More

    ದಲಿತನ ಅಂತ್ಯಕ್ರಿಯೆಗೆ ಅಡ್ಡಿ: ಮೃತನ ಕುಟುಂಬದವರಿಂದ ತಾಲೂಕು ಕಚೇರಿ ಎದುರು ಪ್ರತಿಭಟನೆ

    ಚನ್ನಪಟ್ಟಣ: ಶವಸಂಸ್ಕಾರಕ್ಕೆ ಗ್ರಾಮದಲ್ಲಿ ಜಾಗ ಇಲ್ಲವೆಂದು ಅಡ್ಡಿಪಡಿಸುತ್ತಿದ್ದು, ತಾಲೂಕು ಆಡಳಿತ ಅಂತ್ಯಕ್ರಿಯೆಗೆ ಜಾಗ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ, ಮೃತ ವ್ಯಕ್ತಿಯ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ತಾಲೂಕು ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

    ದೇವರ ಹೊಸಹಳ್ಳಿ ಗ್ರಾಮದ ದಲಿತ ಸಮುದಾಯದ ಪುಟ್ಟರಾಮಯ್ಯ (70) ಸೋಮವಾರ ರಾತ್ರಿ ಮೃತಪಟ್ಟಿದ್ದರು. ಮಂಗಳವಾರ ಬೆಳಗ್ಗೆ ಗ್ರಾಮದ ಸ್ಮಶಾನದಲ್ಲಿ ಅಂತ್ಯಕ್ರಿಯೆಗೆ ಮುಂದಾ ದಾಗ, ವ್ಯಕ್ತಿಯೊಬ್ಬ ಈ ಜಾಗ ನನಗೆ ಸೇರಿದ್ದು, ಇಲ್ಲಿ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ತಕರಾರು ತೆಗೆದಿದ್ದಾನೆ. ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಮೃತನ ಕುಟುಂಬಸ್ಥರು, ಗ್ರಾಮಸ್ಥರು ತಾಲೂಕಿನ ದಲಿತಪರ ಹೋರಾಟಗಾರರ ಸಹಕಾರದೊಂದಿಗೆ ತಾಲೂಕು ಕಚೇರಿ ಎದುರು ಸ್ಮಶಾನಕ್ಕಾಗಿ ಪ್ರತಿಭಟನೆ ನಡೆಸಿದರು.

    ಈ ಹಿಂದಿನಿಂದ ನಮ್ಮ ಸಮುದಾಯದ ಯಾರೇ ಮೃತಪಟ್ಟರೂ ಇದೇ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡುತ್ತಿದ್ದೇವೆ. ಈಗ ಕೆಲವರು ತಕರಾರು ತೆಗೆದಿದ್ದಾರೆ. ತಾಲೂಕು ಆಡಳಿತ ನ್ಯಾಯ ದೊರಕಿಸಿಕೊಡಬೇಕು. ಇಲ್ಲವಾದರೆ, ಮನೆ ಬಳಿ ಇರುವ ಶವವನ್ನು ತಾಲೂಕು ಕಚೇರಿ ಎದುರು ಇಡಲಾಗುವುದು ಎಂದು ಎಚ್ಚರಿಸಿದರು.

    ದಲಿತ ಮುಖಂಡರಾದ ಮತ್ತೀಕೆರೆ ಹನುಮಂತಯ್ಯ, ನೀಲಸಂದ್ರ ಸಿದ್ದರಾಮು, ವೆಂಕಟೇಶ್ (ಶೇಠು) ಇದ್ದರು.

    ಸಮಸ್ಯೆಗೆ ಬಗೆಹರಿಸಿದ ತಹಸೀಲ್ದಾರ್: ಪ್ರತಿಭಟನಾಕಾರರ ಅಹವಾಲು ಆಲಿಸಿದ ತಹಸೀಲ್ದಾರ್ ಎಲ್.ನಾಗೇಶ್, ಖುದ್ದು ಗ್ರಾಮಕ್ಕೆ ಬಂದು ಸಮಸ್ಯೆ ಬಗೆಹರಿಸುವ ಆಶ್ವಾಸನೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆಯಲಾಯಿತು. ಅದರಂತೆ ದೇವರಹೊಸಹಳ್ಳಿಗೆ ತೆರಳಿದ ತಹಸೀಲ್ದಾರ್, ಸ್ಥಳ ಪರಿಶೀಲಿಸಿ, ವಿರೋಧ ವ್ಯಕ್ತಪಡಿಸಿದ ವ್ಯಕ್ತಿಯನ್ನು ವಿಚಾರಣೆ ನಡೆಸಿದರು. ಯಾವುದೇ ಸಮಸ್ಯೆ ಇದ್ದರೂ ಕಚೇರಿಯಲ್ಲಿ ಬಗೆಹರಿಸಲಾಗುವುದು ಎಂದು ತಿಳಿಸಿ, ಅಂತ್ಯಸಂಸ್ಕಾರಕ್ಕೆ ಅನುವು ಮಾಡಿಕೊಟ್ಟರು. ಈ ವೇಳೆ ಗ್ರಾಮಾಂತರ ಸಿಪಿಐ ಸಿ. ವಸಂತ್, ಪಿಎಸ್‌ಐ ಸದಾನಂದ ಹಾಗೂ ಸ್ಥಳೀಯ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts