More

    ದ.ಕ ಜಿಲ್ಲೆಯಲ್ಲಿ 162 ಮಂದಿಗೆ ಪಾಸಿಟಿವ್

    ಮಂಗಳೂರು: ದ.ಕ ಜಿಲ್ಲೆಯಲ್ಲಿ ಬುಧವಾರ 162 ಕರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಕಳೆದೆರಡು ದಿನಗಳಿಂದ ಮೃತಪಟ್ಟ ಐವರಿಗೆ ಕರೊನಾ ದೃಢಪಟ್ಟಿದೆ.
    19ರಂದು ಖಾಸಗಿ ಆಸ್ಪತ್ರೆಗೆ ಕಿಡ್ನಿ ವೈಫಲ್ಯ, ಬ್ಯಾಕ್ಟೀರಿಯಾ ಸೋಂಕು ಮತ್ತಿತರ ಸಮಸ್ಯೆಗಳೊಂದಿಗೆ ದಾಖಲಾಗಿದ್ದ ಮಂಗಳೂರಿನ 66 ವರ್ಷದ ವೃದ್ಧೆ ಸೋಮವಾರ ಮೃತರಾಗಿದ್ದರು. ದಾವಣಗೆರೆ ಮೂಲದ 54 ವರ್ಷದ ಗಂಡಸು ಹೃದಯ ತೊಂದರೆ, ಕಿಡ್ನಿ ಸಮಸ್ಯೆ, ಉಸಿರಾಟ ತೊಂದರೆಯಿಂದ ಜೂನ್ 14ರಂದು ಖಾಸಗಿ ಆಸ್ಪತ್ರೆ ದಾಖಲಾಗಿ ಮಂಗಳವಾರ ಮೃತರಾಗಿದ್ದಾರೆ. ಮಂಗಳೂರಿನ 75ರ ವೃದ್ಧೆ ಜು.19ರಂದು ಖಾಸಗಿ ಆಸ್ಪತ್ರೆಗೆ ಕಿಡ್ನಿ ಸಮಸ್ಯೆ, ಡಯಾಬಿಟಿಸ್, ಹೆಪಟೈಟಿಸ್ ಬಿ ಹಾಗೂ ಕರೊನಾ ಲಕ್ಷಣಗಳೊಂದಿಗೆ ದಾಖಲಾಗಿದ್ದು, ಮಂಗಳವಾರ ಮೃತಪಟ್ಟಿದ್ದರು.
    ಮಂಗಳೂರು ನಿವಾಸಿ 60ರ ಮಹಿಳೆ ಜು.18ರಂದು ಖಾಸಗಿ ಆಸ್ಪತ್ರೆಗೆ ಹೈಪರ್‌ಟೆನ್ಶನ್, ಹೃದಯ ಸಮಸ್ಯೆ, ತೀವ್ರ ಉಸಿರಾಟ ತೊಂದರೆಯೊಂದಿಗೆ ದಾಖಲಾಗಿ ಮಂಗಳವಾರ ಮೃತರಾಗಿದ್ದರು. ಪುತ್ತೂರಿನ 70ರ ವೃದ್ಧೆ ಜು.8ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಹೃದಯ ಸಂಬಂಧಿ ಕಾಯಿಲೆ, ಡಯಾಬಿಟಿಸ್, ಹೆಪಟೈಟಿಸ್ ಬಿಯಿಂದ ಬಳಲುತ್ತಿದ್ದು ಮಂಗಳವಾರ ಮೃತರಾಗಿದ್ದರು. ಮೃತರೆಲ್ಲರಲ್ಲೂ ಕರೊನಾ ಪಾಸಿಟಿವ್ ಬಂದಿದೆ.
    ಮಂಗಳವಾರ ಬಂದಿರುವ 162 ಪಾಸಿಟಿವ್ ಪ್ರಕರಣದಲ್ಲಿ 13 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗಲಿದ್ದರೆ 70 ಮಂದಿ ಐಎಲ್‌ಐ ಲಕ್ಷಣಗಳಿದ್ದವರು, 18 ಮಂದಿ ಸಾರಿ ಲಕ್ಷಣ ಇದ್ದವರು ಪಾಸಿಟಿವ್ ಆಗಿದ್ದಾರೆ. 60 ಮಂದಿಯ ಸೋಂಕು ಮೂಲ ಇನ್ನಷ್ಟೇ ಪತ್ತೆಯಾಗಬೇಕಿದೆ.
    ದ.ಕ ಜಿಲ್ಲೆಯಲ್ಲಿ ಗಂಟಲು ದ್ರವ ಮಾದರಿ ಪರೀಕ್ಷೆ 30,297 ತಲಪಿದೆ. ಒಟ್ಟು ಪಾಸಿಟಿವ್ ಸಂಖ್ಯೆ 3996 ತಲಪಿದ್ದು, 2160 ಸಕ್ರಿಯ ಪ್ರಕರಣಗಳಿವೆ. ಬುಧವಾರ 69 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಡಿಸ್‌ಚಾರ್ಜ್ ಆದವರ ಒಟ್ಟು ಸಂಖ್ಯೆ 1744 ಆಗಿದೆ.

    ವೆನ್ಲಾಕ್ ಟೆಸ್ಟ್‌ನಲ್ಲಿ ಪಾಸಿಟಿವ್, 2 ಖಾಸಗಿ ಆಸ್ಪತ್ರೆಗಳಲ್ಲಿ ನೆಗೆಟಿವ್!
    ಮಂಗಳೂರು: ವೆನ್ಲಾಕ್ ಕೋವಿಡ್ ಲ್ಯಾಬ್‌ನಲ್ಲಿ ಕರೊನಾ ಪಾಸಿಟಿವ್, ಅದೇ ದಿನ ಖಾಸಗಿ ಆಸ್ಪತ್ರೆ ಲ್ಯಾಬ್‌ನಲ್ಲಿ ಪರೀಕ್ಷಿಸಿದಾಗ ನೆಗೆಟಿವ್, ಮಾರನೇ ದಿನ ಇನ್ನೊಂದು ಖಾಸಗಿ ಆಸ್ಪತ್ರೆಗೆ ಹೋದಾಗಲೂ ನೆಗೆಟಿವ್!
    ಗಂಜಿಮಠ ಸಮೀಪದ 40 ವರ್ಷದ ವ್ಯಕ್ತಿಯೊಬ್ಬರಿಗೆ ಈ ಅನುಭವ ಆಗಿದೆ. ಇದು ಕಿಟ್ ಸಮಸ್ಯೆಯೇ ಅಥವಾ ಲ್ಯಾಬ್ ತಜ್ಞರ ತಪ್ಪೇ ಎನ್ನುವುದು ಗೊತ್ತಾಗಿಲ್ಲ.
    ಈ ಬಗ್ಗೆ ವಿಜಯವಾಣಿಯೊಂದಿಗೆ ಮಾತನಾಡಿದ ಅವರು, ‘ತಲೆನೋವಿನ ಹಿನ್ನೆಲೆ ನಾನು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದೆ. ವೈದ್ಯರು ಕರೊನಾ ಪರೀಕ್ಷೆಗೆ ವೆನ್ಲಾಕ್‌ಗೆ ಕಳುಹಿಸಿದ್ದರು. ಎರಡು ದಿನದ ನಂತರ ವರದಿ ಪಾಸಿಟಿವ್ ಬಂತು. ಸಂಶಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಟೆಸ್ಟ್ ನಡೆಸಿದಾಗ ನೆಗೆಟಿವ್ ಬಂತು. ಥರ್ಡ್ ಒಪೀನಿಯನ್ ಬೇಕೆಂದು ಮತ್ತೊಂದು ಖಾಸಗಿ ಆಸ್ಪತ್ರೆಗೆ ಹೋದಾಗಲೂ ನೆಗೆಟಿವ್ ಬಂದಿದೆ. ವೆನ್ಲಾಕ್ ವರದಿಯಿಂದಾಗಿ ಮನೆ ಸೀಲ್‌ಡೌನ್ ಆಗಿದೆ, ಯಾರೂ ಹೊರಗೆ ಹೋಗಬಾರದು ಎಂಬ ಸೂಚನೆಯೂ ಇದೆ. ನಾವು ಮೂರು ವರದಿಯನ್ನೂ ನೀಡಿ, ಟೆಸ್ಟ್‌ನಲ್ಲಿ ಎಡವಟ್ಟಾಗಿದೆ ಎಂದರೂ ಆರೋಗ್ಯ ಇಲಾಖೆ ಸೀಲ್‌ಡೌನ್ ತೆರವುಗೊಳಿಸುತ್ತಿಲ್ಲ’ ಎಂದು ದೂರಿದ್ದಾರೆ.
    ಒಂದು ಖಾಸಗಿ ಆಸ್ಪತ್ರೆಯ ವರದಿ ತಪ್ಪಿರಬಹುದು, ಆದರೆ ಎರಡೂ ತಪ್ಪಾಗುವುದು ಹೇಗೆ? ವೆನ್ಲಾಕ್ ಲ್ಯಾಬ್‌ನಲ್ಲೇ ಗೊಂದಲ ಆಗಿರಬಹುದು. ಇದನ್ನು ಹಿರಿಯ ಅಧಿಕಾರಿಗಳು ಸರಿಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

    ಇಬ್ಬರು ಪೊಲೀಸರಿಗೆ ಪಾಸಿಟಿವ್
    ಪುತ್ತೂರು: ನಗರ ಪೊಲೀಸ್ ಠಾಣೆಯ 33 ವರ್ಷದ ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿ ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಬುಧವಾರ 9 ಕರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಬನ್ನೂರು ನಿವಾಸಿ 75 ವರ್ಷದ ಪುರುಷ, ಪುತ್ತೂರು ನಗರದ ಕೋರ್ಟ್ ರಸ್ತೆ ನಿವಾಸಿ 62 ವರ್ಷದ ಪುರುಷ, ಅವರ ಪತ್ನಿ, ಅರಿಯಡ್ಕ ನಿವಾಸಿ 58 ವರ್ಷದ ಮಹಿಳೆ, ಸಾಮೆತ್ತಡ್ಕ ನಿವಾಸಿ 37 ವರ್ಷದ ಪುರುಷ, ಬೆಳ್ಳಿಪ್ಪಾಡಿ ಗ್ರಾಮದ ಗಾಣದಕೊಟ್ಯ ನಿವಾಸಿ 21 ವರ್ಷದ ಮಹಿಳೆಯಲ್ಲಿ ಕರೊನಾ ಪಾಸಿಟಿವ್ ದೃಢಪಟ್ಟಿದೆ.

    ಕಾಸರಗೋಡಿನಲ್ಲಿ ಶತಕ ದಾಟಿದ ಪ್ರಕರಣ
    ಕಾಸರಗೋಡು: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಬುಧವಾರ ಶತಕ ದಾಟಿದೆ. ಜಿಲ್ಲೆಯ 101 ಮಂದಿಯ ಸಹಿತ ಕೇರಳದಲ್ಲಿ 1038 ಮಂದಿ ಕೋವಿಡ್-19 ರೋಗ ಬಾಧೆಗೊಳಗಾದರು. ಸೋಂಕು ಆರಂಭಗೊಂಡ ನಂತರ ಪ್ರತಿದಿನದ ಲೆಕ್ಕಾಚಾರದಲ್ಲಿ ಇದೇ ಮೊದಲ ಬಾರಿಗೆ ಕರೊನಾ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ. ರಾಜ್ಯದಲ್ಲಿ ಒಟ್ಟು 15032 ಮಂದಿಯಲ್ಲಿ ರೋಗ ಖಚಿತಗೊಂಡಿದೆ. ಕೋವಿಡ್ ಬಾಧಿಸಿ ಬುಧವಾರ ಇಡುಕ್ಕಿಯ 87 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಕಾಸರಗೋಡಿನ 43 ಮಂದಿ ಒಳಗೊಂಡಂತೆ ರೋಗ ಬಾಧಿಸಿದವರಲ್ಲಿ ಬುಧವಾರ 272 ಮಂದಿ ಗುಣವಾಗಿದ್ದಾರೆ.

    ಮಹಿಳೆ ಸಾವು: ಕೇರಳದಲ್ಲಿ ಬುಧವಾರ ಮೂವರು ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಕೋಝಿಕ್ಕೋಡ್‌ನ 57 ವರ್ಷದ ಪುರುಷ, ಕೊಲ್ಲಂ ಕುಲಶೇಖರಪುರದ 55 ವರ್ಷದ ಪುರುಷ, ಕಾಸರಗೋಡು ಅಣಂಗೂರಿನ 48 ವರ್ಷದ ಮಹಿಳೆ ಮೃತಪಟ್ಟವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts