More

    ಮನೆ ಕೊಡದಿದ್ದರೆ ಮತವೂ ಇಲ್ಲ-ದಾಂಡೇಲಿ ವಸತಿ ಯೋಜನೆ ಫಲಾನುಭವಿಗಳಿಂದ ಎಚ್ಚರಿಕೆ

    ಕಾರವಾರ: ದಾಂಡೇಲಿ ನಗರದಲ್ಲಿ ಆಶ್ರಯ ಯೋಜನೆಯಡಿ ಮನೆಗಳನ್ನು ಒದಗಿಸುವುದಾಗಿ ಜನರಿಂದ ವಂತಿಗೆ ಸಂಗ್ರಹಿಸಿ ಇದುವರೆಗೂ ಮನೆಗಳನ್ನು ನೀಡದೇ ಸತಾಯಿಸಲಾಗುತ್ತಿರುವುದರಿಂದ ಲೋಕಸಭಾ ಚುನಾವಣೆ ಬಹಿಷ್ಕರಿಸುವುದಾಗಿ ಯೋಜನೆಯ ಫಲಾನುಭವಿಗಳು ಎಚ್ಚರಿಸಿದ್ದಾರೆ.
    ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಿ, ಗೃಹ ನಿರ್ಮಾಣ ಮಂಡಳಿ ಹಾಗೂ ನಗರಸಭೆ ವಿರುದ್ಧ ಘೋಷಣೆ ಕೂಗಿದರು. ನಂತರ ಚುನಾವಣಾ ಆಯೋಗಕ್ಕೆ ಬರೆದ ಪತ್ರವನ್ನು ಅಪರ ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಿದರು.
    ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅಕ್ರಂ ಖಾನ್, ದಾಂಡೇಲಿಯಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ವಸತಿ ಯೋಜನೆಯಡಿ ಜಿ ಪ್ಲಸ್2 ಮನೆಗಳನ್ನು ನಿರ್ಮಾಣ ಮಾಡುವ ಯೋಜನೆಯನ್ನು ರೂಪಿಸಿ 2016 ರಲ್ಲಿ ಅರ್ಜಿ ಆಹ್ವಾನಿಸಲಾಯಿತು. ಪಿಎಂ ಆವಾಸ ಯೋಜನೆಯಡಿ 840 ಫಲಾನುಭವಿಗಳು ಮಾದರಿ ಮನೆಗಳನ್ನು ಪಡೆಯಲು 50 ರಿಂದ 70 ಸಾವಿರ ರೂ. ವಂತಿಗೆಯನ್ನು ಪಾವತಿಸಿದರು. 2018 ರಲ್ಲಿ ಎಂಎಸ್‌ಆರ್‌ಎಸ್‌ಪಿ ಇನ್‌ಫ್ರಾ ಕನ್ಸ್ ಸ್ಟ್ರಕ್ಷನ್‌ ಕಂಪನಿ 54.13 ಕೋಟಿ ರೂ.ಗೆ ಟೆಂಡರ್ ಪಡೆದುಕೊಂಡಿದೆ. 2020 ರಲ್ಲಿ ಕಾಮಗಾರಿ ಮುಗಿಸಿ ಮನೆಗಳನ್ನು ಹಸ್ತಾಂತರಿಸಬೇಕಿತ್ತು. ಆದರೆ, 6 ವರ್ಷ ಕಳೆದರೂ 100 ಮನೆಗಳೂ ನಿರ್ಮಾಣವಾಗಿಲ್ಲ. ಈಗಾಗಲೇ ಕಂಪನಿಗೆ 31 ಲಕ್ಷ ರೂ. ಬಿಲ್ ಪಾವತಿಯಾಗಿದೆ ಎಂಬ ಮಾಹಿತಿ ಇದೆ. ನಾವು ಈ ಸಂಬಂಧ ಸಾಕಷ್ಟು ಬಾರಿ ಪ್ರತಿಭಟನೆ ನಡೆಸಿ, ಬಿಲ್ ಪಾವತಿಸದಂತೆ ನಗರಸಭೆಗೆ ಹೇಳಿದ ನಂತರವೂ 1 ಕೋಟಿ ರೂ. ಇತ್ತೀಚೆಗೆ ಬಿಲ್ ಆಗಿದೆ ಎಂಬ ಮಾಹಿತಿ ಇದೆ.
    ಇದೇ ಕಾರಣಕ್ಕೆ 2023 ರಲ್ಲಿ ದಾಂಡೇಲಿ ನಗರಸಭೆ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಯಿತು. ಆಗ ಆಗಮಿಸಿದ ವಸತಿ ಯೋಜನೆಯ ಅಧಿಕಾರಿಗಳು ವರ್ಷಾಂತ್ಯಕ್ಕೆ 300 ಮನೆ ನಿರ್ಮಾಣ ಪೂರೈಸಿ ಹಸ್ತಾಂತರ ಮಾಡುವುದಾಗಿ ಹೇಳಿದ್ದರು. ಅದೂ ಈಡೇರಿಲ್ಲ. ಬಡ ಜನರು ಬಂಗಾರ ಅಡವಿಟ್ಟು ಹಣ ಕಟ್ಟಿದ್ದಾರೆ. ಸಂಕಷ್ಟದಲ್ಲಿದ್ದಾರೆ. ಆದರೂ ಮನೆಗಳನ್ನು ನೀಡುತ್ತಿಲ್ಲ. ನಿರಂತರ ಹೋರಾಟದಿಂದ ಸೋತ ನಾವು ಈಗ ಬರುವ ಲೋಕಸಭಾ ಚುನಾವಣೆಗಳ ಬಹಿಷ್ಕಾರಕ್ಕೆ ನಿರ್ಧಾರ ಮಾಡಿದ್ದೇವೆ. ಚುನಾವಣೆ ಒಳಗೆ ನಮಗೆ ಮನೆಗಳನ್ನು ನೀಡದೇ ಹೋದರೆ ಮತ ಹಾಕದೇ ಇರಲು ನಿರ್ಧರಿಸಿ, ಆಯೋಗಕ್ಕೆ ಪತ್ರ ನೀಡಿದ್ದೇವೆ ಎಂದರು. ಹೋರಾಟ ಸಮಿತಿಯ ಆರ್.ವಿ.ಗಡೆಪ್ಪನವರ್, ಅಶೋಕ ಪಾಟೀಲ್, ಮೊಹಮದ್ ಗೌಸ್, ಮಲ್ಲಪ್ಪ ಮಾನ್ವಿ, ಶಿವಾನಂದ ಮುರಗೋಡ ಸುದ್ದಿಗೋಷ್ಠಿಯಲ್ಲಿದ್ದರು.

    ಇದನ್ನೂ ಓದಿ: ಮತ್ತೆ ಜಿಲ್ಲೆಯಲ್ಲಿ ಕೆಎಫ್‌ಡಿ ಆತಂಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts