More

    ಉಪಕಸುಬಿನಲ್ಲಿ ಲಾಭ ಕಂಡ ಕೃಷಿಕ

    ವಿನ್ಸೆಂಟ್ ಎಂ.ಬಿ.ಸುಂಟಿಕೊಪ್ಪ
    ಹೋಬಳಿಯ ಗದ್ದೆಹಳ್ಳ ಗ್ರಾಮದಲ್ಲಿ ನೆಲೆಸಿರುವ ಕೃಷಿಕ ಪಟ್ಟೆಮನೆ ಉದಯಕುಮಾರ್ ಅವರ ಕುಟುಂಬ ಹಿರಿಯರ ಕಾಲದಿಂದಲೂ ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದು, ಈಗಲೂ ಕಾಲಕ್ಕೆ ತಕ್ಕಂತೆ ಕೃಷಿಯಲ್ಲಿ ಬದಲಾವಣೆ ಮಾಡಿಕೊಂಡು ಉತ್ತಮ ಬೆಳೆ ಬೆಳೆದು ಸಮೃದ್ಧಿಯ ಜೀವನ ಸಾಗಿಸುತ್ತಿದ್ದಾರೆ.

    ಉದಯಕುಮಾರ್ ಅವರಿಗೆ 16 ಎಕರೆ ಕೃಷಿ ಭೂಮಿ ಇದ್ದು, ಹೆಚ್ಚಿನ ಭಾಗ ಭತ್ತ ಬೆಳೆಯುತ್ತಿದ್ದರು. ಆದರೆ ಮಳೆ ಕಡಿಮೆಯಾದ ಕಾರಣ ಕಾಫಿ, ಕರಿಮೆಣಸು, ಅಡಕೆ, ತೆಂಗು, ಬಾಳೆ ಕೃಷಿಯತ್ತ ಮುಖ ಮಾಡಿದ ಅವರು, ಬಾಳೆಯಿಂದ ಸಾಕಷ್ಟು ಆದಾಯ ಗಳಿಸಿದ್ದಾರೆೆ. ಕೃಷಿ ಜತೆಗೆ ಉಪಕಸುಬಾಗಿ ಹೈನುಗಾರಿಕೆ, ಹಂದಿ ಸಾಕಣೆ ಹಾಗೂ ಕೋಳಿ ಸಾಕಣೆ ಮಾಡಿ ಆದಾಯದ ಮೂಲ ಕಂಡುಕೊಂಡಿದ್ದಾರೆ. ಜೆರ್ಸಿ ತಳಿಯ ಹಸುಗಳನ್ನು ಹೊಂದಿರುವ ಉದಯಕುಮಾರ್, ಗುಣಮಟ್ಟದ ಹಾಲು, ಮಜ್ಜಿಗೆ ಹಾಗೂ ತುಪ್ಪ ಮಾರಾಟದಿಂದ ಲಾಭ ಕಾಣುತ್ತಿದ್ದಾರೆ.

    ವಿಶೇಷವೆಂದರೆ ಕೃಷಿಗೆ ಅಗತ್ಯವಾಗಿ ಬೇಕಾಗಿರುವ ಸಾವಯವ ಗೊಬ್ಬರ ಸಹ ಇವರು ಸಾಕಿರುವ ಜಾನುವಾರುಗಳಿಂದಲೇ ಸಿಗುತ್ತಿದೆ. ವಾರ್ಷಿಕವಾಗಿ ಹಂದಿಗೊಬ್ಬರ 6 ಟ್ರಾೃಕ್ಟರ್, ಹಸುವಿನ ಗೊಬ್ಬರ 4 ಟ್ರಾೃಕ್ಟರ್, ಕೋಳಿ ಗೊಬ್ಬರ 1 ಟ್ರಾೃಕ್ಟರ್ ಉತ್ಪತ್ತಿಯಾಗುತ್ತಿದೆ. ಇದರಿಂದ ಕೃಷಿಗೆ ಬೇಕಾದ ಗೊಬ್ಬರ ಖರೀದಿಗಾಗಿ ಸಾವಿರಾರು ರೂ. ವ್ಯಯಿಸುವುದು ತಪ್ಪಿದೆ. ಗುಣಮಟ್ಟದ ಗೊಬ್ಬರ ಬಳಸುತ್ತಿರುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಿಕೊಳ್ಳಲು ಅನುಕೂಲಕರವಾಗಿದೆ.

    ‘ಹೈನುಗಾರಿಕೆ, ಹಂದಿ ಮತ್ತು ಕೋಳಿ ಸಾಕಣೆಯಿಂದ ಯಾವುದೇ ರೀತಿಯಿಂದಲೂ ನಷ್ಟವಾಗುವ ಸಂದರ್ಭವೇ ಎದುರಾಗುವುದಿಲ್ಲ. ಅವುಗಳ ದೇಹಕ್ಕೆ ಸಾಂಕ್ರಾಮಿಕ ರೋಗಗಳು ಬಾಧಿಸಿ ಜೀವ ಕಳೆದುಕೊಂಡರೆ ಮಾತ್ರ ನಷ್ಟ ಸಂಭವಿಸುತ್ತದೆ. ಆದರೆ ಅವುಗಳನ್ನು ಕಾಲಕಾಲಕ್ಕೆ ತಪಾಸಣೆ ಮಾಡಿಸುವುದು ಅಗತ್ಯ’ ಎನ್ನುತ್ತಾರೆ ಉದಯ್‌ಕುಮಾರ್.

    ಪ್ರಸ್ತುತ ದಿನಗಳಲ್ಲಿ ಕೃಷಿಯಲ್ಲಿ ಲಾಭ ಕಾಣುವುದು ಕಷ್ಟ ಸಾಧ್ಯ. ಆದ್ದರಿಂದ ಕೃಷಿಯೊಂದಿಗೆ ಉಪಕಸುಬಾಗಿ ಹೈನುಗಾರಿಕೆ, ಕೋಳಿ, ಹಂದಿ ಸಾಕಣೆ ಮಾಡುವುದರಿಂದ ಕೃಷಿಯಲ್ಲಿ ಆಗುವ ನಷ್ಟವನ್ನು ಸರಿದೂಗಿಸುತ್ತದೆ. ಕೃಷಿ ಚಟುವಟಿಕೆ ನಿರ್ವಹಿಸಲು ಕಾರ್ಮಿಕರ ಅವಶ್ಯಕತೆ ಅಗತ್ಯ. ಆದರೆ ಹೈನುಗಾರಿಕೆಗೆ ಕಾರ್ಮಿಕರ ಅಗತ್ಯ ಇರುವುದಿಲ್ಲ. ಕುಟುಂಬದ ಸದಸ್ಯರೇ ನಿರ್ವಹಿಸಿಕೊಳ್ಳುವುದರಿಂದ ಆದಾಯದ ಮೂಲವಾಗಿದೆ. ವಾರ್ಷಿಕ ಅಂದಾಜು ಮೊತ್ತ 5 ರಿಂದ 6 ಲಕ್ಷ ರೂ. ನಿವ್ವಳ ಲಾಭ ತಂದು ಕೊಡುತ್ತಿದೆ ಎಂದು ಉದಯಕುಮಾರ್ ಹೇಳುತ್ತಾರೆ.

    ಕೇವಲ ಭತ್ತ ಅಥವಾ ಕಾಫಿ, ಕರಿಮೆಣಸು ಬೆಳೆಯನ್ನು ನಂಬಿ ಬದುಕು ಸಾಗಿಸಲು ಸಾಧ್ಯವಿಲ್ಲ. ಕೆಲವು ವರ್ಷಗಳ ಹಿಂದೆ ಕರಿಮೆಣಸು ನಮಗೆ ಅಪದ್ಬಾಂಧವ ಎನ್ನಿಸಿತ್ತು. ಆದರೆ ಬಳ್ಳಿಗೆ ಬಂದಿರುವ ಮಾರಕ ರೋಗದಿಂದಾಗಿ ಅದು ಕೂಡ ಕೈ ಹಿಡಿಯುತ್ತಿಲ್ಲ. ಇಂತಹ ಸಂದರ್ಭದಲ್ಲಿ ಅಡಕೆ, ತೆಂಗು, ಬಾಳೆ ಜತೆಗೆ ಹೈನುಗಾರಿಕೆ, ಕೋಳಿ ಮತ್ತು ಹಂದಿ ಸಾಕಣೆ ನಮ್ಮ ಜೀವನಕ್ಕೆ ಆರ್ಥಿಕ ಭದ್ರತೆ ನೀಡಿದೆ.
    ಪಟ್ಟೆಮನೆ ಉದಯಕುಮಾರ್, ಕೃಷಿಕ

    ಉದಯಕುಮಾರ್ ಅವರು ಭತ್ತದ ಕೃಷಿ ಬಗ್ಗೆ ಅಪರಿಮಿತ ಕಾಳಜಿ ಹೊಂದಿದ್ದು, ಬೆಳೆಗೆ ಯಾವುದೇ ಕೀಟಗಳು ಬಾಧಿಸಿರುವುದು ಕಂಡು ಬಂದರೆ ತಕ್ಷಣವೇ ಇಲಾಖೆಗೆ ಆಗಮಿಸಿ ಮಾಹಿತಿ ನೀಡಿ ಮುಂದೆ ಎದುರಾಗಬಹುದಾದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾರೆ. ಇಲಾಖೆಯಿಂದ ದೊರೆಯುವ ಸವಲತ್ತುಗಳ ಬಗ್ಗೆ ಆಗ್ಗಿಂದಾಗೆ ಮಾಹಿತಿ ಪಡೆದುಕೊಳ್ಳುತ್ತಾರೆ.
    ಸುಪರ್ಣ, ಸಹಾಯಕ ತಾಂತ್ರಿಕ ಅಧಿಕಾರಿ, ಕೃಷಿ ಇಲಾಖೆ, ಸುಂಟಿಕೊಪ್ಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts