More

    ತುಂತುರು ಮಳೆಗೆ ಜನ ತತ್ತರ

    ಹಿರಿಯೂರು: ತಾಲೂಕಿನಲ್ಲಿ ಒಂದು ವಾರದಿಂದ ಮೊಡಗಳ ಮೆರವಣಿಗೆ, ಗಂಟೆಗೆ ನಾಲ್ಕೈದು ಬಾರಿ ಬೀಳುತ್ತಿರುವ ತುಂತುರು ಮಳೆ, ಕೃಷಿ ಕೆಲಸಕ್ಕೆ ಸಂಪೂರ್ಣ ಅಡ್ಡಿಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

    ಕಳೆದ ವರ್ಷ ವರುಣ ಕೃಪೆಯಿಂದ ಮುಂಗಾರು ಮಳೆ ಅಬ್ಬರಕ್ಕೆ ಕೆರೆ, ಕಟ್ಟೆ, ಹಳ್ಳ-ಕೊಳ್ಳಗಳು ಭರ್ತಿಯಾಗಿದ್ದವು. ಪ್ರಸಕ್ತ ವರ್ಷ ಮುಂಗಾರು ಮಳೆ ಅನ್ನದಾತರ ನಿರೀಕ್ಷೆ ಹುಸಿಗೊಳಿಸಿದೆ.

    ಮಳೆಯಾಶ್ರಿತ ಪ್ರದೇಶದಲ್ಲಿ ಶೇಂಗಾ ಪ್ರಮುಖ ಬೆಳೆಯಾಗಿದ್ದು, ಕಳೆದ ವರ್ಷ 14 ಸಾವಿರ ಹೆಕ್ಟೇರ್ ಗುರಿ ಹೊಂದಿದ್ದು, ಪ್ರಸಕ್ತ ವರ್ಷ 11 ಸಾವಿರ ಹೆಕ್ಟೇರ್‌ಗೆ ಕುಸಿದಿದೆ.

    ದಶಕಗಳ ಹಿಂದೆ 45 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯಾಗುತ್ತಿದ್ದ ಶೇಂಗಾ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ.

    ಮಳೆ ಕೊರತೆ, ಅಧಿಕ ಖರ್ಚು, ಕೂಲಿಕಾರರ ಸಮಸ್ಯೆ, ನೀರಾವರಿ ವಿಸ್ತರಣೆಯಿಂದ ಶೇಂಗಾ ಬಿತ್ತನೆಗೆ ಹಿನ್ನೆಡೆಯಾಗಿದ್ದು, ಶೇಂಗಾ ಬೆಳೆಗಾರರ ಬದುಕು ಜೂಜಾಟಕ್ಕೆ ಸಿಲುಕಿದೆ.

    ಅಡಕೆ-ಶೇಂಗಾಕ್ಕೆ ವರದಾನ: ವಾರದಿಂದ ಬೀಳುತ್ತಿರುವ ತುಂತುರು ಮಳೆ ಶೇಂಗಾ-ಅಡಕೆ ಬೆಳೆಗಾರರಿಗೆ ಸಂಜೀವಿನಿಯಾಗಿದೆ, ಅಡಕೆ ಇಳುವರಿಗೆ ಅನುಕೂಲಕರವಾಗಿದೆ.

    ದಾಳಿಂಬೆ ಬೆಳೆಗಾರರಿಗೆ ಸಂಕಷ್ಟ: ಪ್ರಸಕ್ತ ವರ್ಷ ದಾಳಿಂಬೆ ಹಣ್ಣಿಗೆ ಬಂಪರ್ ಬೆಲೆ ಬಂದಿದ್ದು, ಮೇ-ಜೂನ್ ನಲ್ಲಿ ಕಟಾವು ಮಾಡಿದ ದಾಳಿಂಬೆಗೆ ಉತ್ತಮ ಬೆಲೆ ಸಿಕ್ಕಿತ್ತು.

    ಆದರೆ, ಎಡೆಬಿಡದೆ ಸುರಿಯುತ್ತಿರುವ ತುಂತುರು ಮಳೆ, ತಂಪಾದ ವಾತಾವರಣಕ್ಕೆ ದಾಳಿಂಬೆ ಹಣ್ಣಿಗೆ ಕೊಳೆ, ಮಚ್ಚೆ ರೋಗ ತಗುಲಿದ್ದು, ಕೈಗೆ ಬಂದ ತುತ್ತು ಬಾಯಿಗೆ ಇಲ್ಲವಂತಾಗಿದೆ.

    ತಾಲೂಕಿನ ವಿವಿಧೆಡೆ ನಾಟಿ ಮಾಡಿರುವ ಟೊಮ್ಯಾಟೊ, ಹತ್ತಿ ಬೆಳೆಗೆ ತುಂತುರು ಮಳೆ ಮಾರಕವಾಗಿದೆ.

    ಗ್ರಾಮೀಣ ಭಾಗದಿಂದ ಮಣ್ಣಿನ ರಸ್ತೆಗಳು ಕೆಸರು ಗದ್ದೆಯಂತಾಗಿದ್ದು, ಮಳೆಗೆ ಕೆಲಸ ಕಾರ್ಯಗಳಿಗಾಗಿ ಓಡಾಡುವವರಿಗೆ ಸಮಸ್ಯೆಯಾಗಿದೆ.

    ಮಳೆ ಪ್ರಮಾಣ ಇಳಿಮುಖ: ತಾಲೂಕಿನಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿಲ್ಲ. ಈವರೆಗೆ 166 ಮಿಮೀ ವಾಡಿಕೆ ಮಳೆಗೆ ಬದಲಾಗಿ 90 ಮಿಮೀ ಮಾತ್ರ ಮಳೆ ಆಗಿದ್ದು. ಶೇ. 17ರಷ್ಟು ಕೊರತೆಯಾಗಿದೆ.

    ಪ್ರಸಕ್ತ ವರ್ಷ ವರುಣ ಕೃಪೆ ತೋರಿದರೆ ಮಾತ್ರ ರೈತರು ಕಳೆದ ಐದಾರು ವರ್ಷ ಅನುಭವಿಸಿದ ನಷ್ಟದಿಂದ ಸ್ವಲ್ಪ ಮಟ್ಟಿನ ಚೇತರಿಕೆ ಕಾಣಲಿದ್ದಾರೆ. ಇಲ್ಲವಾದರೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts