More

    ಅಣೆಕಟ್ಟೆಯಿಂದ ಮುಳುಗಡೆ ಭೀತಿ: ಒತ್ತುವರಿಯಿಂದಾಗಿ ಹತ್ತಾರು ಸಮಸ್ಯೆ 600 ಎಕರೆ ನೀರಾವರಿ ಪ್ರದೇಶ


    ಹೇಮನಾಥ್ ಪಡುಬಿದ್ರಿ
    ನೂರಾರು ಎಕರೆ ಪ್ರದೇಶಕ್ಕೆ ನೀರೊದಗಿಸುವ ಸಲುವಾಗಿ ಸಣ್ಣ ನೀರಾವರಿ ಇಲಾಖೆ ಪಲಿಮಾರಿನಲ್ಲಿ ಶಾಂಭವಿ ನದಿಗೆ ನಿರ್ಮಿಸಿರುವ ಉಪ್ಪು ನೀರು ತಡೆ ಅಣೆಕಟ್ಟೆಯಿಂದ ಹಲವು ಗ್ರಾಮಗಳಿಗೆ ಮುಳುಗಡೆ ಭೀತಿ ಇರುವುದು ಒಂದೆಡೆಯಾದರೆ, ಅಸಮರ್ಪಕ ಕಾಲುವೆಯಿಂದ ಹೊಯಿಗೆ ಗ್ರಾಮಕ್ಕೆ ನೀರು ಹರಿಯುವುದು ಇನ್ನೂ ಅನಿಶ್ಚಿತತೆಯಲ್ಲಿದೆ.

    ಸುಮಾರು 600 ಎಕರೆ ಪ್ರದೇಶಕ್ಕೆ ನೀರೊದಗಿಸುವ ಸಲುವಾಗಿ 25 ವರ್ಷ ಹಿಂದೆ ಈ ಪ್ರದೇಶದಲ್ಲಿ ನಿರ್ಮಿಸಿದ್ದ ಅಣೆಕಟ್ಟೆ ಕಾಮಗಾರಿ ದೋಷದಿಂದ ಕೂಡಿದ್ದು, ಹಲವಾರು ಬಾರಿ ದುರಸ್ತಿ ಮಾಡಿದ್ದರೂ ಸಮಸ್ಯೆಗೆ ಮುಕ್ತಿ ದೊರೆತಿರಲಿಲ್ಲ. ಅಣೆಕಟ್ಟಿನ ಸಮಸ್ಯೆ ಬಗ್ಗೆ ಗ್ರಾಮಸ್ಥರಿಂದ ಸದಾ ದೂರು ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಹಳೇ ಅಣೆಕಟ್ಟೆ ಬಳಿಯಲ್ಲಿಯೇ ಸಣ್ಣ ನೀರಾವರಿ ಇಲಾಖೆ ಮೂಲಕ 7.5 ಕೋಟಿ ರೂ. ವೆಚ್ಚದಲ್ಲಿ ನೂತನ ಅಣೆಕಟ್ಟೆ ನಿರ್ಮಿಸಲಾಗಿತ್ತು. ಕೆಲ ದಿನಗಳ ಹಿಂದೆ ಅಣೆಕಟ್ಟೆಗೆ ಹಲಗೆ ಅಳವಡಿಸುವ ಕಾರ್ಯ ಮಾಡಲಾಗಿತ್ತು. ಅಣೆಕಟ್ಟೆಯಿಂದ 5 ಕಿ.ಮೀ. ದೂರದ ಹೊಯಿಗೆ ಪ್ರದೇಶ ಸಂಪರ್ಕಿಸುವ ಹಳೆ ಕಾಲುವೆಯ ಹೂಳೆತ್ತಿ ನೀರು ಹರಿಯಿಸುವ ಪ್ರಯತ್ನವನ್ನು ಮಾಡಲಾಗಿತ್ತು. ಅದು ತಕ್ಕಮಟ್ಟಿಗೆಯಶಸ್ವಿಯಾಯಿತು. ಒಂದು ಕಾಲದಲ್ಲಿ ನಂದಿಕೂರು, ಅವರಾಲು, ಮಟ್ಟು ಪ್ರದೇಶಗಳಿಗೆ ನೀರುಣಿಸುತ್ತಿದ್ದ ಈ ಕಾಲುವೆಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಖಾಸಗಿ ಜಮೀನು ಹೊಂದಿರುವವರು ಒತ್ತುವರಿ ಮಾಡಿ, ಕೆಲವೆಡೆ ಚಿಕ್ಕ ಗಾತ್ರದ ಪೈಪ್‌ಗಳನ್ನು ಅಳವಡಿಸಿ ನೀರಿನ ಸರಾಗ ಹರಿಯುವಿಕೆಗೆ ಅಡ್ಡಿಯಾಗಿದ್ದಾರೆ. ಇದು ಪರೋಕ್ಷವಾಗಿ ಮೂಡು ಪಲಿಮಾರು ಭಾಗದಲ್ಲಿ ಕೃಷಿ ಭೂಮಿ ಮುಳುಗಡೆ ಸಮಸ್ಯೆಯನ್ನು ತಂದೊಡ್ಡುತ್ತಿದೆ.

    ನಿರ್ಮಾಣವಾಗಬೇಕಿದೆ ಕಿಂಡಿ ಅಣೆಕಟ್ಟೆ: ಅಣೆಕಟ್ಟೆಯಿಂದ ಹೊಯಿಗೆ ಪ್ರದೇಶದವರೆಗೆ ಅಲ್ಲಲ್ಲಿ ಕಿಂಡಿ ಅಣೆಕಟ್ಟೆಗಳ ನಿರ್ಮಾಣಕ್ಕೂ ಬೇಡಿಕೆಯಿದ್ದು, ಅದು ನಿರ್ಮಾಣವಾದರೆ ಎರಡೂ ಪ್ರದೇಶಗಳ ಸಮಸ್ಯೆಗೆ ಮುಕ್ತಿ ದೊರೆಯಲಿದೆ. ಈಗಿರುವ ಕಾಲುವೆ ಒತ್ತುವರಿ ತೆರವು ಸಹಿತ ಅಗತ್ಯವಿರುವೆಡೆ ಕಲ್ವರ್ಟ್‌ಗಳ ರಚನೆಗೂ ಇಲಾಖೆ ಗಮನಹರಿಸುವಂತೆ, ಅಣೆಕಟ್ಟೆಗೆ ಕಾವಲುಗಾರರ ನೇಮಕ ಸೇರಿದಂತೆ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಹೊಯಿಗೆ ಪ್ರದೇಶದಲ್ಲಿ 300 ಮನೆಗಳಿದ್ದು, ಅಸಮರ್ಪಕ ನೀರು ಹರಿಯುವಿಕೆಯಿಮದ ಅಂತರ್ಜಲ ಕುಸಿತವಾಗುತ್ತಿದೆ. ಪಲಿಮಾರು ಇಡೀ ಗ್ರಾಮಕ್ಕೆ ನೀರೊದಗಿಸುವ 7 ಬಾವಿಗಳಿಗೂ ಇದರ ಪರಿಣಾಮ ತಟ್ಟಲಿದೆ.
    ಗಿರಿಯಪ್ಪ ಪೂಜಾರಿ ಹೊಯಿಗೆ, ಪಲಿಮಾರು ಗ್ರಾಪಂ ಮಾಜಿ ಅಧ್ಯಕ್ಷ

    ಹೊಯಿಗೆ ಭಾಗದಲ್ಲಿ ಕಿಂಡಿ ಅಣೆಕಟ್ಟೆ ನಿರ್ಮಾಣವಾದರೆ ಈ ಭಾಗದ ನೀರಿನ ಸಮಸ್ಯೆಗೆ ಪರಿಹಾರ ದೊರಕಲಿದೆ.
    ಮಧುಕರ ಸುವರ್ಣ ಪಲಿಮಾರು ಗ್ರಾಪಂ ಮಾಜಿ ಅಧ್ಯಕ್ಷ

    ಕುಂಪಳಿ ಬಳಿ ಇದ್ದ ಕಿಂಡಿ ಅಣೆಕಟ್ಟೆ ನಾದುರಸ್ತಿಯಲ್ಲಿದ್ದು, ಇತರ ಅಗತ್ಯವಿರುವೆಡೆ ಕಿಂಡಿ ಅಣೆಕಟ್ಟೆ ನಿರ್ಮಾಣಕ್ಕೆ ಮತ್ತು ಅಣೆಕಟ್ಟೆ ನಿರ್ವಹಣೆಗೆ ಇಲಾಖೆ ಸೂಕ್ತ ಕ್ರಮವಹಿಸಬೇಕು. ಗ್ರಾಮಕ್ಕೆ ನೀರೊದಗಿಸುವ ಸಲುವಾಗಿ ಅಗತ್ಯ ಕಾಮಗಾರಿಗಳನ್ನು ನಿರ್ವಹಿಸಲು ಗ್ರಾಪಂ ಬದ್ಧವಾಗಿದೆ.
    ಗಾಯತ್ರಿ ಡಿ. ಪ್ರಭು, ಪಲಿಮಾರು ಗ್ರಾಪಂ ಅಧ್ಯಕ್ಷೆ

    ಪಲಿಮಾರು, ಇನ್ನ, ಮುಂಡ್ಕೂರು, ಬಳ್ಕುಂಜೆ ಹಾಗೂ ಐಕಳ ಗ್ರಾಮಗಳಿಗೆ ನೀರೊದಗಿಸುವ ಅಣೆಕಟ್ಟೆ ನಿರ್ವಹಣೆಗೆ ಈ ಗ್ರಾಮಗಳನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಸಮಸ್ಯೆಗಳನ್ನು ಕುರಿತು ಚರ್ಚಿಸಲು ನ.14ರಂದು ಈ ಗ್ರಾಪಂ ಪ್ರತಿನಿಧಿಗಳ ಸಭೆ ಕರೆಯಲಾಗಿತ್ತು. ಕೇವಲ ಪಲಿಮಾರು ಗ್ರಾಪಂ ಮಾತ್ರ ಸಭೆಯಲ್ಲಿ ಭಾಗವಹಿಸಿದ ಪರಿಣಾಮ ಸಭೆ ರದ್ದು ಮಾಡಲಾಗಿತ್ತು. ಅಣೆಕಟ್ಟೆ ಕಾವಲುಗಾರರ ನೇಮಕ ಹಿಂದೆ ಇತ್ತಾದರೂ ಪ್ರಸ್ತುತ ಅ ವ್ಯವಸ್ಥೆ ಇಲ್ಲ. ಪಲಿಮಾರು ಗ್ರಾಮದಲ್ಲಿ ನಿರ್ಮಾಣವಾಗಿರುವ ಕಾಲುವೆ ಒತ್ತುವರಿ ಇಲಾಖೆ ಗಮನಕ್ಕೂ ಬಂದಿದ್ದು, ಸರ್ವೇ ಮಾಡಿಸಿ ಒತ್ತುವರಿ ತೆರವು ಮಾಡಿ ನೀರು ಸರಾಗವಾಗಿ ಹರಿಯಲು ಕ್ರಮ ವಹಿಸಲಾಗುವುದು. ಈ ಭಾಗದಲ್ಲಿ ಕಿಂಡಿ ಅಣೆಕಟ್ಟೆ ನಿರ್ಮಾಕ್ಕೂ ಬೇಡಿಕೆಯಿದ್ದು, ಅನುದಾನ ಹೊಂದಾಣಿಕೆ ಮಾಡಿ ಕಾಮಗಾರಿ ನಡೆಸುಲು ಪ್ರಯತ್ನಿಸಲಾಗುವುದು.
    ಮಮತಾ ಜೋಗಿ, ಸಹಾಯಕ ಇಂಜಿನಿಯರ್, ಸಣ್ಣ ನೀರಾವರಿ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts