More

    ಭದ್ರಾವತಿಯಲ್ಲಿ ಅಕ್ರಮಗಳಿಗೆ ಕಡಿವಾಣ ಹಾಕಿ

    ಶಿವಮೊಗ್ಗ: ಭದ್ರಾವತಿ ಶಾಸಕ ಸಂಗಮೇಶ್ವರ್ ಮಕ್ಕಳು ಅಕ್ರಮ ಕೂಟ ರಚಿಸಿಕೊಂಡು ಓಸಿ, ಮಟ್ಕಾ, ಇಸ್ಪೀಟ್ ಮುಂತಾದವುದಕ್ಕೆ ಉತ್ತೇಜನ ನೀಡುತ್ತಿದ್ದಾರೆ. ಇದನ್ನು ಪ್ರಶ್ನಿಸಿದವರ ವಿರುದ್ಧ ಸುಳ್ಳು ದೂರು ನೀಡಿ ಪ್ರಕರಣ ದಾಖಲಾಗುವಂತೆ ಮಾಡುತ್ತಿದ್ದಾರೆ. ಭದ್ರಾವತಿಯಲ್ಲಿ ಶಾಂತಿ ಸುವ್ಯವಸ್ಥೆ ಪಾಲನೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಪ್ರಮುಖರ ನೇತೃತ್ವದಲ್ಲಿ ಬುಧವಾರ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

    ಭದ್ರಾವತಿ ಪೊಲೀಸ್ ಠಾಣೆಗೆ ಇದರ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಪೊಲೀಸ್ ಅಧಿಕಾರಿಗಳಿಗೆ ಕಾನೂನುಬಾಹಿರ ಕೃತ್ಯಗಳ ಬಗ್ಗೆ ವಿವರಿಸಿದರೂ ಅವರು ಕ್ರಮ ಕೈಗೊಂಡಿಲ್ಲ. ಶಾಸಕರ ಮಕ್ಕಳ ಅಕ್ರಮಕೂಟಕ್ಕೆ ರಾಜಕೀಯದ ಶ್ರೀರಕ್ಷೆ ಇದೆ. ಇವರ ಹಣದ ಆಸರೆಗೆ ಜನರು ದುಶ್ಚಟಗಳ ದಾಸರಾಗುತ್ತಿದ್ದಾರೆ ಎಂದು ಮನವಿಯಲ್ಲಿ ಆತಂಕ ವ್ಯಕ್ತಪಡಿಸಲಾಯಿತು.
    ಅಕ್ರಮಗಳನ್ನು ಪ್ರಶ್ನಿಸಿದವರ ವಿರುದ್ಧ ಸುಳ್ಳು ದೂರು, ಜಾತಿ ನಿಂದನೆ ಪ್ರಕರಣಗಳು ದಾಖಲಾಗುತ್ತಿರುವುದು ದುರಂತ. ಆ ಮೂಲಕ ಎದುರಾಳಿಗಳಲ್ಲಿ ಭಯ ಮೂಡಿಸುವ ಪ್ರಯತ್ನ ನಡೆಯುತ್ತಿದೆ. ಅಕ್ರಮಗಳನ್ನು ತಡೆಯಲು ಮುಂದಾಗುವ ಸರ್ಕಾರಿ ಅಧಿಕಾರಿಗಳಿಗೆ ವರ್ಗಾವಣೆಯ ಭೀತಿ ಮೂಡಿಸಲಾಗುತ್ತಿದೆ. ಕಾಂಗ್ರೆಸ್ ಪಕ್ಷದವರ ಮೇಲೆ ಕೇಸು ದಾಖಲಾದರೆ ರಾಜಕೀಯ ಪ್ರಭಾವ ಬಳಸಿ ಪ್ರಕರಣ ರದ್ದುಪಡಿಸಲಾಗುತ್ತದೆ. ಭದ್ರಾವತಿಯಲ್ಲಿ ಭೂಮಾಫಿಯ ಬಲವಾಗಿ ಬೆಳೆಯುತ್ತಿದೆ. ಭೂಮಾಲೀಕರೊಬ್ಬರ ತೋಟಕ್ಕೆ ನುಗ್ಗಿ ತೋಟವನ್ನು ದ್ವಂಸ ಮಾಡಲಾಗಿದೆ. ಅವರ ಮೇಲೂ ಹಲ್ಲೆ ನಡೆಸಿದ್ದಾರೆ. ಆ ಕುಟುಂಬದವರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸಲಾಗಿದೆ. ಬಹುತೇಕ ಪೊಲೀಸ್ ಅಧಿಕಾರಿಗಳು ಶಾಸಕರ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ದೂರಲಾಯಿತು.
    ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳು ಗೋಪಾಲ್, ಪ್ರಮುಖರಾದ ಶಾರದಾ ಅಪ್ಪಾಜಿ ಗೌಡ, ಕೆ.ಬಿ.ಪ್ರಸನ್ನಕುಮಾರ್, ದೀಪಕ್ ಸಿಂಗ್, ಕಾಂಗ್ರೆಸ್ ಮುಖಂಡ ಚಂದ್ರೇಗೌಡ, ಬಿಜೆಪಿ ಮುಖಂಡ ಮಂಗೋಟೆ ರುದ್ರೇಶ್ ಮುಂತಾದವರು ಮನವಿ ಸಲ್ಲಿಸುವ ಸಂದರ್ಭದಲ್ಲಿದ್ದರು.
    ಸಂಗಮೇಶ್ ಕಾಂಗ್ರೆಸ್: ಭದ್ರಾವತಿಯಲ್ಲಿ ಕಾಂಗ್ರೆಸ್ ನಿರ್ನಾಮವಾಗಿದೆ. ಅಲ್ಲಿರುವುದು ಸಂಗಮೇಶ್ ಕಾಂಗ್ರೆಸ್. ಹೀಗೆಂದು ಗಂಭೀರ ಆರೋಪ ಮಾಡಿದ್ದು ಸ್ವತಃ ಕಾಂಗ್ರೆಸ್ ಮುಖಂಡ ಚಂದ್ರೇಗೌಡ. ಭದ್ರಾವತಿಯಲ್ಲಿ ಎಲ್ಲ ಪಕ್ಷದ ಕಾರ್ಯಕರ್ತರಿಗೂ ಅನ್ಯಾಯವಾಗುತ್ತಿದೆ. ಶಾಸಕರ ಕುಟುಂಬದವರ ದೌರ್ಜನ್ಯ ಹೆಚ್ಚುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts