More

    ಚಿಕ್ಕನೇರಳೆ ಗ್ರಾಪಂ ಪಿಡಿಒ ಅಮಾನತಿಗೆ ಆಗ್ರಹ

    ಪಿರಿಯಾಪಟ್ಟಣ: ಮನೆ ನಿರ್ಮಿಸಿಕೊಳ್ಳದೆ ಇರುವವರಿಗೂ ಅಕ್ರಮವಾಗಿ ಖಾತೆಗಳಿಗೆ ಹಣ ಹಾಕಿರುವ ತಾಲೂಕಿನ ಚಿಕ್ಕನೇರಳೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಕೂಡಲೇ ಅಮಾನತುಗೊಳಿಸಿ ಎಸ್‌ಸಿ-ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಶುಕ್ರವಾರ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಶುಕ್ರವಾರ ಪ್ರತಿಭಟನೆ ನಡೆಸಿದರು.

    ದಸಂಸ ಜಿಲ್ಲಾ ಸಂಚಾಲಕ ಸಿ.ಎಸ್.ಜಗದೀಶ್ ಮಾತನಾಡಿ, ಚಿಕ್ಕನೇರಳೆ ಗ್ರಾಪಂನಲ್ಲಿ ಜವರಪ್ಪ, ಚಂದ್ರೇಗೌಡ, ಜವರಮ್ಮ, ಜಯಲಕ್ಷ್ಮೀ, ಶಿವಮ್ಮ ಎಂಬ ಫಲಾನುಭವಿಗಳಲ್ಲಿ ಕೆಲವರು ಮಾತ್ರ ಮನೆ ನಿರ್ಮಿಸಿಕೊಂಡಿದ್ದಾರೆ. ಆದರೆ ಪಿಡಿಒ ಒಂದೇ ಮನೆಗಳ ಇಬ್ಬರಿಗೂ ಜಿಪಿಎಸ್‌ನಲ್ಲಿ ತೋರಿಸಿ ಎರಡು ಮನೆ ಬಿಲ್‌ಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದರು.

    ಕರ್ತವ್ಯಲೋಪ ಎಸಗಿರುವ ಪಿಡಿಒ ವಿರುದ್ಧ ಎಸ್‌ಸಿ/ಎಸ್‌ಟಿ ಪ್ರತಿಬಂಧಕಾಜ್ಞೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಹಾಗೂ ಅವರ ಅವಧಿಯಲ್ಲಿ ಜಿಪಿಎಸ್ ಮಾಡಿರುವ ಮನೆ ಹಾಗೂ ಮಳೆ ಹಾನಿಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ಮಾಡಿ ಶಿಸ್ತುಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

    ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ಮಾತನಾಡಿದ ತಾಪಂ ಇಒ ಸುನೀಲ್‌ಕುಮಾರ್, ಸ್ಥಳ ಪರಿಶೀಲನೆ ನಡೆಸಿ ಜಿಲ್ಲಾ ಪಂಚಾಯಿತಿಗೆ ವರದಿ ಸಲ್ಲಿಸಲಾಗುವುದು. ಪಿಡಿಒ ತಪ್ಪಿತಸ್ಥರೆಂದು ಕಂಡುಬಂದಲ್ಲಿ ಜಿಪಂ ಸಿಇಒ ಸೂಕ್ತ ಕ್ರಮ ತೆಗೆದು ಕೊಳ್ಳಲಿದ್ದಾರೆ ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನಾಕಾರರು ಧರಣಿ ಅಂತ್ಯಗೊಳಿಸಿದರು. ದಲಿತ ಮುಖಂಡರಾದ ಆರ್.ಎಸ್.ದೊಡ್ಡಣ್ಣ, ದೊಡ್ಡಯ್ಯ, ರಾಜಯ್ಯ, ಕಾಳಯ್ಯ, ವೆಂಕಟಯ್ಯ, ಶಿವಣ್ಣ, ವಿಜಯ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts