More

    ಸಂಪಾದಕೀಯ: ಬೆಳವಣಿಗೆಯ ಅವಕಾಶ; ಪ್ರವಾಸೋದ್ಯಮ ಪ್ರೋತ್ಸಾಹಕ್ಕೆ ಕೇಂದ್ರ ಬಜೆಟ್​ನಲ್ಲಿ ಒತ್ತು

    ಐವತ್ತು ಪ್ರವಾಸಿ ತಾಣಗಳು, ಪ್ರವಾಸಿಗರಿಗೆ ಆಪ್ ಮತ್ತು ಕರಕುಶಲ ವಸ್ತುಗಳ ಚಿಲ್ಲರೆ ಮಾರಾಟ ಮಳಿಗೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಘೋಷಿಸುವ ಮೂಲಕ ಕೇಂದ್ರ ಸರ್ಕಾರದ ಪ್ರಸ್ತುತ ಬಜೆಟ್​ನಲ್ಲಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡಲು ಒಲವು ತೋರಲಾಗಿದ್ದರೂ ಈ ವಲಯಕ್ಕೆ ಪ್ರಸ್ತುತ ಬಜೆಟ್​ನಲ್ಲಿ ಹಣದ ಹಂಚಿಕೆಯನ್ನು ಹೆಚ್ಚಳ ಮಾಡಿಲ್ಲ. ಕಳೆದ ಬಜೆಟ್​ನಲ್ಲಿ ಒದಗಿಸಿದಂತೆಯೇ -ರೂ. 2,400 ಕೋಟಿಗಳನ್ನು ಮೀಸಲಿರಿಸಲಾಗಿದೆ. ದೇಶದ ಆರ್ಥಿಕ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಬಹುದಾದ ಹಾಗೂ ವ್ಯಾಪಕ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸುವ ಸಾಧ್ಯತೆಯುಳ್ಳ ಈ ವಲಯಕ್ಕೆ ಇನ್ನಷ್ಟು ಅನುದಾನ ಒದಗಿಸಬೇಕೆಂಬ ಅಪೇಕ್ಷೆ ವ್ಯಕ್ತವಾಗಿದೆ. ವಿದೇಶಗಳಿಗೆ ಹೋಗುವ ಬದಲು ದೇಶದಲ್ಲಿರುವ ವೈವಿಧ್ಯಮಯ ಪ್ರೇಕ್ಷಣೀಯ ಸ್ಥಳಗಳನ್ನು ನಮ್ಮ ದೇಶದ ಜನರು, ಅದರಲ್ಲೂ ಮಧ್ಯಮ ವರ್ಗದವರು ನೋಡಬೇಕೆಂಬ ಉದ್ದೇಶದಿಂದ ಬಜೆಟ್​ನಲ್ಲಿ ಘೋಷಿಸಿರುವ ದೇಖೋ ಅಪ್ನಾ ದೇಶ್ (ನಮ್ಮ ದೇಶ ನೋಡಿ) ಯೋಜನೆಯು ದೇಶೀಯ ಪ್ರವಾಸೋದ್ಯಮ ಬೆಳವಣಿಗೆಗೆ ಬಲ ತುಂಬಬಹುದಾಗಿದೆ.

    ಈ ಯೋಜನೆಯಲ್ಲಿ ಹೋಟೆಲ್ ವಾಸ್ತವ್ಯ, ಪ್ರಯಾಣ ಮತ್ತು ಪ್ರವೇಶ ಶುಲ್ಕಗಳಲ್ಲಿ ರಿಯಾಯಿತಿ ಪಡೆಯಲು ಅವಕಾಶ ಕಲ್ಪಿಸಲಾಗುತ್ತಿದೆ. 50 ಹೊಸ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲಾಗುವುದು; ಪ್ರವಾಸಿಗರಿಗಾಗಿ ಮಾಹಿತಿ ಒಳಗೊಂಡ ಅಪ್ಲಿಕೇಶನ್ ರಚಿಸಲಾಗುವುದು ಮತ್ತು ಭೌಗೋಳಿಕ ಸೂಚಕ (ಜಿಐ) ಇರುವ ಕರಕುಶಲ ಮತ್ತು ಉತ್ಪನ್ನಗಳನ್ನು ಪ್ರದರ್ಶಿಸಲು ರಾಜ್ಯ ರಾಜಧಾನಿಗಳಲ್ಲಿ ಯೂನಿಟಿ ಮಾಲ್​ಗಳನ್ನು ಸ್ಥಾಪಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಈ ಕ್ರಮಗಳ ಮೂಲಕ ಪ್ರವಾಸೋದ್ಯಮವು ನಿರ್ದಿಷ್ಟ ಕಾರ್ಯಸೂಚಿಯನ್ನು ಪಡೆದುಕೊಳ್ಳುತ್ತದೆ ಎಂಬ ನಿರೀಕ್ಷೆ ಅವರದ್ದಾಗಿದೆ.

    1982ರಲ್ಲಿ ಕೇಂದ್ರ ಸರ್ಕಾರವು ಮೊದಲ ಬಾರಿಗೆ ಪ್ರವಾಸೋದ್ಯಮ ನೀತಿ ಪ್ರಕಟಿಸುವ ಮೂಲಕ ಈ ವಲಯಕ್ಕೆ ಪ್ರೋತ್ಸಾಹ ನೀಡಲು ಮುಂದಾಯಿತು. ಅದೇ ವರ್ಷ ಯೋಜನಾ ಆಯೋಗ ಕೂಡ ಪ್ರವಾಸೋದ್ಯವನ್ನು ಒಂದು ಉದ್ಯಮ ಎಂದು ಪರಿಗಣಿಸಿತು. 1987ರಲ್ಲಿ 100 ಕೋಟಿ ರೂ. ನಿಧಿಯೊಂದಿಗೆ ಪ್ರವಾಸೋದ್ಯಮ ಅಭಿವೃದ್ಧಿ ಹಣಕಾಸು ನಿಗಮ ಸ್ಥಾಪಿಸಲಾಯಿತು. ಪ್ರವಾಸಿ ತಾಣ ಅಭಿವೃದ್ಧಿಪಡಿಸುವ, ವಿನೂತನ ಮಾರುಕಟ್ಟೆ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಪ್ರೋತ್ಸಾಹಕ ಕ್ರಮಗಳನ್ನು ಒಳಗೊಂಡ ರಾಷ್ಟ್ರೀಯ ಪ್ರವಾಸೋದ್ಯಮ ನೀತಿ 2022 ಅನ್ನು ಕೇಂದ್ರ ಸರ್ಕಾರ ಘೋಷಿಸಿತು.

    ಭಾರತದಲ್ಲಿ ಪ್ರವಾಸೋದ್ಯಮವು ದೇಶದ ಆರ್ಥಿಕತೆಗೆ ಮಹತ್ವದ್ದಾಗಿದ್ದು, ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರವೂ ಆಗಿದೆ. ವಿಶ್ವ ಪ್ರಯಾಣ ಮತ್ತು ಪ್ರವಾಸೋದ್ಯಮ ಮಂಡಳಿಯ ವರದಿಯ ಅನುಸಾರ 2021ರಲ್ಲಿ ಭಾರತದ ಆರ್ಥಿಕತೆಗೆ ಪ್ರವಾಸೋದ್ಯಮ ಕ್ಷೇತ್ರದಿಂದ -ಠಿ;13.9 ಲಕ್ಷ ಕೋಟಿ ರೂಪಾಯಿ ಕೊಡುಗೆ ದೊರೆತಿದೆ. ಇದು ಒಟ್ಟಾರೆ ದೇಶೀಯ ಉತ್ಪನ್ನದ (ಜಿಡಿಪಿ) ಶೇ. 5.8ರಷ್ಟಾಗುತ್ತದೆ. ಇನ್ನೊಂದು ಮಹತ್ವದ ಸಂಗತಿ ಎಂದರೆ 3.21 ಕೋಟಿ ಜನರಿಗೆ ಉದ್ಯೋಗವನ್ನು ಕಲ್ಪಿಸಿದೆ. 2025ರಲ್ಲಿ ಭಾರತದ ಆರ್ಥಿಕತೆಯನ್ನು 5 ಲಕ್ಷ ಕೋಟಿ ಡಾಲರ್​ಗೆ (410 ಲಕ್ಷ ಕೋಟಿ ರೂಪಾಯಿ) ತಲುಪಿಸುವ ಗುರಿ ಹಾಕಿಕೊಂಡಿರುವ ಕೇಂದ್ರ ಸರ್ಕಾರವು ವಿಪುಲ ಬೆಳವಣಿಗೆಗೆ ಅವಕಾಶ ಇರುವ ಪ್ರವಾಸೋದ್ಯಮ ಕ್ಷೇತ್ರಕ್ಕೆ ಇನ್ನಷ್ಟು ಪ್ರಾಮುಖ್ಯ ಕೊಡಬೇಕಾಗಿರುವುದು ಉದ್ಯೋಗ ಸೃಷ್ಟಿ ದೃಷ್ಟಿಯಿಂದಲೂ ಅಗತ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts