More

    ದನಗಳ ಜಾತ್ರೆಯಲ್ಲಿ ಅಕ್ರಮಕ್ಕೆ ಅವಕಾಶವಿಲ್ಲ, ತಹಸೀಲ್ದಾರ್ ಅಭಯ ಮಹಿಮಾಪುರ ಜಾತ್ರೆಯಲ್ಲಿ ಕಳ್ಳಸಾಗಣೆ ಆರೋಪ

    ತ್ಯಾಮಗೊಂಡ್ಲು: ದನಗಳ ಜಾತ್ರೆಯಲ್ಲಿ ಕಳವು ರಾಸುಗಳ ಮಾರಾಟ ನಡೆಯುತ್ತಿಲ್ಲ, ಕಸಾಯಿಖಾನೆಗೆ ಸಾಗಿಸಲು ಜಾತ್ರೆಯಿಂದ ಯಾವುದೇ ರಾಸುಗಳನ್ನು ಸಾಗಿಸುತ್ತಿಲ್ಲ. ಅಕ್ರಮಕ್ಕೆ ಅವಕಾಶ ನೀಡುವುದಿಲ್ಲ.

    – ಇದು ಮಹಿಮಾಪುರದ ದನಗಳ ಜಾತ್ರೆಗೆ ಭೇಟಿ ನೀಡಿದ್ದ ತಹಸೀಲ್ದಾರ್ ಶ್ರೀನಿವಾಸಯ್ಯ ಅವರು ನೀಡಿದ ಅಭಯ.
    ಹೌದು! ಗ್ರಾಮಾಂತರ ಜಿಲ್ಲೆಯಲ್ಲಿ ಸರಣಿಯಂತೆ ದನಗಳ ಜಾತ್ರೆ ನಡೆಯುತ್ತಿದೆ. ಇತಿಹಾಸ ಪ್ರಸಿದ್ಧ ಜಾತ್ರೆಗಳಲ್ಲಿ ಸಾವಿರಾರು ಜನ ಪಾಲ್ಗೊಳ್ಳುತ್ತಿದ್ದಾರೆ. ಲಕ್ಷಾಂತರ ರೂ. ವಹಿವಾಟು ನಡೆಯುತ್ತಿದೆ. ಜಾತ್ರೆಯಲ್ಲಿ ಉತ್ತಮ ರಾಸುಗಳಿಗೆ ಬಹುಮಾನ ವಿತರಣೆಯಂತಹ ಕಾರ್ಯಕ್ರಮವೂ ನಡೆಯುತ್ತಿದೆ. ಇದರ ನಡುವೆ ಕೆಲವೊಂದು ದಿನಗಳಿಂದ ದನಗಳ ಜಾತ್ರೆಯಲ್ಲಿ ಕದ್ದ ರಾಸುಗಳ ಮಾರಾಟ ನಡೆಯುತ್ತಿದೆ, ಜತೆಗೆ ಕೆಲವರು ಕಸಾಯಿಖಾನೆಗಾಗಿಯೇ ರಾಸುಗಳನ್ನು ಖರೀದಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಇದಕ್ಕೆ ಮಹಿಮಾಪುರ ದನಗಳ ಜಾತ್ರೆಯೂ ಹೊರತಾಗಿಲ್ಲ. ದನಗಳ ಜಾತ್ರೆಯಲ್ಲಿ ಅಕ್ರಮ ನಡೆಯುತ್ತಿರುವ ಬಗ್ಗೆ ಪ್ರಾಣಿ ದಯಾ ಸಂಘ ದೂರು ನೀಡಿತ್ತು ಎನ್ನಲಾಗಿದ್ದು ಈ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಮಹಿಮಾಪುರ ದನಗಳ ಜಾತ್ರೆಗೆ ಅಧಿಕಾರಿಗಳ ತಂಡದೊಂದಿಗೆ ದಿಢೀರ್ ಭೇಟಿ ನೀಡಿದ ತಹಸೀಲ್ದಾರ್ ಶ್ರೀನಿವಾಸಯ್ಯ, ವಸ್ತುಸ್ಥಿತಿ ಪರಿಶೀಲಿಸಿದ ಬಳಿಕ ಸಾರ್ವಜನಿಕರ ಆತಂಕ ದೂರ ಮಾಡಿದರು.

    ಆತಂಕ ದೂರ: ದನಗಳ ಜಾತ್ರೆಗೆ ವಿಶೇಷ ಸಂಪ್ರದಾಯವಿದೆ. ರೈತಾಪಿ ಜನರು ರಾಸುಗಳನ್ನು ಬಸವಣ್ಣನ ರೂಪದಲ್ಲಿ ಆರಾಧಿಸುತ್ತಾರೆ. ವಹಿವಾಟು ಏನೆ ಇದ್ದರೂ, ದನಗಳ ಜಾತ್ರೆಗೆ ವಿಶೇಷ ಪರಂಪರೆ ಇದೆ. ಆದರೆ ಕಳ್ಳ ಸಾಗಣೆ ಹಾಗೂ ಕಸಾಯಿಖಾನೆ ಆರೋಪ ಕೇಳಿಬಂದಿತ್ತು. ಮಹಿಮಾಪುರ ಜಾತ್ರೆಯಿಂದ ಹೊರಭಾಗಕ್ಕೆ ತೆರಳಲು ಇರುವ ಪ್ರಮುಖ ಎರಡೂ ಮಾರ್ಗದಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿದ್ದು, ಜಾತ್ರೆಗೆ ಬರುವ ಹಾಗೂ ಜಾತ್ರೆಯಿಂದ ಹೊರಹೋಗುವ ರಾಸುಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ನಡೆಸಲಾಗುತ್ತಿದೆ. ದನಗಳ ಮಾಲೀಕರು ಹಾಗೂ ಖರೀದಿದಾರರ ಸಂಪೂರ್ಣ ಮಾಹಿತಿ ದಾಖಲು ಮಾಡಿದ ಬಳಿಕವಷ್ಟೆ ರಾಸುಗಳ ರವಾನೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ.

    ಡಿವೈಎಸ್‌ಪಿ ಮೋಹನ್‌ಕುಮಾರ್, ವೃತ್ತ ನಿರೀಕ್ಷಕ ಶಿವಣ್ಣ, ಗ್ರಾಮಲೆಕ್ಕಿಗರಾದ ಪುಷ್ಪಲತಾ, ಕನ್ವೀನರ್ ಪುಟ್ಟೇಗೌಡ ಮತ್ತಿತರರು ಹಾಜರಿದ್ದರು.

    ಆನಾಮಧೇಯ ದೂರು: ಅನಾಮಧೇಯರು ನೀಡಿದ ದೂರಿಗೆ ಸ್ಪಂದಿಸಿ ತಹಸೀಲ್ದಾರ್ ಭೇಟಿ ನೀಡಿದ್ದರು. ಇದುವರೆಗೂ ಯಾವುದೇ ಅಕ್ರಮಗಳು ಕಂಡುಬಂದಿಲ್ಲ ಎಂದು ಕಮಿಟಿಯ ಸದಸ್ಯ ಎಪಿಎಂಸಿ ನಿರ್ದೇಶಕ ನಾರಾಯಣಸ್ವಾಮಿ ತಿಳಿಸಿದರು. ಎಂದಿನಂತೆ ಉತ್ತಮ ರಾಸುಗಳ ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts