More

    ಭಕ್ತಿ, ಬಂಡಾಯಕ್ಕೆ ಒಂದೇ ನೆಲಗಟ್ಟು: ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಗೀತಾಮಣಿ ಅಭಿಮತ

    ಮಂಡ್ಯ: ಭಕ್ತಿ ಮತ್ತು ಬಂಡಾಯ ವಚನಗಳು ಒಂದೇ ನೆಲೆಗಟ್ಟಿನಲ್ಲಿವೆ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಗೀತಾಮಣಿ ಅಭಿಪ್ರಾಯಪಟ್ಟರು.
    ನಗರದ ವೀರಶೈವ ವಿದ್ಯಾರ್ಥಿ ನಿಲಯದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ’ಭಕ್ತಿ ವಚನಗಳಲ್ಲಿ ಬಂಡಾಯ’ ಕುರಿತು ಉಪನ್ಯಾಸ ನೀಡಿದರು. ಅರಮನೆ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಧಿಕ್ಕರಿಸಿ ಜನಸಾಮಾನ್ಯರ ಬಳಿ ಬಂದ ವಚನ ಸಾಹಿತ್ಯವೇ ಬಂಡಾಯದ ಮೂಲ ಎಂದರು.
    ಮನುಷ್ಯ ತಾನು ಕಟ್ಟಿಕೊಂಡ ವ್ಯವಸ್ಥೆಯನ್ನು ಭೇದಿಸಲು, ಒಂದು ಸುಧಾರಿತ ವ್ಯವಸ್ಥೆಗೆ ತರಲು ಸ್ವತಃ ನಿರ್ಮಿಸಿದ ಮನಸ್ಥಿತಿಯನ್ನು ಪರಿವರ್ತಿಸಿಕೊಳ್ಳುವ ಒಂದು ಕ್ರಾಂತಿಯೇ ಬಂಡಾಯವಾಗಿದೆ. ಭಕ್ತಿಯ ಸೊಡರಿನಲ್ಲಿ ಬೆಳಕನ್ನು ಚೆಲ್ಲುವ ಸೂಕ್ಷ್ಮ ಪ್ರಯತ್ನವನ್ನು ಶರಣರು ಮಾಡಿದರು. ಭಕ್ತಿ-ಬಂಡಾಯದಿಂದ 12ನೇ ಶತಮಾನದಲ್ಲಿ ಪವಾಡಗಳೇ ನಡೆದವು. ಮಾತು ಬಾರದವರಿಗೆ ಮಾತು, ದನಿ-ಧ್ವನಿ ಇಲ್ಲದವರಿಗೆ ಅವಕಾಶ, ಗುರುತಿಲ್ಲದವರು ಅನುಭವಮಂಟಪಕ್ಕೆ ಬಂದು ತಮ್ಮನ್ನು ತಾವು ಗುರುತಿಸಿಕೊಳ್ಳಲು ಕಾರಣವಾಗಿದ್ದು ವಚನ ಸಾಹಿತ್ಯ ಎಂದು ವಿವರಿಸಿದರು.
    ’ವಚನಗಳು ಮತ್ತು ಶರಣರು’ ಕುರಿತು ಮಾತನಾಡಿದ ಯುವ ಸಾಹಿತಿ ದೀಕ್ಷಿತ್ ನಾಯರ್, ವಚನ ಸಾಹಿತ್ಯ ಸಾರ್ವಕಾಲಿಕ ಸತ್ಯ. ಜನರ ತಲ್ಲಣಗಳಿಗೆ ಸಾಂತ್ವನ ಹೇಳುವ, ವರ್ತಮಾನಕ್ಕೆ ಸ್ಪಂದಿಸುವಂತಹ ತಾಕತ್ತು ಇರುವುದು ವಚನ ಸಾಹಿತ್ಯಕ್ಕೆ ಮಾತ್ರ. ಇಡೀ ಜಗತ್ತಿನ ಯಾವುದೇ ರಾಷ್ಟ್ರದಲ್ಲಿ ಇಂತಹ ಸಾಹಿತ್ಯ ಇಲ್ಲ ಎಂಬುದಕ್ಕೆ ಕನ್ನಡಿಗರಾದ ನಾವು ಹೆಮ್ಮೆ ಪಡಬೇಕು. ಬಸವಣ್ಣ, ಅಕ್ಕಮಹಾದೇವಿ, ಅಲ್ಲಮ ಮುಂತಾದ ಶಿವಶರಣರ ವಚನಗಳು ಭಾರತೀಯ ಹಾಗೂ ವಿದೇಶಿ ಭಾಷೆಗಳಿಗೆ ಅನುವಾದವಾಗುತ್ತಿರುವುದನ್ನು ನೋಡಿದರೆ ಕನ್ನಡದ ಸೊಬಗು ಎಂತಹುದು ಎಂಬುದನ್ನು ಅರ್ಥಮಾಡಿಕೊಳ್ಳಬಹುದು ಎಂದರು.
    ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್.ಶಿವಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ‘ಭಾವ ಬೆಳಕು’ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮವನ್ನು ತುಮಕೂರು ಸಿದ್ದಾರ್ಥ ಮೆಡಿಕಲ್ ಕಾಲೇಜು ನಿವೃತ್ತ ಪ್ರಾಧ್ಯಾಪಕ ಡಾ.ಎಂ.ಎಸ್.ರಾಜಣ್ಣ ಉದ್ಘಾಟಿಸಿದರು. ವೈದ್ಯಾಧಿಕಾರಿ ಡಾ.ವರ್ಷಾ ಹೂಗಾರ್ ಮತ್ತು ನೇತ್ರಾವತಿ ವಚನ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
    ಇದೇ ವೇಳೆ ಸಾಹಿತಿ ಡಾ.ಪ್ರದೀಪ್ ಕುಮಾರ್ ಹೆಬ್ರಿ ಅವರ ವಚನೋಂಕಾರ, ವಚನ ಪರುಷ ಹಾಗೂ ಬಸವ ಬೆಳಕು ಕೃತಿಗಳನ್ನು ಜಿಲ್ಲಾ ಬಸವ ಸಮಿತಿ ಅಧ್ಯಕ್ಷ ಎಂ.ಬಿ.ರಾಜಶೇಖರ್ ಲೋಕಾರ್ಪಣೆಗೊಳಿಸಿದರು. ಹುಲಿಯೂರುದುರ್ಗದ ಹಿರಿಯ ಯೋಗ ಪಟು ಎಂ.ಎಸ್.ಗಂಗಮ್ಮ ಅವರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts