More

  ಸಾಂಸ್ಕೃತಿಕ ಸಮಗ್ರತೆಯ ತುರ್ತು ಅವಶ್ಯಕತೆ; ಡಾ.ಕೆ.ಎಸ್​.ನಾರಾಯಣಾಚಾರ್ಯರ ಅಂಕಣ

  ಸಾಂಸ್ಕೃತಿಕ ಸಮಗ್ರತೆಯ ತುರ್ತು ಅವಶ್ಯಕತೆ; ಡಾ.ಕೆ.ಎಸ್​.ನಾರಾಯಣಾಚಾರ್ಯರ ಅಂಕಣ

  ಸಮಗ್ರತೆ (ಇಂಟೆಗ್ರೆಟಿ) ಬೇರೆ, ಏಕತೆ(ಯೂನಿಟಿ) ಬೇರೆ, ಏಕರೂಪತೆ (ಯೂನಿಫಾರ್ವಿುಟಿ) ಎಂಬುದೇ ಬೇರೆ. ಈ ವಿಷಯದಲ್ಲಿ ತುಂಬ ಗೊಂದಲವಿದ್ದದ್ದು ಗಾಂಧಿ, ನೆಹ್ರೂ ಅವರ ಕೂಸು ಕಾಂಗ್ರೆಸ್ಸಿಗೆ, ಅವರ ಇಂದಿನ ಅನುಯಾಯಿಗಳ ‘ಹೋದದ್ದೇ ದಾರಿ’ ಎಂಬ ಉಡಾಫೆತನ, ಪ್ರಕಟ ಕುಟುಂಬಾಸಕ್ತಿ, ಸ್ವಾರ್ಥ, ಇವುಗಳ ಪರಿಣಾಮವಾದ ರಾಷ್ಟ್ರ ಹಿತಾಸಕ್ತಿಯ ನಾಶ, ರಾಷ್ಟ್ರರಕ್ಷಣೆಯ ವಿಷಯದಲ್ಲಿ ಉದಾಸೀನತೆ, ಕ್ರಿಮಿನಲ್ ನೆಗ್ಲಿಜನ್ಸಸ್, ರಕ್ಷಣಾ ಸಾಮಗ್ರಿ ಆಮದಿನಲ್ಲೂ ಪರ್ಸೆಂಟೇಜು, ಸ್ವದೇಶೀ ರಾಷ್ಟ್ರಭಕ್ತರಲ್ಲಿ, ಇಂಥ ಸಂಘಟನೆಗಳಲ್ಲಿ ದ್ವೇಷ, ಅಪಪ್ರಚಾರ, ವಿದೇಶೀ ನೆಲಗಳಲ್ಲಿ ಸ್ವದೇಶ ದೂಷಣೆ, ಢೋಂಗೀ ಸಮರಸತಾವಾದದ ನಾಚಿಕೆಗೆಟ್ಟ ಅಗ್ಗದ ಪ್ರದರ್ಶನ ಇಂಥವು ಇವರಿಗೆ ಬಡತನವನ್ನೂ, ಹಳ್ಳಿಗರ ಜೀವನದ ಕಷ್ಟಸುಖಗಳನ್ನೂ ಕಣ್ಣಿಂದ ನೇರವಾಗಿ ಕಾಣದ, ಅವಕ್ಕೆ ಸ್ಪಂದಿಸದ ರಾಹುಲ್, ಪ್ರಿಯಾಂಕಾಗಳು ಉತ್ತರ ಪ್ರದೇಶದ ಹಾಥರಸ್ ಎಂಬಲ್ಲಿನ ಬಡ ಹುಡುಗಿಯ ಅತ್ಯಾಚಾರ ಪ್ರಕರಣದಲ್ಲಿ ಸಾಂತ್ವನ ನೆಪದಲ್ಲಿ ಅಲ್ಲಿ ಕಾಣಿಸಿಕೊಳ್ಳುವ ಹಪಾಹಪಿಗೆ ಬಿದ್ದದ್ದು, ‘ಪೊಲೀಸರು ತಳ್ಳಿದರು, ಪ್ರಹಾರ ಮಾಡಿದರು’ ಎಂಬ ಆಕ್ರೋಶ ಮಾಡಿದ್ದೊಂದೇ ಸಾಧನೆ! ಅಲ್ಲಿ ಏನು ನಡೆಯಿತೋ? ವಿಚಾರಣೆಯಾದ ಬಳಿಕ ಸತ್ಯ ಹೊರಬರುತ್ತದೆ. ಇವರಿಗೆ ‘ಪೊಲಿಟಿಕಲ್ ಮೈಲೇಜು’ ಬೇಕಲ್ಲ? ಅದು ಹೂರಣ! ಒಬ್ಬರು ಗಾಂಧಿಯವರ ಯಾವುದೋ ಒಂದು ಪ್ರಸಂಗದ ದಲಿತರ ಪರ, ಒಬ್ಬನನ್ನು ತಮ್ಮ ಆಶ್ರಮಕ್ಕೆ ಸೇರಿಸಿಕೊಂಡುದರ ಪರಿಣಾಮ ಎದುರಿಸಿದ ಪ್ರಸಂಗದ ‘ಹೃದಯಂಗಮ’ ವಿವರಣೆಯಿಂದ ಈಗ ಯಾರೂ ವಿಚಲಿತರಾಗಬೇಕಿಲ್ಲ. ಅಸ್ಪಶ್ಯತಾ ನಿವಾರಣೆಗೆ ಗಾಂಧಿ ಸಾಕಷ್ಟು ಶ್ರಮಿಸಿದ್ದರು; ಸರಿಯಪ್ಪ! ಇತರರೂ ಮಾಡಿರಲಿಲ್ಲವೇ? ಇಂದಿನ ದಲಿತರು ಅಂಬೇಡ್ಕರರನ್ನು ತಮ್ಮ ನಾಯಕರೆಂದು ಒಪು್ಪತ್ತಾರೇ ವಿನಾ ಗಾಂಧಿಯವರನ್ನಲ್ಲ. ಒಂದು ಚರ್ಯುಯಿಂದ ಒಂದೇ ಘಟನೆ, ಒಂದೇ ನಡವಳಿಕೆ, ಒಂದೇ ಹೆಜ್ಜೆಯಿಂದ ಒಬ್ಬರನ್ನು ಅಳೆಯಲು ಆಗದು. ಅಳೆದರೆ ಜರಾಸಂಧನನ್ನೂ ಒಪ್ಪಬೇಕಾಗುತ್ತದೆ. ಈ ರಾಕ್ಷಸ, ಅರ್ಧರಾತ್ರಿಯಲ್ಲಿ ಬ್ರಾಹ್ಮಣರಿಗೆ ದಾನ ಕೊಡುತ್ತಿದ್ದ! ‘ಬ್ರಾಹ್ಮಣಪ್ರಿಯ’ ಎನಿಸಿಕೊಳ್ಳಲು, ಆ ಮೂಲಕ ‘ಚಕ್ರವರ್ತಿ ಪದವಿಗೆ ಅರ್ಹ, ಶಹಬ್ಬಾಸ್’ ಎನಿಸಿಕೊಳ್ಳಲು ಇದು ಪ್ರಚಾರವಾಗಿತ್ತು. ಇಲ್ಲೂ ಒಬ್ಬ ‘ನಾನು ಹುಲ್ಲು ತಿನ್ನುವ ಬ್ರಾಹ್ಮಣನಲ್ಲ’ ಎಂದವರು ಮುಖ್ಯಮಂತ್ರಿಯೂ ಆದರು. ಅವರು ಸಂಜಯ ಗಾಂಧಿ ಅನುಚರರೂ ಇದ್ದು ಸಂಬಂಧ, ವ್ಯವಹಾರ ಎಲ್ಲ ಇಸ್ಲಾಮೀ, ಈಸಾಯಿಗಳೊಡನೆ ಇದ್ದವು. ಒಂದು ಕಡೆ ಬ್ರಾಹ್ಮಣ ಸಮ್ಮೇಳನಕ್ಕೆ ನನ್ನನ್ನೂ ಆಗ ಆಹ್ವಾನಿಸಿದ್ದರು. ಅಲ್ಲಿ ಈ ಮಹಾಶಯರ ಆಗಮನ ಇರುವುದನ್ನು ಅರಿತು ನಾನು ನಿರಾಕರಿಸಿದೆ (ಊರಿನ ಹೆಸರು ಬೇಡ). ‘One Sparrow does not make a troost’ ಎಂಬ ಗಾದೆಯೇ ಇದೆ. ಪಾರಿವಾಳ ಸಾಕುವವರು, ‘ಆಂಟೆನ್ನಾ’ ತರಹ ಜಾಳಗಿ (ಜಾಳಗಿ= ಹಂದರ= ಛಾವಣಿಮೇಲಿನ ಒಂದು ಆಕೃತಿ=ಛತ್ರಿ), ಎತ್ತರಕ್ಕೆ ಏರಿಸಿ, ಅವು ಬಹುಸಂಖ್ಯೆಯಲ್ಲಿ ಕೂಡಲು ವ್ಯವಸ್ಥೆ ಮಾಡುತ್ತಾರೆ. ಒಂದೇ ಪಾರಿವಾಳಕ್ಕೆ ಹಾಗೆ ಮಾಡಲು ಆಗದು ಎಂಬುದು ಆಂಗ್ಲಗಾದೆಯ ಅರ್ಥ. ಮಾರಾಯ್ರೆ! ಯುವಕರು ಎಚ್ಚೆತ್ತಿದ್ದಾರೆ. ಹಿರಿಯರೆಂಬವರ ಮಹಾತಪು್ಪಗಳು ಬಯಲಾಗುತ್ತಿವೆ. ಸಾಮಾಜಿಕ ಜಾಲತಾಣಗಳು ಸಕ್ರಿಯವಾಗಿವೆ. ಒಡೆದ ವ್ಯಕ್ತಿತ್ವದವರು ರಾಷ್ಟ್ರವನ್ನು ಒಗ್ಗೂಡಿಸಲಾರರು ಎಂಬುದು ಅಪ್ಪಟ ಸತ್ಯ.

  ಮನಸ್ಯೇಕಂ ವಜಿಸ್ಯೇಕಂ ಕರ್ಮಣ್ಯೇಕಂ ದುರಾತ್ಮನಾಂ |

  ಮನಸ್ಯೇಕಂ, ವಚಸ್ಯೇಕಂ ಕರ್ಮಣ್ಯೇಕಂ ಮಹಾತ್ಮನಾಂ ||

  ಎಂಬ ಚಾಟು ಶ್ಲೋಕ ಸುಭಾಷಿತದ, ಒಂದೇ ಶಬ್ದದ ವಿಕಾರ, ವಿಚಿತ್ರಾರ್ಥಗಳನ್ನು ಗಮನಿಸಿ. ಇಲ್ಲಿ ‘ಏಕಂ’ ಎಂಬುದು ಉಸಿರಾಟ ಶಬ್ದ. ಶ್ಲೋಕದ ಮೊದಲ ಸಾಲಿನ ಅರ್ಥ ಹೀಗೆ. ‘ಕೆಟ್ಟವಂಗೆ, ಮನದಲ್ಲೇ ಒಂದು, ಬಾಯಲ್ಲೇ ಒಂದು. ಆಚರಣೆಯಲ್ಲೇ ಒಂದು’. ‘ಒಂದು’ ಎಂದರೆ ‘ಬೇರೊಂದು’, ಎಂಬುದು ‘ಒಂದು’ ಶಬ್ದದ ವ್ಯಂಗ್ಯಾರ್ಥ. ಶ್ಲೋಕದ ಎರಡನೇ ಸಾಲಿನ- ಅವೇ ಶಬ್ದಗಳ- ಬೇರೆ ಅರ್ಥ ಹೀಗೆ-‘ಮಹಾತ್ಮರಿಗೆ ಮನಸ್ಸಿನಲ್ಲೂ, ಮಾತಿನಲ್ಲೂ, ಆಚರಣೆಯಲ್ಲೂ ಒಂದೇ- ತ್ರಿಕರಣಗಳ ಸಾರೂಪ್ಯ, ಏಕತೆ’ ಎಂದರ್ಥ. ರಾಷ್ಟ್ರಕ್ಕೆ ಅನ್ವಯಿಸುವಾಗ ಬಹುತ್ವದ ವ್ಯಾಪ್ತಿ, ವೈಚಿತ್ರ್ಯ, ವಿವಿಧತೆಗಳಲ್ಲೂ ಒಂದು ‘ಏಕತೆ’ ಇದೆ ಎಂದಾದರೆ ಅದು ‘ಇಂಟೆಗ್ರೆಟಿ’ ಎಂದಾಗುತ್ತದೆ. Integer ಎಂಬುದಕ್ಕೆ ‘ಅವಿಭಾಜ್ಯ’ ಸಂಖ್ಯೆ ಎನ್ನುತ್ತಾರೆ. ಉದಾಹರಣೆಗೆ 7, 19, 29, ಹೀಗೆ -ಇವುಗಳನ್ನು ಭಾಗಿಸಲು ಬರುವುದಿಲ್ಲ. 8, 12, 24 ಹಾಗಲ್ಲ. ಒಡೆಯಲು 4, 3, 2 ಅಂಕಿಗಳಿಂದ ಸಾಧ್ಯ. ಹಿಂದೂ ಇಸ್ಲಾಮಿ, ಈಸಾಯಿ, ಕಾಮ್ರೇಡರೂ ಸೆಕ್ಯುಲಿಸ್ಟರು ‘ಒಗ್ಗೂಡುವಾಗ’ ಇದು ಆಗದೇ ವಿಧಿ- ಇಲ್ಲವಾದರೆ ಅವರೆಲ್ಲ ‘ಇಂಟಿಗ್ರಲ್’- ಅವಿಭಾಜ್ಯವಾದ ಒಂದು ಮಹಾ ರಾಷ್ಟ್ರ ಕಲ್ಪನೆಯಡಿಯಲ್ಲಿ ಬರಬೇಕಾಗುತ್ತದೆ. ಒಂದು ಅರಳೀಮರ, ಕಾಂಡ ಒಂದೇ. ಅದೇ ಇಂಟೆಗ್ರಲ್ ತತ್ತ್ವ. ಕೊಂಬೆಗಳು, ಮರಿ ಟೊಂಗೆಗಳು, ಕಡ್ಡಿ, ಎಲೆ, ಚಿಗುರು ಇವು ಬಹುತ್ವದಲ್ಲಿದ್ದರೂ ಇವನ್ನು ಕಬ್ಬಿಣದ ತಂತಿಗಳಿಂದ ಕೃತಕವಾಗಿ ಬಿಗಿದು- ಸುತ್ತಿ ‘ಒಂದಾಗಿಸಲು’ ಮಾಡುವ ಯತ್ನ. ಗಾಂಧಿ, ನೆಹ್ರೂ, ಕಾಂಗ್ರೆಸ್ಸು ಮಾಡಿ ವಿಫಲವಾದದ್ದು, ರಾಷ್ಟ್ರನಾಶಕ ಫಲಗಳಲ್ಲಿ ಕಾಣುತ್ತಿದ್ದೀರಿ! ಇದು ಸೆಕ್ಯುಲರ್, ಮಾರೀಚ ಮೋಸ. ‘ಯೂನಿಟಿ’ ಎಂಬುದು ಕ್ರೖೆಸ್ತ ಮಹಮ್ಮದೀಯರಲ್ಲಿ, ಕಮ್ಯುನಿಸ್ಟರಲ್ಲಿ ಯೂನಿಫಾರ್ವಿುಟಿ ಎಂಬ ಸೋಗಿನ ‘ನೆಲಸಮತಾವಾದ’-ರೋಡ್ ರೋಲರ್ ಎಂಬುದು ರಸ್ತೆ ಕಲ್ಲು ಜಲ್ಲಿ ಇಟ್ಟಿಗೆ ಚೂರುಗಳನ್ನೆಲ್ಲ ಸಮತಟ್ಟು ಮಾಡುವಂತೆ, ಬೆಳವಣಿಗೆಗೆ ಅಡ್ಡ, ಅಡಚಣೆ, ಅಸಹಿಷ್ಣು, ಕೃತಕ, ವಿನಾಶಕಾರೀ ಎಂಬುದು ಸತ್ಯ. ರಾಷ್ಟ್ರನಾಯಕರೆಂಬವರ ಚಿಂತನೆಗಳಲ್ಲಿ ಈ ಸಾರೂಪ್ಯ- ‘ಏಕತ್ರಮಿಳನ’ ಇರಬೇಕು. ಅದು ನಮ್ಮ ಮಟ್ಟಿಗೆ ‘ಹಿಂದೂ’ ಎಂಬುದರ ಕಲ್ಪನೆ. ಜೀವನಶೈಲಿ, ಅದರಲ್ಲೇ ವಿವಿಧತೆಯ ಅಡಕ, ಹಾಗೆ ಅಡಗುವಾಗ ಹಾನಿಕರ ಭಿನ್ನತೆ- ಸೆಪರೇಟಿಸಂ-ಪ್ರತ್ಯೇಕತೆ, ಸ್ವಶ್ರೇಷ್ಠತಾವಾದ ಇಲ್ಲದೆ, ಒಂದು ಇನ್ನೊಂದನ್ನು ನುಂಗಲಾರದಂತೆ, ಇರುವ ‘ಸಮರಸತೆ’ (‘ಸಮತೆ’, ‘ಸಮಾನತೆ’ ಅಲ್ಲ), ಅದೇ ಇಂದು ಬೇಕಾದುದು.

  ‘ರಸವೇ ಜನನ, ವಿರಸ ಮರಣ, ಸಮರಸವೇ ಜೀವನ’ ಎಂಬ ಕವಿ ಬೇಂದ್ರೆಯವರ ಸಾಲುಗಳ ವಿಶಾಲಾರ್ಥ ಈವರೆಗೆ ವಿವರಿಸಿದುದೇ ಆಗಿದೆ. ಗಾಂಧಿಯವರಲ್ಲಿ ಈ ಪ್ರಜ್ಞೆ ಜಾಗೃತವಾಗಿರಲಿಲ್ಲ ಎಂಬುದು ಮರೆಮಾಚಲಾಗದ ಸತ್ಯ. ರಾಷ್ಟ್ರ ವಿಭಜನೆಯಲ್ಲಿ ಅವರ ಪಾತ್ರ, ದುಷ್ಟ ತುಷ್ಟೀಕರಣದ ಮಹಾ ಯತ್ನ. ಅಲೀ ಸೋದರರು, ಜಿನ್ನಾರನ್ನು ನಂಬಿ, ನಮ್ಮನ್ನು ನಂಬಿಸಿ ನಡೆದ ಮೋಸ, ಮೋಪ್ಲಾ ಚಳವಳಿಯ ಸಂದರ್ಭದಲ್ಲಿ ಅವರಾಡಿದ ಇಸ್ಲಾಮೀ ಸಮರ್ಥನೆಯ, ಅಹಿಂಸಾ ಅತಿರೇಕದ ಮಾತುಗಳು, ನೌಖಾಲಿ ಪ್ರಕರಣ- ಒಂದೇ ಎರಡೇ?

  ಸರ್. ಸಿ. ಶಂಕರನ್ ಐಯ್ಯರ್ ಬರೆದ Gandhi and anarchy- ಎಂಬ ಕಣ್ಣು ತೆರೆಸುವ ಪುಸ್ತಕ ಓದಿ. (ಮಿತ್ತಲ್ ಪಬ್ಲಿಕೇಷನ್, ನ್ಯೂ ಡೆಲ್ಲಿ) ಒಂದೆಡೆ ‘ಸ್ವಾತಂತ್ರ್ಯವೀರ’ ಬಿರುದು, ಇನ್ನೊಂದೆಡೆ ಅಸಮಗ್ರತೆಯ, ಅವ್ಯವಸ್ಥೆಯ ಹರಿಕಾರ ಎಂಬುದು ಇಲ್ಲಿ ನಿರೂಪಿತವಾಗಿದೆ. ಇದು ಗಾಂಧಿಯವರ ಮಾತು. ‘ಭಾರತಕ್ಕೆ ಮೋಕ್ಷಆಗಬೇಕಾದರೆ ಈ ಐವತ್ತು ವರ್ಷಗಳಲ್ಲಿ ಕಲಿತದ್ದನ್ನೆಲ್ಲ ಮರೆತು ಕೈಬಿಡಬೇಕಾಗಿದೆ. ಯಾವುದು? ರೈಲ್ವೆ, ಟೆಲಿಗ್ರಾಫ್, ಆಸ್ಪತ್ರೆಗಳು, ಲಾಯರುಗಳು, ವೈದ್ಯರು- ಇಂಥವೆಲ್ಲ ಹೋಗಬೇಕು’ (1909ರಲ್ಲಿ ಒಬ್ಬ ಸ್ನೇಹಿತನಿಗೆ ಬರೆದ ಪತ್ರ!) ಇಂದಿನ ಆಸ್ಪತ್ರೆಗಳ ಸ್ಥಿತಿ ಶೋಚನೀಯ ಎಂಬುದು ಬೇರೆ. ಆದರೆ ‘ಕೈಗಾರಿಕೆ, ಉದ್ದಿಮೆ, ಏನೂ ಬೇಡ’ ಎಂಬ ಗಾಂಧಿವಾದ ಇಂದು ಹಾಸ್ಯಾಸ್ಪದ. ಅಪಾಯಕಾರಿ, ಹೌದೆ? ಹಾಥರಸ್​ನಲ್ಲೂ, ಇತರ ಕಡೆಗಳಲ್ಲೂ ನಡೆಯುವ ಅತ್ಯಾಚಾರ, ಕೊಲೆ, ಯುವತಿಯರ ಪ್ರಾಣಹಾನಿ, ಇವುಗಳಿಗೆ ಹಿಂದೆ, ಗಾಂಧಿಯವರು ತೋರಿಸಿದ ಪರಿಹಾರವೇನು? ಬಲ್ಲಿರಾ? (1921) ಗಾಂಧಿ ಬರೆದದ್ದು ಹೀಗೆ- ‘ದುರ್ಬಲರ ರಕ್ಷಣೆ ಎಂಬುದು ಪುಕ್ಕಲುತನದ ವಿಚಾರ. ಹೆಣ್ಣಿಗನ ರೀತಿ ಇದು. ತಿರಸ್ಕರಣೀಯ. ಪ್ರಾಣಿಯಂತಹ ಕ್ರೂರಿ ಮನುಷ್ಯನಿಂದ ನಮ್ಮ ಸೋದರಿಯರನ್ನು ರಕ್ಷಿಸಲು ನಾವು ಆತ್ಮಾರ್ಪಣೆಗೆ ಸಿದ್ಧರಾಗಬೇಕು. ಸ್ವಯಂಪ್ರೇರಣೆಯಿಂದ ಮುಂದೆ ಬರಬೇಕು. ಪ್ರೀತಿಯೆಂಬುದರ ಬಲದಿಂದ ಮನುಷ್ಯನೊಳಗಿನ ಪ್ರಾಣಿಯನ್ನು ಗೆಲ್ಲಬೇಕು. ಆ ಶಕ್ತಿ ನಮಗೆ ಬರಲಿಲ್ಲವಾದರೆ ದೈಹಿಕ ಶಕ್ತಿಯನ್ನೆಲ್ಲ ಉಪಯೋಗಿಸಿ ಪ್ರಾಣಿತ್ವವನ್ನು ಗೆಲ್ಲಬೇಕು. ಪ್ರಾಣಿಮಟ್ಟದ ಮನುಷ್ಯನ ಹುನ್ನಾರವನ್ನು ಬಲಪ್ರಯೋಗವಿಲ್ಲದೆಯೇ ಪ್ರೀತಿಯಿಂದ ಗೆಲ್ಲಬೇಕು. ಆತ್ಮಶಕ್ತಿ ಪ್ರಾಯೋಜಕನೂ, ಸೇನೆಯ ಯೋಧನೂ, ಇಬ್ಬರೂ ಬೇರೆ ಬಗೆಗಳಲ್ಲಿ ಯೋಧರು. ಒಬ್ಬನಲ್ಲಿ ಶಸ್ತ್ರವಿದೆ, ಇನ್ನೊಬ್ಬನಲ್ಲಿ ಪ್ರೇಮವಿದೆ’. ಏನು ಹೇಳುತ್ತಿದ್ದಾರೆ ಈ ಗಾಂಧಿ? ಇಮ್ರಾನ್ ಖಾನ್​ರಿಗೆ ಹೇಳುತ್ತೀರಾ? ದುರುಳ ರಾಜಕಾರಣಿಗಳಿಗೆ ಹೇಳುತ್ತೀರಾ? ಕಾನೂನು ನಿಗ್ರಹ, ಶಾಸನ, ಬಲಪ್ರಯೋಗ ಬೇಡವೆನ್ನುತ್ತೀರಾ? ಇವನ್ನು ಶಂಕರನ್ ನಾಯರ್ ‘ವೈಲ್ಡ್’ ಎನ್ನುತ್ತಾರೆ. ‘ಅಸಭ್ಯ’ ಮೇರೆ ಮೀರಿದ ಹುಚ್ಚಾಪಟ್ಟೆ ಅಭಿಪ್ರಾಯಗಳು! ‘ಭಯೋತ್ಪಾದನೆ ವಿಶ್ವವ್ಯಾಪಿಯಾಗಿರುವ ಈ ಕಾಲಘಟ್ಟದಲ್ಲಿ ಗಾಂಧಿ ನೆನಪು ಎಷ್ಟು ಉಚಿತ, ಅವಶ್ಯ, ಪ್ರಸ್ತುತ? ಮರೆಯುವುದರಲ್ಲಿಲ್ಲವೇ ಹಿತ? ವಾಲ್ಟರ್ ಲಾಕರ್ ಬರೆದ The New Terrorism ಓದಿ. ನವರತ್ನ ರಾಜಾರಾಂ ಅವರ “profiles of deception’ (‘ಆತ್ಮವಂಚನೆಯ ವಿವಿಧ ಮುಖಗಳು’) ಎಂಬ ಗ್ರಂಥದ “Political Dominance as Religion’ ಅಧ್ಯಾಯ ಓದಿ. ‘ಮತಪ್ರಯೋಗದ ಕೌಶಲವೂ, ಯುದ್ಧಪ್ರಯೋಗದ ಶಸ್ತ್ರ ಕತ್ತಿಯೂ ಎರಡೂ ನಮಗೆ ಆಯುಧಗಳು. ನಮಗೆ ಎಂದರೆ ರ್ಚಚಿನ ಪ್ರಸಾರಕ್ಕೆ ಉಪಯುಕ್ತ ಶಸ್ತ್ರಗಳು. ಒಂದನ್ನು ಪಾದ್ರಿ ಪ್ರಯೋಗಿಸುತ್ತಾನೆ. ಇನ್ನೊಂದನ್ನು ಆಡಳಿತಾರೂಢ ದೊರೆ, (ಚುನಾಯಿತ, ಆಳುವ, ಪ್ರಧಾನಿ) ಪ್ರಯೋಗಿಸುತ್ತಾನೆ. ಎರಡನ್ನೂ ಪ್ರಯೋಗ ಕಾಲ, ರೀತಿ, ಪ್ರಯೋಜನ ನಿರ್ಧರಿಸುವವನು ‘ಪಾದ್ರಿ’- ಎಂಬ ಪೋಪ್ ಬಾನಿಫೇಸ್ (8ನೇಯವನು) ಏಳುನೂರು ವರ್ಷಗಳ ಹಿಂದೆ ಹೇಳಿದ, ಬರೆದ ಮಾತುಗಳು ಇವು! ಇಂದಿಗೂ ಚಾಲ್ತಿಯಲ್ಲಿರುವುವು!

  ಭಾರತವನ್ನು ಸೋನಿಯಾ, ರಾಜೀವರ ಮೂಲಕ ಚರ್ಚ್ ಹಿಡಿದದ್ದು ಹೀಗೆ ಅಲ್ಲವೇ? ಆಂಧ್ರದ ರಾಜಶೇಖರ ರೆಡ್ಡಿ, ಸ್ಯಾಮ್ಯುಯಲ್ ಅವರ ಸುಪುತ್ರ ಜಗನ್ಮೋಹನರ ಮೂಲಕವೋ? ತಿರುಪತಿ ದೇವಾಲಯವನ್ನು ‘ರೆವರೆಂಡ್ ಸುಬ್ಬಾರೆಡ್ಡಿ’ ಹಿಡಿದದ್ದು ಬೇರೆ ಹೇಗೆ? ಇನ್ನೂ ಗಾಂಧಿಜಪ ಮಾಡುತ್ತೀರಾ? ಗಾಂಧಿಗೆ ಕ್ರೖೆಸ್ತ, ಇಸ್ಲಾಮೀ ಹೃದಯಗಳು ಗೊತ್ತಿದ್ದವೇ? ಸಾಹೇಬ್ರೇ! ಒಬ್ಬ ಹಿರಿಯರನ್ನು ಒಮ್ಮೆ ಕೇಳಿದೆ. ‘ದೇಶಕ್ಕೆ ಗಾಂಧಿಯವರ ಕೊಡುಗೆ ಏನು?’ ಅಂತ. ಥಟ್ಟನೆ ಅವರು ಹೇಳಿದ್ದು- ‘ಎಲ್ಲರಿಗೂ ಟೋಪಿ ಹಾಕಿದ್ದು’ ಅಂತ. ಗಾಂಧಿ ಟೋಪಿ! ಕಿಂಗ್ ಲಿಯರ್ ನಾಟಕ, ಶೇಕ್ಸ್​ಪಿಯರ್ ಬರೆದುದ್ದು, ಅದರಲ್ಲಿ ದೊರೆ ಹೆಣ್ಣು ಮಕ್ಕಳಿಬ್ಬರಿಂದ ವಂಚಿತನಾದದ್ದು, ಬುದ್ಧಿಹೀನ ದೊರೆ ರಾಜ್ಯ ಅಧಿಕಾರ- ‘ಕಿರೀಟ-ಕ್ರೌನ್’ ಎಂಬುದನ್ನು ಹಿಂದೆಮುಂದೆ ವಿಚಾರಿಸದೆ ಹಂಚಿಕೊಟ್ಟಿದ್ದನ್ನು, ಅವರು ಅಧಿಕಾರ ಕಿತ್ತುಕೊಂಡು ದೊರೆಯನ್ನೇ ಓಡಿಸಿ ಭಿಕಾರಿಯಾಗಿಸಿದ್ದನ್ನು- ದೊರೆಯುತ್ತವೆ, ವಿಶೇಷ ಬಂಧು, ವಿದೂಷಕ, ‘ಫೂಲ್’ ತನ್ನ ದೊರೆಯನ್ನು ಸ್ಮಶಾನದಲ್ಲಿ ಕಂಡಾಗ ಹೇಳುವ ಕೊನೇ ಮಾತು ಹೀಗೆ: ‘ದೊರೆಯೇ! ನೀನು ಕಿರೀಟವನ್ನೇ ಕೊಟ್ಟು ಬಿಟ್ಟೆ. ಏಕೆಂದರೆ ನಿನ್ನ ಶರೀರದ ಕಿರೀಟವಾದ ತಲೆಯಲ್ಲಿ ಏನೂ ಇರಲಿಲ್ಲ’. ಕಿರೀಟದ ಕೆಳಗೆ ತಲೆ! ಇಲ್ಲಿ ಏನೂ ಇಲ್ಲವಾದರೆ ‘ಟೋಪಿ’ ಗ್ಯಾರಂಟಿ! ಮಾತು ಖಾರವಾಯ್ತು. ಅರ್ಥಹೀನ, ಅಕಾಲಿಕ ಪ್ರಶಂಸೆಗಳಿಂದ ದೇಶ ದಾರಿತಪು್ಪತ್ತದೆ. ಜನ ಸಾಯುತ್ತಾರೆ. ಬೇಸರಿಸಬೇಡಿ. ವಿನ್ಸೆಂಟ್ ಶೇನ್ ಎಂಬವ ಬರೆದ ‘ಮಹಾತ್ಮ ಗಾಂಧಿ’ ಎಂಬ ಪುಸ್ತಕವನ್ನು ಓದಿ. ಕೇಂದ್ರ ಸರ್ಕಾರದ ಪ್ರಕಟಣೆ (1990). ಇಲ್ಲಿ ಅತಿರೇಕಗಳನ್ನೆಲ್ಲ ಸೌಮ್ಯಭಾಷೆಯಲ್ಲಿ ದಾಖಲೆಗಳೊಡನೆ ಕೊಡಲಾಗಿದೆ. ಅಯ್ಯಾ! ಸಮಗ್ರ ಚಿತ್ರಣ ಬೇಕು. ಚದುರಿದ ಭಿನ್ನರೀತಿಯ ಘಟನೆಗಳ ಪ್ರಸ್ತಾಪ ನಾಶಕ.

  (ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

  ರಾಜ್ಯೋತ್ಸವ ರಸಪ್ರಶ್ನೆ - 25

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts