More

    ದಳಿ ರಸ್ತೆಯಿಡೀ ಧೂಳು

    ಶ್ರೀಪತಿ ಹೆಗಡೆ ಹಕ್ಲಾಡಿ ಕೊಲ್ಲೂರು
    ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಿಂದ ಕೂಗಳತೆ ದೂರದಲ್ಲಿರುವ ದಳಿ ಎಂಬಲ್ಲಿಯ ರಸ್ತೆ ಧೂಳುಮಯವಾಗಿದ್ದು ಜನ ಸಂಚಾರಕ್ಕೆ ಕಷ್ಟಪಡುವಂತಾಗಿದೆ. ಗ್ರಾಮೀಣ ಪ್ರದೇಶವಾದ ದಳಿಯಲ್ಲಿ ರಸ್ತೆ ಅಭಿವೃದ್ಧಿ ಮರೀಚಿಕೆಯಾಗಿದ್ದು ಈ ಬಗ್ಗೆ ಗಮನ ಹರಿಸುವಂತೆ ಜನ ಆಗ್ರಹಿಸಿದ್ದಾರೆ. ಮರಾಠಿ ಮಾತನಾಡುವ ಜನಾಂಗದವರೇ ಇಲ್ಲಿ ಹೆಚ್ಚಿದ್ದು ಪ್ರತಿದಿನ ನೂರಾರು ನಾಗರಿಕರು, 50ಕ್ಕೂ ಮಿಕ್ಕ ಶಾಲಾ ಮಕ್ಕಳು ಧೂಳು ತುಂಬಿದ ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ರಸ್ತೆ ಸಂಪರ್ಕ ಹೀಗಾದರೆ ದೂರವಾಣಿ ಸಂಪರ್ಕದ್ದು ಮತ್ತೊಂದು ಸಮಸ್ಯೆ. ಕೊಲ್ಲೂರು ಘಾಟಿ ಕಾಡಲ್ಲಿ 3ಜಿ, 4ಜಿ ಸಿಕ್ಕರೂ ದಳಿಯಲ್ಲಿ ನೆಟ್‌ವರ್ಕ್ ಸಮಸ್ಯೆ. ರಸ್ತೆ ಧೂಳುಮಯವಾಗಿದ್ದರಿಂದ ವಾಹನ ಬರುವುದಕ್ಕೆ ಹಿಂದೇಟು ಹಾಕಿದರೆ, ಯಾರಿಗಾದರೂ ಅನಾರೋಗ್ಯವಾದರೆ ವಾಹನ ಬರಹೇಳಲು ಫೋನ್ ಮಾಡಲು ಕೊಲ್ಲೂರು ತನಕ ಬರಬೇಕು. ಕೊಲ್ಲೂರು ಗ್ರಾಮದರ್ಶನ ಸಂದರ್ಭ ವಿಜಯವಾಣಿ ದಳಿ ರಸ್ತೆ ಹಾಗೂ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಬಗ್ಗೆ ಗಮನ ಸೆಳೆದಿತ್ತು. ನೆಲ್ಗೋಡಿಗೆ ಹೋಗುವ ಸೇತುವೆಯೂ ಸಂಚಾರಕ್ಕೆ ಸಮರ್ಪಕವಾಗಿಲ್ಲ. ಎಸ್ಟಿ ಜನರೇ ಹೆಚ್ಚು ವಾಸಿಸುತ್ತಿರುವುದರಿಂದ ಐಟಿಡಿಪಿ ಅನುದಾನದ ಮೂಲಕ ದಳಿ ರಸ್ತೆ ಅಭಿವೃದ್ಧಿ ಮಾಡುವ ಭರವಸೆ ನೀಡಿದ್ದು ಸೇತುವೆ ಕಾಮಗಾರಿ ಕೆಲಸ ಆಗಿದ್ದರೂ ರಸ್ತೆ ಕೆಲಸ ಅಪೂರ್ಣವಾಗಿದೆ.

    ಶಾಸಕರ ಅನುದಾನದಲ್ಲಿ ದಳಿ ರಸ್ತೆ ಅಭಿವೃದ್ಧಿಗೆ 4.50 ಲಕ್ಷ ರೂ. ಮಂಜೂರಾಗಿದೆ. ದಳಿ ಸೇತುವೆಯಿಂದ ಸಿಮೆಂಟ್ ರಸ್ತೆ ಆಗಿದ್ದು, ಡಾಂಬರು ರಸ್ತೆ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿಗೆ ಅವಕಾಶ ಇಲ್ಲದಿದ್ದರೂ ಮೋರಿ, ಸೇತುವೆ ಸೈಡ್‌ವಾಲ್ ನಿರ್ಮಾಣ ಮಾಡಲಾಗಿದೆ. ಎಸ್ಟಿ ಮನೆಗಳೇ ಹೆಚ್ಚಿದ್ದು, ಐಟಿಡಿಪಿ ಅನುದಾನದಲ್ಲಿ ದಳಿ ರಸ್ತೆ ಅಭಿವೃದ್ಧಿ ಮಾಡುವಂತೆ ಗ್ರಾಪಂ ಸಭೆಯಲ್ಲಿ ಇಟ್ಟು ನಿರ್ಣಯ ಮಾಡಿ, ಐಟಿಡಿಪಿ ಅಧಿಕಾರಿಗಳಿಗೆ ಹಾಗೂ ಶಾಸಕರಿಗೆ ಕಳುಹಿಸಿಕೊಡಲಾಗುವುದು.
    ಪ್ರಕಾಶ್ ಪೂಜಾರಿ, ಅಧ್ಯಕ್ಷ, ಗ್ರಾಮ ಪಂಚಾಯಿತಿ ಕೊಲ್ಲೂರು

    ದಳಿಯಲ್ಲಿ 125ಕ್ಕೂ ಹೆಚ್ಚು ಮನೆಗಳಿದ್ದು ಹೆಚ್ಚಿನವರು ಕೊಲ್ಲೂರಿಗೆ ಕೆಲಸಕ್ಕೆ ಬರಬೇಕು. ಧೂಳು ಹಾಗೂ ಜಲ್ಲಿ ಎದ್ದ ರಸ್ತೆಯಲ್ಲಿ ಸಂಚಾರಕ್ಕೆ ಸಮಸ್ಯೆಯಾಗಿದೆ. ಪ್ರತಿದಿನ 50ಕ್ಕೂ ಹೆಚ್ಚು ಮಕ್ಕಳು ಇದೇ ರಸ್ತೆಯಲ್ಲಿ ನಡೆದು ಹೋಗುತ್ತಾರೆ. ರಸ್ತೆ ಸಂಪೂರ್ಣ ಹಾಳಾಗಿದ್ದರಿಂದ ಆಟೋರಿಕ್ಷಾದವರು ಹಿಂದೇಟು ಹಾಕುತ್ತಿದ್ದು, ಕೊಲ್ಲೂರಿಂದ ದಳಿ ಕ್ರಾಸ್‌ನವರಗೆ ಮಾತ್ರ ಬರುತ್ತಾರೆ. ಅನಾರೋಗ್ಯ ಸಂದರ್ಭ ಆಂಬುಲೆನ್ಸ್, ಇತರ ವಾಹನಕ್ಕೆ ಕರೆ ಮಾಡಲು ನೆಟ್‌ವರ್ಕ್ ಸಮಸ್ಯೆ.
    ಶ್ರೀಧರ, ದಳಿ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts