More

    ರಾಗಿ ಬೆಳೆಗೆ ಸೈಕ್ಲೋನ್ ಹೊಡೆತ: ಮೊಳಕೆಯೊಡೆದು ನೆಲಕಚ್ಚಿದ ಬೆಳೆ, ಮೇವಿಗೂ ತೊಂದರೆ 

    ಮಾಗಡಿ: ತಾಲೂಕಿನಾದ್ಯಂತ ಕಟಾವು ಮಾಡಿದ ರಾಗಿ ಬೆಳೆ ಜಮೀನಿನಲ್ಲೇ ಬಿದ್ದಿದ್ದು, ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗಿದೆ. ಸರ್ಕಾರ ರಾಗಿ ಬೆಳೆಗಾರರ ನೆರವಿಗೆ ಧಾವಿಸಬೇಕಿದೆ.

    ರಾಗಿ ತಾಲೂಕಿನ ಪ್ರಮುಖ ಬೆಳೆಯಾಗಿದ್ದು, ಶೇ.90ರಷ್ಟು ಮಂದಿ ಬೆಳೆಯತ್ತಾರೆ. ಈ ಬಾರಿ ಉತ್ತಮ ಬೆಳೆ ಬಂದಿತ್ತು. ಕೊನೆಯ ಹಂತದಲ್ಲಿ ಶೇ.80ರಷ್ಟು ಮಂದಿ

    ರಾಗಿ ಕಟಾವು ಮಾಡುತ್ತಿದ್ದಂತೆ ನಿರಂತರ ಸೈಕ್ಲೋನ್​ನಿಂದಾಗಿ ಸುರಿದ ಮಳೆಗೆ ರಾಗಿ ತೆನೆ ನೆನೆದು ಮೊಳಕೆಯೊಡೆದು, ಗೆದ್ದಲು ಹಿಡಿದು ಹಾಳಾಗಿದೆ. ಜತೆಗೆ ರಾಸುಗಳ ಮೇವಿಗೂ ತೊಂದರೆಯಾಗಿದೆ.

    ಈ ಬಾರಿ ಉತ್ತಮ ಬೆಳೆಯಾಗಿ ಕಟಾವಿಗೆ ಸಿದ್ಧವಾಗಿದ್ದರಿಂದ ರೈತರು ಕಳೆದ ವರ್ಷ ಶೇಖರಿಸಿಟ್ಟಿದ್ದ ರಾಗಿಯನ್ನೆಲ್ಲ ಮಾರಿ ಇದೀಗ ಪರಿತಪಿಸುವಂತಾಗಿದೆ. ಮತ್ತಷ್ಟು ರೈತರು ಸಾಲ ಮಾಡಿ ರಾಸುಗಳನ್ನು ತಂದು ರಾಗಿ ಬೆಳೆದಿದ್ದರು. ಈಗ ಫಸಲು ಕೈಸೇರುವ ಹೊತ್ತಿನಲ್ಲಿ ಮಳೆ ಸುರಿದು ಫಸಲು ಹಾಳಾಗಿದೆ. ಬೆಳೆಯೂ ಕೈಕೊಟ್ಟಿರುವುದರಿಂದ ಸಾಲ ಮರು ಪಾವತಿ ಕಷ್ಟವಾಗಿದೆ.

    ಕರೊನಾ ಹಿನ್ನೆಲೆಯಲ್ಲಿ ನಗರದಲ್ಲಿದ್ದವರೂ ಸ್ವಗ್ರಾಮಗಳಿಗೆ ಹಿಂದಿರುಗಿ ಬೇಸಾಯ ಮಾಡದೆ ಬಿಟ್ಟಿದ್ದ ಭೂಮಿಯನ್ನು ಹಸನುಗೊಳಿಸಿ ವ್ಯವಸಾಯ ಮಾಡಿ ರಾಗಿ ಬೆಳೆದಿದ್ದರು. ಈಗಿನ ಸ್ಥಿತಿ ನೋಡಿ ಮತ್ತೆ ನಗರ ಪ್ರದೇಶಕ್ಕೆ ಹಿಂದಿರುಗಲು ಮುಂದಾಗಿದ್ದಾರೆ.

    ಕಳೆದ ವಾರ ಸುರಿದ ಮಳೆಯಿಂದಾಗಿ ಕಟಾವು ಮಾಡಿದ ರಾಗಿ ಹಾಳಾಗಿರುವ ಬಗ್ಗೆ ಜಿಲ್ಲೆಯ ಎಲ್ಲ ಹೋಬಳಿ ವ್ಯಾಪ್ತಿಯಲ್ಲಿ ಸಮೀಕ್ಷೆ ಕೈಗೊಂಡು ವಸ್ತುಸ್ಥಿತಿ ವರದಿಯನ್ನು ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

    | ಅಶೋಕ್ ಕೃಷಿ ಉಪನಿರ್ದೇಶಕರು, ರಾಮನಗರ

    ತಾಲೂಕಿನಲ್ಲಿ ರಾಗಿ ಬೆಳೆ ಸಂಪೂರ್ಣ ನೆಲಕಚ್ಚಿದ್ದು ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ ಮತ್ತು ಶಾಸಕ ಎ. ಮಂಜುನಾಥ್ ನಷ್ಟದ ಬಗ್ಗೆ ಸರ್ಕಾರದ ಗಮನಕ್ಕೆ ತಂದು ರೈತರಿಗೆ ಸೂಕ್ತ ಪರಿಹಾರ ಕೊಡಿಸಬೇಕು ಹಾಗೂ ಮಾಗಡಿ ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕು.

    | ಎಚ್.ಎಂ. ಲೋಕೇಶ್ ಮಾಗಡಿ ತಾಲೂಕು ರೈತಸಂಘದ ಅಧ್ಯಕ್ಷ

    ಎಂ.ಎಸ್. ಸಿದ್ದಲಿಂಗೇಶ್ವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts