More

    ಮಿಂಚಿಪದವು ಎಂಡೋ ಪ್ರಕರಣಕ್ಕೆ ಮರುಜೀವ: ವಿಷ ಸುರಿದು ಮುಚ್ಚಿದ್ದ ಬಾವಿ ಉತ್ಖನನ ?

    ಈಶ್ವರಮಂಗಲ: ಸುಮಾರು 3 ದಶಕಗಳ ಹಿಂದೆ ಗಡಿಪ್ರದೇಶದಲ್ಲಿರುವ ಕೇರಳದ ಮಿಂಚಿಪದವು ಎಂಬಲ್ಲಿದ್ದ ಪಾಳು ಬಾವಿಯೊಂದರಲ್ಲಿ ಕೇರಳ ಸರ್ಕಾರ ಟನ್‌ಗಟ್ಟಲೆ ನಿಷೇಧಿತ ಎಂಡೋ ಸಲ್ಫಾನ್ ಹೂತು ಹಾಕಿದ್ದು, ಇದರ ಪರಿಣಾಮವಾಗಿಯೇ ಈ ಗಡಿಪ್ರದೇಶದಲ್ಲಿ ಎಂಡೋ ಪೀಡಿತರಾಗಿ ಕೆಲವರು ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ಪ್ರಕರಣಕ್ಕೆ ಮರುಜೀವ ಪಡೆದಿದೆ.

    ಪ್ರಕರಣಕ್ಕೆ ಸಂಬಂಧಿಸಿ ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು, ಸುರತ್ಕಲ್ ಎನ್‌ಐಟಿಕೆ ಸಂಸ್ಥೆಯ ಜಿಯೋಲಿಜೆಸ್ಟ್ ವಿಭಾಗದ ತಜ್ಞರು ಹಾಗೂ ಅಧಿಕಾರಿಗಳೊಂದಿಗೆ ಮಂಗಳವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಮೇ 8ರಂದು ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಮಿಂಚಿಪದವು ಎಂಡೋ ಪ್ರಕರಣ ಪ್ರಸ್ತಾಪಗೊಂಡಿತ್ತು. ಮುಚ್ಚಲಾಗಿದೆ ಎನ್ನಲಾದ ಪಾಳು ಬಾವಿಯನ್ನು ಅಗೆದು ಪರಿಶೀಲಿಸಬೇಕೆಂದು ಪಂಚಾಯಿತಿ ಸದಸ್ಯ ಶ್ರೀರಾಮ ಪಕ್ಕಳ ಪ್ರಸ್ತಾಪಿಸಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಬರೆಯಲು ನಿರ್ಣಯ ಕೈಗೊಳ್ಳಲಾಗಿತ್ತು.
    ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಮಂಗಳವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಸರದ ಬೆದ್ರಾಡಿ ಎಂಬಲ್ಲಿರುವ ಎಂಡೋ ಪೀಡಿತರ ಮನೆಗೆ ಭೇಟಿ ನೀಡಿ ಸಮಸ್ಯೆ ಆಲಿಸಿದರು.

    ಬಾವಿಯ ಉತ್ಖನನ ?: ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ನೂರು, ಗಾಳಿಮುಖ, ಮೈರೋಳು, ಕೇರಳದ ಮಿಂಚಿಪದವಿನಲ್ಲಿ ಸಾಕಷ್ಟು ಮಂದಿ ವಿಕಲಚೇತನರು, ಎಂಡೋ ಪೀಡಿತರಿದ್ದಾರೆ. ಪಾಳು ಬಾವಿಗೆ ರಾಸಾಯನಿಕ ಸುರಿಯಲಾಗಿದೆ ಎಂಬ ಆರೋಪದ ಬಗ್ಗೆ ಕೇರಳ ಮತ್ತು ಕರ್ನಾಟಕ ಸರ್ಕಾರದಿಂದ ತನಿಖೆ ನಡೆಯುತ್ತಿದೆ ಎನ್ನಲಾದರೂ ಯಾವುದೇ ಪ್ರಗತಿ ಆಗಿರಲಿಲ್ಲ. ಈಗ ಈ ಬಾವಿಯ ಉತ್ಖನನ ನಡೆಸುವ ಸಂಬಂಧ ಜಿಲ್ಲಾಧಿಕಾರಿಗಳು ಭೇಟಿ ನೀಡಿರುವುದಾಗಿ ಮಾಹಿತಿ ಲಭಿಸಿದೆ.

    ಎಸ್ಪಿ ಹೃಷಿಕೇಶ್ ಸೋನಾವಣೆ, ಉಪವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್, ತಹಸೀಲ್ದಾರ್ ರಮೇಶ್ ಬಾಬು, ಡಿವೈಎಸ್ಪಿ ಡಾ.ಗಾನಾ ಪಿ.ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್‌ಕುಮಾರ್ ಭಂಡಾರಿ, ಕಂದಾಯ ನಿರೀಕ್ಷಕ ಮಹೇಶ್. ಎಎಸ್‌ಐ ತಿಮ್ಮಯ್ಯ ಗೌಡ, ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್ ರೈ ಸಾಂತ್ಯ, ಸದಸ್ಯರಾದ ಶ್ರೀರಾಮ ಪಕ್ಕಳ ಕರ್ನೂರು, ಪ್ರದೀಪ್ ರೈ ಕರ್ನೂರು, ಉಮಾನಾಥ ಪೂಜಾರಿ, ಮಾಜಿ ಸದಸ್ಯರಾದ ಖಾದರ್.ಎನ್.ಕರ್ನೂರು, ಎಂ.ಬಿ.ಇಬ್ರಾಹಿಂ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts