More

    ಡಿ.1ರಿಂದ ಕ್ಷಯರೋಗ ಪತ್ತೆ ಆಂದೋಲನ

    ಬೆಳಗಾವಿ: ಜಿಲ್ಲೆಯಲ್ಲಿ ಡಿ. 1 ರಿಂದ 31ರ ವರಗೆ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾಹಿತಿ ನೀಡಿದ್ದಾರೆ.

    ಇಲ್ಲಿನ ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನದ ಪೂರ್ವಭಾವಿ ಸಭೆಯಲ್ಲಿ, ಮೂರು ಹಂತಗಳಲ್ಲಿ ಕ್ಷಯರೋಗ ಪತ್ತೆ ಆಂದೋಲನ ನಡೆಸಲಾಗುವುದು. ಡಿ.1 ರಿಂದ 10ರ ವರೆಗೆ ಅಥಣಿ, ಹುಕ್ಕೇರಿ, ಗೋಕಾಕ, ಬೈಲಹೊಂಗಲ ತಾಲೂಕು ಮತ್ತು ಬೆಳಗಾವಿ ನಗರ ಪ್ರದೇಶದಲ್ಲಿ ಆಂದೋಲನ ನಡೆಯಲಿದೆ. ಡಿ. 11ರಿಂದ 20ರ ವರೆಗೆ ಕಾಗವಾಡ, ಚಿಕ್ಕೋಡಿ, ಮೂಡಲಗಿ, ರಾಯಬಾಗ, ರಾಮದುರ್ಗ ತಾಲೂಕು ಮತ್ತು ಬೆಳಗಾವಿ ಗ್ರಾಮೀಣ ಪ್ರದೇಶದಲ್ಲಿ ನಡೆಯಲಿದೆ. 3ನೇ ಹಂತದಲ್ಲಿ 21ರಿಂದ 31ರ ವರೆಗೆ ನಿಪ್ಪಾಣಿ, ಕಿತ್ತೂರು, ಖಾನಾಪುರ, ಸವದತ್ತಿ ತಾಲೂಕಿನಲ್ಲಿ ಆಂದೋಲನ ನಡೆಸಲಾಗುವುದು ಎಂದು ವಿವರಿಸಿದರು.

    ನಿರ್ಲಕ್ಷ್ಯ ಬೇಡ: ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿದರೆ ಕ್ಷಯ ರೋಗದಿಂದ ಗುಣಮುಖರಾಗಲು ಸಾಧ್ಯ. ಹೀಗಾಗಿ ರೋಗಿಗಳು ಸಂಪೂರ್ಣವಾಗಿ ನಿಗದಿತ ಚಿಕಿತ್ಸೆ ಪಡೆದುಕೊಳ್ಳಬೇಕು. ಎರಡು ವಾರಕ್ಕೂ ಮೇಲ್ಪಟ್ಟು ಕೆಮ್ಮು, ಸಂಜೆ ವೇಳೆಯಲ್ಲಿ ಜ್ವರ, ಕಫದಲ್ಲಿ ರಕ್ತ ಬೀಳುವುದು, ತೂಕ ಕಡಿಮೆಯಾಗುವ ಲಕ್ಷಣ ಕಂಡುಬಂದರೆ ಕೂಡಲೇ ಕ್ಷಯರೋಗ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

    ಮನೆಮನೆಗೆ ಭೇಟಿ: ಜಿಲ್ಲಾ ಕ್ಷಯರೋಗ ನಿಂತ್ರಣಾಧಿಕಾರಿ ಅನಿಲ ಕೊರಬು ಮಾತನಾಡಿ, ಜಿಲ್ಲೆಯ 53.55 ಲಕ್ಷ ಜನಸಂಖ್ಯೆ ಪೈಕಿ ಶೇ. 20 ಜನರನ್ನು ಗುರುತಿಸಿ ಮನೆ ಮನೆಗೆ ಭೇಟಿ ನೀಡಿ ಕ್ಷಯರೋಗ ತಪಾಸಣೆ ಮಾಡುವ ಗುರಿ ಹೊಂದಲಾಗಿದೆ. ಕೋವಿಡ್ ಸಂದರ್ಭದಲ್ಲಿ ಸೋಂಕಿತರಾಗಿ ಮತ್ತೆ ಗುಣಮುಖರಾಗಿರುವಂತಹ ಜನರನ್ನು ಕ್ಷಯರೋಗ ಪತ್ತೆಗೆ ಸಂಬಂಧಿಸಿದಂತೆ ಪರೀಕ್ಷೆಗೆ ಒಳಪಡಿಸಲಾಗುವುದು ಎಂದರು.

    ಭಿತ್ತಿಪತ್ರ ಬಿಡುಗಡೆ: ಮಕ್ಕಳ ಮಾರಾಟ ತಡೆಗಟ್ಟುವುದು ಹಾಗೂ ದತ್ತು ಮಕ್ಕಳ ಸ್ವೀಕಾರಕ್ಕೆ ಕಾನೂನು ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸೇರಿ ಎಲ್ಲ ಅಧಿಕಾರಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಬಳಿಕ ಕ್ಷಯರೋಗಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು.

    ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ, ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ ಚಂದ್ರಶೇಖರ ನೀಲಗಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ವಿ. ಮುನ್ಯಾಳ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಬಾಲಕೃಷ್ಣ ತುಕ್ಕಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಗುರುನಾಥ ಕಡಬೂರ, ಕಾರ್ಮಿಕ ಇಲಾಖೆ ಅಧಿಕಾರಿ ತರನ್ನುಂ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts