು ಮಫ್ತಿಯಲ್ಲಿ ಕಾರ್ಯನಿರ್ವಹಿಸಿ ಸಂಭಾವ್ಯ ಘಟನೆಗಳನ್ನು  ತಡೆಯಲು ಪ್ರಯತ್ನಿಸಬೇಕು. ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು ಎಂದು ಒತ್ತಾಯಿಸಿದರು.
     ಎಬಿವಿಪಿ ನಗರ ಕಾರ್ಯದರ್ಶಿ ಅಲೋಕ್, ಜಂಟಿ ಕಾರ್ಯದರ್ಶಿ ಮೋಹಿತ್, ಮಂಜುನಾಥ್, ಕೆ.ಆರ್. ವರ್ಷನ್, ಬಿ.ಕೆ. ತನುಷಾ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts