More

    ಸಹಜ ಸ್ಥಿತಿಗೆ ಮರಳಿದ ದಕ್ಷಿಣ ಕನ್ನಡ

    ಮಂಗಳೂರು: ಕರೊನಾ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾರಿಗೊಂಡಿದ್ದ ಒಂದು ವಾರದ ಲಾಕ್‌ಡೌನ್ ಗುರುವಾರ ಬೆಳಗಿನ ಜಾವ ಮುಕ್ತಾಯಗೊಂಡಿದ್ದು, ಜಿಲ್ಲೆ ಸಹಜ ಸ್ಥಿತಿಗೆ ಮರಳಿದೆ.
    ಬೆಳಗ್ಗೆ 5 ಗಂಟೆಗೆ ಲಾಕ್‌ಡೌನ್ ತೆರವುಗೊಂಡಿದ್ದು, ಎಲ್ಲ ತಾಲೂಕು ಹಾಗು ಜಿಲ್ಲಾ ಕೇಂದ್ರದಲ್ಲಿ ವಾಣಿಜ್ಯ ಚಟುವಟಿಕೆಗಳು ಚುರುಕಾಗಿವೆ. ಮಾಲ್‌ಗಳು, ಬಟ್ಟೆ ಮಾರಾಟ, ಮದ್ಯ ಮಾರಾಟ ಅಂಗಡಿಗಳೂ ತೆರೆದಿದ್ದವು. ಖಾಸಗಿ, ಸರ್ಕಾರಿ ಬಸ್‌ಗಳು, ಆಟೋ ರಿಕ್ಷಾ, ಟ್ಯಾಕ್ಸಿ ಸಂಚಾರ ಆರಂಭಿಸಿವೆ. ಆದರೆ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು.

    ವಿವಿಧ ಕ್ಷೇತ್ರಗಳ ಉದ್ಯೋಗಿಗಳು ಕೆಲಸ ಆರಂಭಿಸಿದ್ದರು. ರಸ್ತೆಗಳಲ್ಲಿ ವಾಹನ ಸಂಚಾರ ಹೆಚ್ಚಳವಾಗಿತ್ತು. ಅಂಗಡಿಗಳಲ್ಲಿ ಅವಶ್ಯ ವಸ್ತು ಗಳ ಖರೀದಿಗೆ ಕರೊನಾ ಸೋಂಕು ಹರಡುವಿಕೆಗೆ ಸುರಕ್ಷತಾ ಕ್ರಮ ಅನುಸರಿಸದೆ ಜನರು ಮುಗಿ ಬಿದ್ದ ದೃಶ್ಯ ಕಂಡು ಬಂತು. ಜಿಲ್ಲಾಧಿಕಾರಿ ಕಚೇರಿ, ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳು ಕನಿಷ್ಟ ಸಿಬ್ಬಂದಿಯೊಂದಿಗೆ ಕೆಲಸ ಆರಂಭಿಸಿವೆ.
    ಪ್ರತಿ ದಿನ ರಾತ್ರಿ 9ರಿಂದ ಬೆಳಗ್ಗೆ 5ರ ತನಕ ಕರ್ಪ್ಯೂ ಹಾಗೂ ಪ್ರತಿ ಭಾನುವಾರ ಲಾಕ್‌ಡೌನ್ ಮುಂದುವರಿಯಲಿದೆ.

    ಉಡುಪಿ ಬಸ್ ಸಂಚಾರ ಆರಂಭ
    ಉಡುಪಿ: ಜಿಲ್ಲೆಯಲ್ಲಿ ಸಾರಿಗೆ ಸಂಚಾರ ಪುನರಾರಂಭವಾಗಿದ್ದು, ಕೆಎಸ್‌ಆರ್‌ಟಿಸಿ, ಸಿಟಿ, ಸರ್ವೀಸ್, ಎಕ್ಸ್‌ಪ್ರೆಸ್ ಬಸ್ಸುಗಳು ಗುರುವಾರ ಸಂಚಾರ ಆರಂಭಿಸಿದವು. ಉಡುಪಿ ಕೇಂದ್ರದಿಂದ ಮಂಗಳೂರಿಗೆ, ಕುಂದಾಪುರ, ಶಿವಮೊಗ್ಗ, ಹೆಬ್ರಿ, ಕಾರ್ಕಳ ಭಾಗಕ್ಕೆ ಬಸ್ಸುಗಳು ಓಡಾಟ ನಡೆಸಿದ್ದು, 12 ಸರ್ವೀಸು ಬಸ್, 20 ಸಿಟಿ ಬಸ್ಸುಗಳು ರಸ್ತೆಗಳಿದಿದ್ದವು. ಉಡುಪಿ ಕೆಎಸ್‌ಆರ್‌ಟಿಸಿ ಡಿಪೋದಿಂದ ಕಾರ್ಕಳ, ಕುಂದಾಪುರ, ಹೆಬ್ರಿ, ಶಿವಮೊಗ್ಗ, ಹುಬ್ಬಳ್ಳಿ, ಮಂಗಳೂರು, ಬೆಂಗಳೂರು ಭಾಗಗಳಿಗೆ ಬಸ್ಸುಗಳು ತೆರಳಿದವು. ಒಟ್ಟು 21 ಬಸ್ಸುಗಳು ಸದ್ಯಕ್ಕೆ ಓಡಾಟ ನಡೆಸುತ್ತಿವೆ. ಶುಕ್ರವಾರ ಮತ್ತೆ 10 ಬಸ್ಸುಗಳ ಸಂಚಾರ ಆರಂಭವಾಗಲಿದ್ದು, ವಿವಿಧ ಮಾರ್ಗಗಳಿಗೆ ಹಂತಹಂತವಾಗಿ ಬಸ್ಸುಗಳ ಸಂಖ್ಯೆ ಏರಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಎರಡು ದಿನಗಳಿಂದ ಸರ್ಕಾರಿ, ಖಾಸಗಿ ಬಸ್ಸುಗಳಿದ್ದರೂ ಪ್ರಯಾಣಿಕರ ಸಂಖ್ಯೆ ಕಡಿಮೆಯಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts