More

    ಶ್ರೀರಾಮನ ಚಿತ್ರಕ್ಕೆ ವಂದಿಸಿದ ಕಪಿರಾಯ

    ಹೊಸದುರ್ಗ: ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯಾಗಿ ಒಂದು ವಾರ ಕಳೆದರೂ ದೇಶದಲ್ಲಿ ರಾಮೋತ್ಸವದ ಅಬ್ಬರ ಮಾತ್ರ ಕಡಿಮೆಯಾಗುತ್ತಿಲ್ಲ. ಕೇವಲ ಮನುಷ್ಯರಲ್ಲ ಪ್ರಾಣಿಗಳು ಕೂಡ ರಾಮನ ಆರಾಧನೆಯಲ್ಲಿ ತೊಡಗಿರುವ ಅಪರೂಪದ ಕ್ಷಣ ಶನಿವಾರ ಪಟ್ಟಣದ ಗಾಂಧಿ ವೃತದಲ್ಲಿ ಕಂಡು ಬಂತು.

    ರಾಮನ ಪ್ರತಿಷ್ಠಾಪನೆ ಅಂಗವಾಗಿ 65 ಅಡಿ ಎತ್ತರ ಹಾಗೂ 20 ಅಡಿ ಅಗಲದ ಬೃಹತ್ ಶ್ರೀರಾಮನ ಕಟೌಟ್ ಅಳವಡಿಸಲಾಗಿದೆ. ಶನಿವಾರ ಬೆಳಗ್ಗೆ ಕೋತಿಯೊಂದು ಕಟೌಟ್‌ಗೆ ಹಾಕಲಾಗಿರುವ ಕಂಬಗಳ ಸಹಾಯದಿಂದ ಮೇಲ್ಭಾಗಕ್ಕೇರಿದೆ.

    3 ಗಂಟೆಗೂ ಹೆಚ್ಚು ಕಾಲ ಕಟೌಟ್ ಮೇಲೆ ಕುಳಿತಿದ್ದ ಕೋತಿ ಹೂವಿನ ಹಾರದಿಂದ ಹೂವನ್ನು ಕಿತ್ತು ರಾಮನ ತಲೆಯ ಮೇಲೆ ಹಾಕುತ್ತಿದ್ದ ದೃಶ್ಯ ರಾಮಭಕ್ತರಲ್ಲಿ ಅಚ್ಚರಿಗೆ ಕಾರಣವಾಗಿದೆ. ಕೋತಿಯ ಈ ಕಾರ್ಯ ಕಂಡ ಜನರು ನಮಸ್ಕರಿಸಿ ಮುಂದೆ ಸಾಗಿದರು.

    ಬೆಳಗಿನ ವಾಯುವಿಹಾರಕ್ಕೆ ತೆರಳಿದ್ದ ಮಾಜಿ ಪುರಸಭಾ ಸದಸ್ಯ ಕೆ.ಆರ್.ಪ್ರವೀಣ್ ತಮ್ಮ ಮೊಬೈಲ್‌ನಲ್ಲಿ ಕೋತಿ, ರಾಮನ ಮೇಲೆ ಹೂವು ಚೆಲ್ಲುತ್ತಿದ್ದ ದೃಶ್ಯವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಸ್ವಲ್ಪ ಸಮಯದಲ್ಲಿಯೇ ವಿಡಿಯೋ ಹಾಗೂ ಫೋಟೋ ವೈರಲ್ ಆಗಿದೆ. ಜನರು ಕೋತಿಯನ್ನು ನೋಡಲು ತಂಡೋಪ ತಂಡವಾಗಿ ಬರುತ್ತಿದ್ದಾರೆ.

    ರಾಮೋತ್ಸವದ ಅಂಗವಾಗಿ ಶಾಸಕ ಬಿ.ಜಿ.ಗೋವಿಂದಪ್ಪ ಅವರ ಪುತ್ರ ಬಿ.ಜಿ.ಅರುಣ್ ಹಾಗೂ ಉದ್ಯಮಿ ವಿಜಯಕುಮಾರ್ ಸೇರಿ ವಿಶೇಷ ಸಾರ್ವಜನಿಕ ರಾಮಪೂಜಾ ಕಾರ್ಯಕ್ರಮವನ್ನು ಆಯೋಜಿಸಿ ವಿಶೇಷ ಕಟೌಟ್ ಅಳವಡಿಸಿದ್ದರು.

    ಎತ್ತರದ ಕಟೌಟ್ ಸೆಲ್ಫಿ ಸ್ಪಾಟ್ ಆಗಿ ಬದಲಾಗಿತ್ತು. ಶನಿವಾರದ ಘಟನೆಯ ನಂತರ ರಾಮ ಹಾಗೂ ಆಂಜನೇಯನ ಸಂಗಮ ಸ್ಥಳವಾಗಿ ಬದಲಾಗಿದೆ ಎನ್ನುವುದು ಸ್ಥಳಿಯರ ಅಭಿಪ್ರಾಯವಾಗಿದೆ.

    ರಾಮನ ಕಟೌಟ್‌ಗೆ ನಮಿಸಿದ ಕೋತಿ: ವಾಯುವಿಹಾರಕ್ಕೆ ತೆರಳಿದ್ದ ವೇಳೆ ಕೋತಿ ಶ್ರೀರಾಮನ ಮೇಲೆ ಕುಳಿತು ನಮಸ್ಕರಿಸುತ್ತಿದ್ದ ದೃಶ್ಯ ಕಂಡುಬಂತು. ದೃಶ್ಯವನ್ನು ಚಿತ್ರೀಕರಿಸಿ ಜಾಲತಾಣದಲ್ಲಿ ಹಂಚಿಕೊಂಡೆ. ಆಂಜನೇಯನ ಪೂಜಾರಾಧನೆ ನಡೆಯುವ ಶನಿವಾರದ ದಿನ ಕೋತಿಯು ರಾಮನಿಗೆ ನಮನ ಸಲ್ಲಿಸುತ್ತಿದ್ದ ದೃಶ್ಯ ಭಕ್ತಿ ಹೆಚ್ಚಾಗಲು ಕಾರಣವಾಯಿತು ಎಂದು ಮಾಜಿ ಪುರಸಭಾ ಸದಸ್ಯ ಕೆ.ಆರ್.ಪ್ರವೀಣ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts