More

    ತುಂಡರಿಸಿದ ಕಾಲುಗಳ ತಂದೆಸೆದ ಕೈಗಳೆಲ್ಲಿ?

    ಬೆಳಗಾವಿ: ‘ಯಾರೋ ಆರೋಪಿತರು ಪುರುಷ ಅಥವಾ ಮಹಿಳೆಯನ್ನು ಯಾವುದೋ ಕಾರಣಕ್ಕೆ ಎಲ್ಲಿಯೋ ಕೊಲೆ ಮಾಡಿ ದೇಹದ ಎರಡೂ ಕಾಲುಗಳನ್ನು ಕತ್ತರಿಸಿ ಪುರಾವೆ ನಾಶಪಡಿಸುವ ಉದ್ದೇಶದಿಂದ ಅವುಗಳನ್ನು ತಂದು ನಗರದ ಕೇಂದ್ರ ಬಸ್ ನಿಲ್ದಾಣ ಬಳಿಯ ಕಿಲ್ಲಾ ಸಮೀಪದ ತಗ್ಗಿನಲ್ಲಿ ಒಗೆದು ಹೋದ ಅಪರಾಧ.

    ಅಂತ ವಗೈರೆ ನಮೂದು ಅದೆ’ ಹೀಗೆ, ‘ಎಸೆದು ಹೋಗಿರುವ ಅಪರಾಧ’ ಎಂದು ಪೊಲೀಸರು ಫುಲ್‌ಸ್ಟಾಪ್ ಹಾಕಿರುವುದು ಕೇವಲ ಎಫ್‌ಐಆರ್‌ನಲ್ಲಿ ಮಾತ್ರವಲ್ಲ, ಪ್ರಕರಣದ ವಿಚಾರಣೆಯನ್ನೇ ನಡೆ ಸದೇ ಪೂರ್ಣವಿರಾಮ ಇಟ್ಟಂತಿದೆ. ಕಾಲುಗಳನ್ನು ತುಂಡರಿಸಿದ ಕೈಗಳು ಯಾರದ್ದು ಎಂದು ವರ್ಷ ಕಳೆದರೂ ಪತ್ತೆಯಾಗದಿರುವುದು ಹಲವು ಅನುಮಾನ ಹುಟ್ಟು ಹಾಕಿರುವುದು ಸುಳ್ಳಲ್ಲ. ಕಳೆದ ವರ್ಷದ ಮೊದಲ ಶನಿವಾರ ಹಾಡಹಗಲೇ ಕಿಲ್ಲಾದ ಖುಲ್ಲಾ ಸ್ಥಳದಲ್ಲಿ ದೊರೆತ ಎರಡು ತುಂಡರಿಸಿದ ಕಾಲುಗಳ ಪ್ರಕರಣ ಜಿಲ್ಲಾದ್ಯಂತ ಭಯದ ವಾತಾವರಣ ಸೃಷ್ಟಿಸಿತ್ತು.

    ದಿನವೂ ಲಕ್ಷಕ್ಕೂ ಅಧಿಕ ಜನ ಪ್ರಯಾಣಿಸುವ ಈ ಪ್ರದೇಶದಲ್ಲಿ ಸೈಕೋ ಕಿಲ್ಲರ್‌ನಂತೆ ಬರ್ಬರವಾಗಿ ಹತ್ಯೆಗೈದ ಸ್ಥಿತಿಯಲ್ಲಿ ಹಾಗೂ ಯಾವುದೇ ಭಯವಿಲ್ಲದೆ ತುಂಡರಿಸಿದ ಕಾಲುಗಳನ್ನು ಎಸೆಯಲಾಗಿತ್ತು. ಆದರೆ, ವರ್ಷ ಕಳೆದರೂ ಪೊಲೀಸರು ಪ್ರಕರಣವನ್ನು ತಾರ್ಕಿಕವಾಗಿ ಇತ್ಯರ್ಥಗೊಳಿಸದಿರುವುದು ಮತ್ತಷ್ಟು ಆತಂಕಪಡುವಂತಾಗಿದೆ ಎಂದು ಹೆಸರು ಹೇಳಲಿಚ್ಛಿಸದ ವಕೀಲರೊಬ್ಬರು ಹೇಳಿದ್ದಾರೆ.

    ನಿಮಿಷದೊಳಗೆ ಎಸೆದು ಪರಾರಿ: ಬಸ್ ನಿಲ್ದಾಣಗಳಲ್ಲಿ ಕಳ್ಳರು ಕ್ಷಣಾರ್ಧದಲ್ಲಿ ಪಿಕ್‌ಪಾಕೆಟ್ ಮಾಡುವುದು ಎಲ್ಲರಿಗೂ ಗೊತ್ತು. ಆದರೆ, ಬಸ್ ನಿಲ್ದಾಣದ ಕೂಗಳತೆಯಲ್ಲಿ ಕೇವಲ 60 ಸೆಕೆಂಡ್ ಸಮಯದಲ್ಲಿ ಕೊಲೆಗೈದ ಶವದ ಕಾಲುಗಳನ್ನು ಎಸೆದು ಸಾಕ್ಷಾೃಧಾರಗಳೇ ಸಿಗದಂತೆ ಮಾಡಿ ಪರಾರಿಯಾಗಲು ಸಾಧ್ಯವೇ? ಈ ಪ್ರಶ್ನೆಗೆ ಸಾಧ್ಯ ಎಂದು ಉತ್ತರಿಸುತ್ತಿದೆ ಮಾರ್ಕೆಟ್ ಠಾಣೆ ಪೊಲೀಸರು ಐಪಿಸಿ 1860(ಉಎಸ್302,201) ಅಡಿ ದಾಖಲಿಸಿಕೊಂಡಿರುವ ಪ್ರಕರಣದ ಪ್ರಥಮ ವರ್ತಮಾನ ವರದಿ.

    ಠಾಣೆಯಿಂದ ಪೂರ್ವ ದಿಕ್ಕಿನ 1 ಕಿ.ಮೀ. ವ್ಯಾಪ್ತಿಯ 20ನೇ ಗಸ್ತಿನ ಪ್ರದೇಶದಲ್ಲಿ 2020ರ ಜ. 4ರಂದು ಮಧ್ಯಾಹ್ನ 2.44ರಿಂದ 2.45ರ ಒಂದೇ ನಿಮಿಷದ ಅವಧಿ ಯಲ್ಲಿ ಈ ಕೃತ್ಯ ನಡೆದಿದೆ. ಆಟೋ ಚಾಲಕನೋರ್ವ ಎಸೆದ ತುಂಡರಿಸಿದ ಕಾಲುಗಳನ್ನು ಕಂಡು ದೂರು ನೀಡಿರುವುದಾಗಿ ಸಂಜೆ 3.45ಕ್ಕೆ ಪ್ರಕರಣ ದಾಖಲಾಗಿದೆ.

    ಪ್ರಜ್ಞಾವಂತರ ಪ್ರಶ್ನೆ: ಪೊಲೀಸ್ ಇಲಾಖೆ ಅಂಕಿ-ಅಂಶಗಳ ಪ್ರಕಾರ ಜಿಲ್ಲಾದ್ಯಂತ ಬಾಲಕ-ಬಾಲಕಿ ಹಾಗೂ ಮಹಿಳೆ ಮತ್ತು ಪುರುಷ ಸೇರಿ ಅಂದಾಜು 250ಕ್ಕೂ ಅಧಿಕ ಜನ 2020ರಲ್ಲಿ ನಾಪತ್ತೆಯಾಗಿದ್ದಾರೆ. ಕಣ್ಮರೆಯಾಗಿರುವರಲ್ಲಿ ಹೀಗೆ ದಾರುಣವಾಗಿ ಅಂತ್ಯಕಂಡವ ರೆಷ್ಟೋ? ಸಾಕ್ಷಿ ನಾಶಕ್ಕಾಗಿ ನಡೆದ ವಿಕೃತಿ ಎಂತದ್ದೋ? ಎಲ್ಲಿದ್ದಾರೋ ಅಪರಾಧಿಗಳು ಎಂಬುದು ಪೊಲೀಸರು ತನಿಖೆ ನಡೆಸಬೇಕು. ಸಾಕ್ಷಾೃಧಾರ ಸಿಗದ ಕಾರಣ ಡಿಟೆಕ್ಟ್ ಮಾಡಲಾಗಿಲ್ಲ ಎನ್ನುವ ಅವರ ಹೇಳಿಕೆ ಎಷ್ಟರಮಟ್ಟಿಗೆ ಸೂಕ್ತ ಎಂದು ಪ್ರಶ್ನಿಸುತ್ತಾರೆ ಪ್ರಜ್ಞಾವಂತರು.

    ಬಸ್ ನಿಲ್ದಾಣ ಸಮೀಪದಲ್ಲಿ ದೊರೆತಿದ್ದ ತುಂಡರಿಸಿದ್ದ ಕಾಲುಗಳ ಪ್ರಕರಣವನ್ನು ಸಾಕ್ಷಾೃಧಾರಗಳ ಕೊರತೆಯಿಂದ ಬೇಧಿಸಲು ಸಾಧ್ಯವಾಗಿಲ್ಲ. ಸಂಬಂಧಪಟ್ಟವರು ಪೊಲೀಸ್ ಠಾಣೆಗಳಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರೆ ತನಿಖೆಗೆ ಸಹಾಯವಾಗಿರುತ್ತಿತ್ತು. ಆದರೂ ಈ ಪ್ರಕರಣದ ತನಿಖೆ ಮುಂದುವರಿದಿದೆ.
    | ಕೆ.ತ್ಯಾಗರಾಜನ್, ನಗರ ಪೊಲೀಸ್ ಆಯುಕ್ತ

    | ರವಿ ಗೋಸಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts