More

    ನಾವೆಲ್ಲ ವಿಶ್ವಮಾನವರಾಗೋಣ…

    ಚೀನಾ ಅಥವಾ ಯುರೋಪ್ ಅಥವಾ ಗಲ್ಪ್ ರಾಷ್ಟ್ರಗಳಲ್ಲಿ ರೋಗ ಬಂದರೆ ನಮಗೇನಂತೆ ಅನ್ನುವ ಹಾಗಿಲ್ಲ. ಅವರೂ ನಮ್ಮವರೇ.ನಮ್ಮವರು ಅಲ್ಲಿಂದ ವಾಪಸ್ ಬರುವಾಗ ಧನಸಂಪತ್ತು ಮತ್ತು ಒಳಿತುಗಳನ್ನು ತರಬೇಕೆ ವಿನಾ ಅಲ್ಲಿನ ರೋಗ ರುಜಿನಗಳು ಹಾಗೂ ಸೋಂಕುಗಳನ್ನಲ್ಲ.

    ‘ವಸುಧೈವ ಕುಟುಂಬಕಂ’ ಎಂಬುದು ಒಂದು ಸುಂದರವಾದ ಚಿಂತನೆ. ವಸುಧೆಯಲ್ಲಿರುವವರೆಲ್ಲರೂ ಒಂದೇ ಕುಟುಂಬದ ಸದಸ್ಯರು. ಸುಖ-ದುಃಖ ಹಂಚಿಕೊಂಡು ಸಹಬಾಳ್ವೆಯಿಂದ ಬದುಕಿ ಬಾಳುವ ದೃಷ್ಟಿಕೋನವಿರಬೇಕು. ಒಂದೇ ರಾಷ್ಟ್ರದಲ್ಲಿರುವವರೂ ಪ್ರಾದೇಶಿಕ ಭಿನ್ನತೆ, ಭಾಷಾವಾರು ಪ್ರತ್ಯೇಕತೆ, ರಾಜಕೀಯ ಪ್ರೇರಿತ ಪ್ರತ್ಯೇಕತೆಗಳಿಂದ ಗುರುತಿಸಿಕೊಳ್ಳಲು ಅಪೇಕ್ಷಿಸುತ್ತಾರೆ. ಆದರೂ ಸಹಬಾಳ್ವೆಯೇ ಶ್ರೇಷ್ಠವೆಂದು ತಿಳಿದುಕೊಳ್ಳಬೇಕು. Unity in diversity ಅಂದರೆ ವೈವಿಧ್ಯತೆಯಲ್ಲಿ ಏಕತೆ ಎಂಬುದು ಬಹುಬಳಕೆಯ ಆಪ್ಯಾಯಮಾನವಾದ ಶಬ್ದ. ಆದರೆ ವಿಶ್ವದಲ್ಲಿ ಎಂದಾದರೂ ಬಹುತ್ವವನ್ನು ಇಟ್ಟುಕೊಂಡು ಏಕತೆ ಸಾಧ್ಯವೇ? ವಿಶ್ವಮಾನವರಾಗಲು ಸಾಧ್ಯವೇ?

    ನಾವೆಲ್ಲ ವಿಶ್ವಮಾನವರಾಗೋಣ...ವಿಶ್ವದಲ್ಲಿ ‘ನಾವು’ ಅನ್ನುವ ಭಾವನೆಯ ಬದಲು ‘ನಾನು’ ಎಂಬ ಭಾವನೆಯೇ ಇದೆ. ಆದ್ದರಿಂದಲೇ ರಾಷ್ಟ್ರೀಯ ಪ್ರಜ್ಞೆ, ಬಹುರಾಷ್ಟ್ರೀಯ ಪ್ರಜ್ಞೆಯು ಬಲಿಷ್ಠವಾಗಿದೆ. ಬಹುಶಃ ಎರಡು ಮಹಾಯುದ್ಧಗಳಾದಾಗ ವಿಶ್ವಕುಟುಂಬದ ಪರಿಕಲ್ಪನೆ ಆರಂಭವಾಯಿತು. ಕೆಲವು ದೇಶಗಳು ಯುದ್ಧ ಮಾಡಿದರೆ ಇನ್ನಿತರ ದೇಶಗಳು ಆ ಸಾಂರ್ದಭಿಕ ಹೊಡೆತವನ್ನು ಅನುಭವಿಸಿ ಅನಿವಾರ್ಯವಾಗಿ ಯುದ್ಧದಲ್ಲಿ ಭಾಗಿಯಾದವು. ಕೆಲವರು ಒತ್ತಡದಿಂದ (ಭಾರತ ದೇಶದಂತೆ) ಭಾಗವಹಿಸಿದ ಪರಿಣಾಮ ಲಕ್ಷಾಂತರ ಮಂದಿ ಅಸುನೀಗಿದರು. ಭೌತಿಕ ನಷ್ಟದ ಲೆಕ್ಕಾಚಾರವಂತೂ ಅವರ್ಣನೀಯ. ಈ ಸಮಯದಲ್ಲಿ ಶಾಂತಿಗಾಗಿ ವಿಶ್ವಸಂಸ್ಥೆ ಸ್ಥಾಪನೆಯಾಗಿ ಇನ್ನು ಮುಂದೆ ಯುದ್ಧಕ್ಕೆ ಮುನ್ನ ಮಾತುಕತೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳುವ ತೀರ್ಮಾನ ಮಾಡಿದರು. ಹೀಗೆ ವಿಶ್ವ ಸಂಘಟನೆಯ ಬೀಜಾಂಕುರವಾಯಿತು.

    ಭಾರತದಲ್ಲಿ ಪ್ರಚಲಿತವಿರುವ ‘ಲೋಕಾಃ ಸಮಸ್ತಾಃ ಸುಖಿನೋ ಭವಂತು’ – ಈ ಮಂತ್ರ ಮತ್ತು ಪ್ರಾರ್ಥನೆಯು ಅತ್ಯಂತ ಆಪ್ಯಾಯಮಾನವಾದದ್ದು. ಆದರೆ ಅನುಸರಣೆಗೆ ಕಷ್ಟವೇ ಸರಿ. ಉದಾಹರಣೆಗೆ- ಒಬ್ಬ ವ್ಯಕ್ತಿ ನಿತ್ಯಪೂಜೆಯಲ್ಲಿ ಈ ಮಂತ್ರೋಚ್ಚಾರಣೆ ಮಾಡಿ ‘ನೆರೆಮನೆಯ ವೆಂಕನನ್ನು ಬಿಟ್ಟು’ ಅನ್ನುತ್ತಿದ್ದನಂತೆ. ಕಾರಣ ಅವರಿಬ್ಬರಿಗೂ ಜಗಳವಿತ್ತು. ‘ಲೋಕಕ್ಕೆಲ್ಲಾ ಸುಖವಾಗಲಿ ಆದರೆ ನನ್ನ ಶತ್ರುವಿಗಲ್ಲ’ ಎಂಬ ಭಾವನೆಯಿಂದ ಹೇಳುತ್ತಿದ್ದನಂತೆ. ಹೀಗೆ ಘನ ಉದ್ದೇಶ ಮತ್ತು ಸಂಕಲ್ಪವಿದ್ದರೂ ತಾನು ಸುಖವಾಗಿದ್ದರೆ ಸಾಕು, ಇತರರ ಗೊಡವೆ ಬೇಡ ಎಂಬ ಇಂಥ ಭಾವನೆಯಿಂದ ಮಾಡುವ ಪ್ರಾರ್ಥನೆಯು ದೊಡ್ಡ ಬಲೂನಿಗೆ ಸೂಜಿಮೊನೆಯಿಂದ ಚುಚ್ಚಿ ಸ್ಪೋಟಿಸಿದಂತೆಯೇ ಸರಿ. ಎಲ್ಲರೂ ಎಂಬ ಭಾವನೆಗೆ ಸಮಷ್ಟಿಯ ನೆಮ್ಮದಿ, ಸಹಬಾಳ್ವೆ ಮತ್ತು ಶಾಂತಿ ಅಗತ್ಯ. ಅಲ್ಲಿ ದ್ವೇಷ, ಅಸೂಯೆ ಮತ್ತು ಸ್ಪರ್ಧೆಯ ಮನೋಭಾವವಿರಬಾರದು.

    ಜೈನಧರ್ಮದ ನಿತ್ಯ ಶಾಂತಿಮಂತ್ರ ಹೀಗಿದೆ –

    ಕ್ಷೇಮಂ ಸರ್ವ ಪ್ರಜಾನಾಂ ಪ್ರಭವತು ಬಲವಾನ್ ಧಾರ್ವಿುಕೋ ಭೂಮಿಪಾಲಃ|

    ಕಾಲೇ ಕಾಲೇ ಚ ಸಮ್ಯಗ್ ವರ್ಷತು ಮಘವಾ ವ್ಯಾಧಯೋ ಯಾಂತು ನಾಶಂ|

    ದುರ್ಭಿಕ್ಷಂ ಚೋರಮಾರೀ ಕ್ಷಣಮಪಿ ಜಗತಾಂ ಮಾಸ್ಮಭೂಜ್ಜೀವಲೋಕೇ|

    ಜೈನೇಂದ್ರಂ ಧರ್ಮಚಕ್ರಂ ಪ್ರಭವತು ಸತತಂ ಸರ್ವಸೌಖ್ಯಪ್ರದಾಯೀ ||

    ಅರ್ಥ- ಸಮಸ್ತ ಪ್ರಜೆಗಳಿಗೆ ಕ್ಷೇಮವಾಗಲಿ, ದೊರೆಯು ಬಲಿಷ್ಠನೂ, ಧಾರ್ವಿುಕನೂ ಆಗಲಿ, ದೇವೇಂದ್ರನು ಕಾಲಕಾಲದಲ್ಲಿ ಚೆನ್ನಾಗಿ ಮಳೆಯನ್ನು ಸುರಿಸಲಿ, ರೋಗಗಳು ನಾಶವನ್ನು ಹೊಂದಲಿ, ಲೋಕಗಳಿಗೆ ದುರ್ಭಿಕ್ಷವೂ, ಮಾರಿಯೂ ಕ್ಷಣಕಾಲವೂ ಉಂಟಾಗದಿರಲಿ, ಎಲ್ಲರಿಗೂ ಸೌಖ್ಯವನ್ನು ಉಂಟುಮಾಡಲಿ.’ ಜೈನಧರ್ವಿುಯರು ಈ ಮಂತ್ರವನ್ನು ನಿತ್ಯವೂ ಪ್ರಾರ್ಥಿಸುತ್ತಾರೆ.

    ಶಾಂತಿಮಂತ್ರವು ಸಂಸಾರಿಗಳಾದ ನಮಗೆ – ನಿಮಗೆ ಅಷ್ಟೇ ಅಲ್ಲ ಇಡೀ ಭೂಲೋಕದಲ್ಲಿರುವ ಸಕಲ ಪ್ರಾಣಿ-ಪಕ್ಷಿಗಳಿಗೆಲ್ಲ ಶಾಂತಿ ದೊರೆಯಲೆಂಬ ಭಾವನೆಯನ್ನು ಒಡಲಲ್ಲಿ ಹೊಂದಿರುತ್ತದೆ. ಇದಕ್ಕಿಂತ ಮಿಗಿಲಾದ ಅಪೇಕ್ಷೆ ಬೇರೊಂದು ಇರಲಾರದು. ಇದನ್ನೇ ಇನ್ನೊಂದು ಮಾತಿನಲ್ಲಿ ಹೇಳುವುದಾದರೆ – ‘ವಸುಧೈವ ಕುಟುಂಬಕಂ’ ಅಥವಾ ‘ಲೋಕಾಃ ಸಮಸ್ತಾಃ ಸುಖಿನೋ ಭವಂತು’ ಎಂಬ ಈ ಉದಾತ್ತ ಭಾವನೆಯನ್ನು ಮಂತ್ರಪೂರ್ವಕವಾಗಿ ದೇವತಾಪೂಜೆಯ ಕೊನೆಯಲ್ಲಿ ಹೇಳುತ್ತಾರೆ.

    ಒಟ್ಟಿನಲ್ಲಿ ಜಗತ್ತಿನಲ್ಲಿರುವ ಸಕಲಜೀವರಿಗೆ-ಮನುಜರಿಗೆ, ಪ್ರಾಣಿ-ಪಕ್ಷಿಗಳಿಗೆ, ಜೀವ-ಜಂತುಗಳಿಗೆ, ಮರ-ಗಿಡ-ಬಳ್ಳಿಯಾದಿಯಾಗಿ ಸಂಪೂರ್ಣ ಜೀವಕೋಟಿಗೆ ಶಾಂತಿ-ಸುಖ ಪ್ರಾಪ್ತವಾಗಲೆಂದು ಬಯಸುವುದೇ ಮಹಾಶಾಂತಿಮಂತ್ರ ಪಠನದ ಗುರಿ, ಹೃದಯ ವೈಶಾಲ್ಯ, ಸಕಲ ಜೀವರಾಶಿಗಳ ಸುಖ- ದುಃಖಗಳು ಅವುಗಳು ಸಂಪಾದಿಸಿದ ಕರ್ಮಗಳ ಫಲರೂಪವಾಗಿ ಅನುಭವಕ್ಕೆ ಬರುತ್ತವೆ.

    ಶಾಂತಿಮಂತ್ರ ಪಠಣದಲ್ಲಿಯೂ ಒಂದೊಂದೇ ದೋಷಗಳನ್ನು ಹೆಸರಿಸಿ ಅವು ನಾಶವಾಗಲಿ ಎಂದು ಹೇಳುವ ಪದ್ಧತಿಯಿದೆ. ಈ ಮಂತ್ರಗಳಲ್ಲಿ ವಿಶ್ವಮಾನವರಾಗಬೇಕಾದ ಸಂದೇಶವಿದೆ, ಪ್ರಾರ್ಥನೆಯಿದೆ, ಹರಕೆಯಿದೆ ಮತ್ತು ದೃಢವಾದ ಸಂಕಲ್ಪವಿದೆ. ಉದಾಹರಣೆಗೆ ‘ಕ್ರೋಧಂ’ | ಛಿಂದ ಛಿಂದ, ಭಿಂದ ಭಿಂದ | ‘ಪಾಪಂ’ | ಛಿಂದ ಛಿಂದ, ಭಿಂದ ಭಿಂದ | ಅಂದರೆ ಕೋಪ, ಪಾಪವು ಚಿಂದಿ ಚಿಂದಿಯಾಗಿ, ಭಿನ್ನ ಭಿನ್ನವಾಗಿ ನಾಶವಾಗಿ ಹೋಗಲಿ ಎಂಬ ಭಾವ. ಈ ಪೂರ್ತಿ ಮಂತ್ರದಲ್ಲಿರುವ ವಿಶ್ವಶಾಂತಿಯ ಭಾಗವನ್ನಷ್ಟೇ ಈ ಲೇಖನದಲ್ಲಿ ಓದುಗರ ಗಮನಕ್ಕೆ ತರಲು ಬಯಸುತ್ತೇನೆ. ‘ಅಪಮೃತ್ಯು, ಸರ್ವಮೃತ್ಯು, ಸರ್ವದುಷ್ಟಗ್ರಹ, ಸರ್ವಭೂತಗ್ರಹ, ಸರ್ವಶತ್ರುಭಯ, ಸರ್ವಅಗ್ನಿಭಯ, ಅನ್ನ-ಖಾದ್ಯ-ಲೇಹ್ಯಾದ್ಯರಿಷ್ಟ, ಸರ್ವಜ್ವರರೋಗ, ಅತಿಸಾರ, ಸರ್ವಕ್ಷಯವ್ಯಾಧಿ, ಸರ್ವಗುಲ್ಮವ್ಯಾಧಿ, ಸರ್ವಹೃದ್ರೋಗ, ಪಂಚಖಾಸವ್ಯಾಧಿ’ | ಛಿಂದ ಛಿಂದ, ಭಿಂದ ಭಿಂದ | ಹೀಗೆ ಎಲ್ಲಾ ರೋಗಗಳು ನಾಶವಾಗಿ ಪ್ರಜೆಗಳು ಸುಖಿಗಳಾಗಿ ಬಾಳಲೆಂದು ಪ್ರಾರ್ಥಿಸಿದ ಬಳಿಕ ಮುಂದೆ ‘ಸರ್ವಜನಾನಂದಂ ಕುರು ಕುರು, ಸರ್ವಗೋಕುಲಾನಂದಂ ಕುರು ಕುರು, ಸರ್ವಗ್ರಾಮಾನಂದಂ ಕುರು ಕುರು, ಸರ್ವನಗರಾನಂದಂ ಕುರು ಕುರು, ಸರ್ವರಾಷ್ಟ್ರಾನಂದಂ-ಸರ್ವವಿಶ್ವಾನಂದಂ ಕುರು ಕುರು ಸ್ವಾಹಾ’ ಎಂದರೆ ಸರ್ವಜನರಿಗೆ, ಸರ್ವಗ್ರಾಮಗಳಿಗೆ, ಸರ್ವನಗರ-ರಾಷ್ಟ್ರ-ವಿಶ್ವಗಳಿಗೆ ಒಳಿತಾಗಲೆಂದು ಹೇಳಲಾಗುತ್ತದೆ.

    ಜೈನಧರ್ವನುಸಾರ ದೇವಪೂಜೆಯು ಭಗವಂತನನ್ನು ಪ್ರಸನ್ನಗೊಳಿಸುವುದಕ್ಕಲ್ಲ, ಪೂಜೆ ಮತ್ತು ಧ್ಯಾನವನ್ನು ಕೇವಲ ನಮ್ಮ ಭಾವಶುದ್ಧಿಗಾಗಿ ಮಾಡುತ್ತೇವೆ. ಗುಣಗಳನ್ನು ಮನನಮಾಡುವುದರಿಂದ ಮನಸ್ಸಿನ ಭಾವಗಳು ಗುಣದ ಪ್ರೇಮಿಯಾಗುವವು ಮತ್ತು ಅವಗುಣಗಳನ್ನು ಮನನಮಾಡುವುದರಿಂದ ಮನಸ್ಸಿನ ಭಾವಗಳು ದೂಷಿತವಾಗುವವು. ನಮ್ಮ ಭಾವಗಳಿಂದಲೇ ನಮ್ಮ ಒಳಿತು ಕೆಡುಕುಗಳುಂಟಾಗುವವು. ಭಕ್ತಿಯ ಭಾವಗಳಿಂದ ಶಾಂತಿ ಲಭಿಸುವುದು. ಶಾಂತಿ ಭಾವಗಳಿಂದ ನಮ್ಮ ಪಾಪಗಳು ತೊಳೆದುಹೋಗಿ ಪುಣ್ಯಲಾಭವಾಗುವುದು. ಈ ಕಾರಣದಿಂದ ಜೈನರ ದೇವಪೂಜೆಯು ವಾಸ್ತವವಾಗಿ ವೀರಪೂಜೆಯಾಗಿರುತ್ತದೆ. ಪರಮಾತ್ಮನ ಭಕ್ತಿ ಮತ್ತು ಪೂಜಾವಂದನೆಗಳನ್ನು ಕೇವಲ ತಮ್ಮ ಭಾವಗಳನ್ನು ಪವಿತ್ರ ಮತ್ತು ನಿರ್ಮಲಗೊಳಿಸುವುದಕ್ಕಾಗಿ ಮಾಡುತ್ತಾರೆ ಹೊರತು ಪರಮಾತ್ಮನನ್ನು ಪ್ರಸನ್ನಗೊಳಿಸಲಿಕ್ಕಲ್ಲ. ದೇವರು ನಿಂದೆಯಿಂದ ದುಃಖಿಯಾಗುವುದಿಲ್ಲ; ಪ್ರಶಂಸೆಯಿಂದ ಸುಖಿಯಾಗುವುದಿಲ್ಲ. ಕಾರಣ ಪರಮಾತ್ಮನು ಸುಖ ಮತ್ತು ದುಃಖಗಳಿಂದ ರಹಿತನಾಗಿರುತ್ತಾನೆ. ಪರಮಾತ್ಮನ ಪವಿತ್ರ ಗುಣಗಳನ್ನು ಸ್ಮರಿಸುವುದರಿಂದ ಮನಸ್ಸಿನ ಕೊಳೆ ತೊಳೆದು ಹೋಗುವುದು. ಕರ್ಮದ ಫಲವನ್ನು ಜೀವ ಸ್ವಯಂ ಪ್ರಾಪ್ತಿಸಿ ಕೊಳ್ಳಬೇಕು.

    ಇಂದು ಕಾಡುತ್ತಿರುವ ಕರೊನಾ ಬ್ರಹ್ಮರಾಕ್ಷಸನಿಂದಾಗಿ ಮತ್ತೆ ಇಡೀ ಲೋಕ ಒಂದಾಗಿದೆ. ಚೀನಾ ಅಥವಾ ಯುರೋಪ್ ಅಥವಾ ಗಲ್ಪ್ ರಾಷ್ಟ್ರಗಳಲ್ಲಿ ರೋಗ ಬಂದರೆ ನಮಗೇನಂತೆ ಅನ್ನುವ ಹಾಗಿಲ್ಲ. ಅವರೂ ನಮ್ಮವರೇ. ನಮ್ಮವರೂ ಅಲ್ಲಿಯವರೇ ಅಂದಮೇಲೆ ಆ ದೇಶಗಳಲ್ಲಿರುವ ನಮ್ಮ ದೇಶದ ಪ್ರಜೆಗಳು ಕಷ್ಟ, ದುಃಖ ಮತ್ತು ಸಾವಿನ ಅಪಾಯದಲ್ಲಿದ್ದರೆ ಮನುಕುಲಕ್ಕೆ ಅಪಾಯ ಅಲ್ಲವೇ? ಆಯಾ ದೇಶದ ಜನರು ಮಾತ್ರವಲ್ಲ, ಅಲ್ಲಿ ನೆಲೆಸಿರುವ ನಮ್ಮ ದೇಶದ ಜನರೂ ಸುರಕ್ಷಿತವಾಗಿರಬೇಕು. ನಮ್ಮವರು ಅಲ್ಲಿಂದ ವಾಪಸ್ ಬರುವಾಗ ಧನಸಂಪತ್ತು ಮತ್ತು ಒಳಿತುಗಳನ್ನು ತರಬೇಕೆ ವಿನಾ ಅಲ್ಲಿನ ರೋಗ ರುಜಿನಗಳು ಹಾಗೂ ಕೆಟ್ಟ ಸೋಂಕುಗಳನ್ನಲ್ಲ.

    ಯಾರು ಯಾವ ಕರ್ಮ ಮಾಡುವರೋ ಅವರು ಅದಕ್ಕೆ ತಕ್ಕಂತಹ ಫಲವನ್ನು ಅನುಭವಿಸುತ್ತಾರೆ ಎಂಬುದು ಜನಜನಿತ ಮಾತು. ಆದರೆ ಇಂದಿನ ಪರಿಸ್ಥಿತಿಯಲ್ಲಿ ದುಷ್ಕರ್ಮ ಮಾಡದೆಯೂ ದುಷ್ಟಫಲವನ್ನು ಪಡೆಯುವಂತಾಗಿದೆ. ಕರೊನಾ ಎಂಬ ವಿಷವ್ಯಾಧಿಯು ಇದಕ್ಕೆ ಸ್ಪಷ್ಟ ನಿದರ್ಶನ. ಇದನ್ನು ನಿರ್ಲಕ್ಷ್ಯ ಮಾಡಿದ ಕಾರಣ ಸಾಕಷ್ಟು ಪ್ರಾಣಾಪಾಯವೂ ಸಂಭವಿಸಿದೆ. ನಮ್ಮ ದೇಶದಲ್ಲೂ ಕೆಲವರಿಗೆ ಈ ಸೋಂಕು ತಗುಲಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಪಿಡುಗನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡಿದ್ದು, ಸೋಂಕು ಹರಡದಂತೆ ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಭಾರತೀಯ ಪ್ರಜೆಗಳಾದ ನಾವೆಲ್ಲ ಈ ಕರೊನಾ ವೈರಾಣು ರೋಗದಿಂದ ದೂರವುಳಿಯಲು ಸರ್ಕಾರದ ಜೊತೆ ಸಹಕರಿಸೋಣ. ಸರ್ಕಾರಗಳು ನೀಡುವ ಸಲಹೆ-ಸೂಚನೆಗಳನ್ನು ಪಾಲಿಸೋಣ ಮತ್ತು ಈ ವೈರಸ್ ನಿಮೂಲನೆಗೆ ಸಂಯಮ ಮತ್ತು ದೃಢಸಂಕಲ್ಪದ ಮನೋಭಾವವನ್ನು ಬೆಳೆಸಿಕೊಳ್ಳೋಣ.

    ಯುದ್ಧ ಮತ್ತು ಶಾಂತಿಯ ಸಮಯದಲ್ಲಿ ನಾವೆಲ್ಲ ವಿಶ್ವಮಾನವರಾಗಬೇಕಾಗುತ್ತದೆ. Live and let live ‘ಬದುಕು ಮತ್ತು ಬದುಕಗೊಡು’ ಎಂಬುದು ಈ ಸಂದರ್ಭದ ಸಂದೇಶ. ತನ್ನನ್ನೂ ರಕ್ಷಿಸಿಕೊಂಡು ಇತರರನ್ನೂ ರಕ್ಷಿಸುವಂತೆ ಪ್ರತಿಯೋರ್ವರನ್ನೂ ಕರೊನಾ ಕ್ರೂರ ಮಾರಿಯು ಎಚ್ಚರಿಸುತ್ತಿದೆ. ಸಾಮಾನ್ಯ ಪ್ರಜೆಯೂ ಮಾಧ್ಯಮಗಳ ಮೂಲಕ ಇಂದಿನ ವಿಶ್ವದ ಆಗುಹೋಗುಗಳನ್ನು ತಿಳಿದುಕೊಂಡು ಸಂವೇದನಾಶೀಲನಾಗುತ್ತಿದ್ದಾನೆ. ಕರೊನಾ ಕುರಿತಂತೆಯೂ ಸರಿಯಾದ ಮಾಹಿತಿ ಪಡೆದುಕೊಂಡು, ನಮ್ಮ ಸಾಮಾಜಿಕ ಜವಾಬ್ದಾರಿಯನ್ನರಿತು ವರ್ತಿಸೋಣ. ಕರೊನಾ ಮಾರಿ ಹೋಗಲಿ, ವಿಶ್ವ ಭ್ರಾತೃತ್ವ ನೆಲೆಯಾಗಲಿ ಎಂದು ಹಾರೈಸೋಣ.

    ದೆಹಲಿಯಲ್ಲಿ 5 ಮಂದಿಗಿಂತ ಹೆಚ್ಚು ಸೇರುವಂತಿಲ್ಲ: ಸಿಎಂ ಕೇಜ್ರಿವಾಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts