More

    ಯಕ್ಷಗಾನ, ಜಾತ್ರೆಗೂ ವಿನಾಯಿತಿ ಇಲ್ಲ, ಇಂದಿನಿಂದ ರಾತ್ರಿ 11 ಗಂಟೆಗೆ ಎಲ್ಲವೂ ಮುಕ್ತಾಯ

    ಮಂಗಳೂರು/ಉಡುಪಿ: ರಾಜ್ಯಾದ್ಯಂತ ಕೋವಿಡ್ ಎರಡನೇ ಅಲೆ ತಡೆಯುವುದಕ್ಕೆಂದು ಸರ್ಕಾರ ಗುರುವಾರದಿಂದ ಜಾರಿಗೆ ಬರುವಂತೆ ನೈಟ್ ಕರ್ಫ್ಯೂ ಘೋಷಿಸಿರುವ ಹಿನ್ನೆಲೆಯಲ್ಲಿ ಯಕ್ಷಗಾನ, ದೈವಾರಾಧನೆ, ಜಾತ್ರೆ ಸಹಿತ ಎಲ್ಲ ಕಾರ್ಯಕ್ರಮಗಳನ್ನು ರಾತ್ರಿ 11 ಗಂಟೆಯ ಮೊದಲು ಮುಗಿಸಲು ಸೂಚಿಸಲಾಗಿದೆ.

    ಜನಸಂದಣಿ ಹೆಚ್ಚುವ ಮೂಲಕ ಕೋವಿಡ್ ಪ್ರಸರಣ ಹೆಚ್ಚಬಾರದು ಎಂಬ ಕಾರಣಕ್ಕೆ ಈ ಕರ್ಫ್ಯೂ ವಿಧಿಸಲಾಗಿದೆ. ಇದರಲ್ಲಿ ಯಾವುದೇ ವಿನಾಯಿತಿ ಮಾಡಲಾಗದು. ಯಕ್ಷಗಾನ, ದೈವಾರಾಧನೆ, ಜಾತ್ರೆ ಇತ್ಯಾದಿಗಳನ್ನು ಏನಿದ್ದರೂ ಸಂಜೆ ಬೇಗ ಶುರು ಮಾಡಿ ರಾತ್ರಿ 11ರ ಒಳಗೆ ಮುಗಿಸಬೇಕು. ಈ ಬಗ್ಗೆ ಸೂಚನೆ ನೀಡಿದ್ದೇನೆ ಎಂದು ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ‘ವಿಜಯವಾಣಿ’ಗೆ ತಿಳಿಸಿದರು.

    ಉಳಿದಂತೆ ಪ್ರವಾಸೋದ್ಯಮ ಚಟುವಟಿಕೆಗೆ ಯಾವುದೇ ಸಮಸ್ಯೆ ಇಲ್ಲ, ಜನರು ಪ್ರವಾಸಕ್ಕೆ ಬರುವುದಕ್ಕೆ ಆಕ್ಷೇಪವಿಲ್ಲ. ಆದರೆ ಲೇಟ್‌ನೈಟ್ ಪಾರ್ಟಿ, ಮೋಜು ಇತ್ಯಾದಿಯಲ್ಲಿ ತೊಡಗುವುದಕ್ಕೆ ಮಾತ್ರ ನಿರ್ಬಂಧ ಹೇರಲಾಗಿದೆ ಎಂದೂ ತಿಳಿಸಿದರು. ಸರ್ಕಾರ ಕೋವಿಡ್ ನಿಯಂತ್ರಿಸಲು ಹೊರಡಿಸಿರುವ ನೈಟ್ ಕರ್ಫ್ಯೂ ಆದೇಶ ಯಕ್ಷಗಾನ, ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ಎಲ್ಲ ಚಟುವಟಿಕೆಗಳಿಗೂ ಅನ್ವಯಿಸುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

    ನಾಳೆಯಿಂದ ಕಟೀಲು ಆಟ ಕಾಲಮಿತಿ
    ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರಿ ಮೇಳದ ಯಕ್ಷಗಾನ ಡಿ.24ರಿಂದ ತಾತ್ಕಾಲಿಕವಾಗಿ ಕಾಲಮಿತಿಯಲ್ಲಿ ನಡೆಯಲಿದೆ. ಸಂಜೆ 4 ಗಂಟೆಗೆ ಚೌಕಿ ಪೂಜೆ ನಡೆದು 4.30ಕ್ಕೆ ಯಕ್ಷಗಾನ ಆರಂಭವಾಗಿ ರಾತ್ರಿ 10.30ಕ್ಕೆ ಮಂಗಳ ಮಾಡಲಾಗುವುದು. ಪೂರ್ವರಂಗದ ಕಲಾವಿದರೆಲ್ಲರೂ ಮಧ್ಯಾಹ್ನ 2.30ಕ್ಕೆ ಚೌಕಿಯಲ್ಲಿ ಹಾಜರಿರಬೇಕು. ಸೇವಾದಾರರು ಸೇವೆಯಾಟಗಳ ಸಿದ್ಧತೆ ಮಾಡಿರುವುದರಿಂದ, ಆಟಗಳನ್ನು ರದ್ದುಪಡಿಸಿದರೆ ಸೇವಾದಾರರಿಗೂ, ಕಲಾವಿದರಿಗೂ ಸಮಸ್ಯೆಗಳಾಗುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

    ಮಂದಾರ್ತಿ ಮೇಳ ರಾತ್ರಿ 11ರ ವರೆಗೆ
    ಮಂದಾರ್ತಿ ಮೇಳದ ಬಯಲಾಟ ಸಾಯಂಕಾಲ 5.30ಕ್ಕೆ ಆರಂಭಗೊಂಡು, ರಾತ್ರಿ 11 ಗಂಟೆಗೆ ಮುಗಿಯಲಿದೆ ಎಂದು ದೇವಳದ ಆನುವಂಶಿಕ ಮೊಕ್ತೇಸರ ಎಚ್.ಧನಂಜಯ್ ಶೆಟ್ಟಿ ವಿಜಯವಾಣಿಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts