More

    ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಬೆಳೆಸಿ

    ಕಲಘಟಗಿ: ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ ಸಾಹಿತ್ಯ ಸಮೃದ್ಧವಾಗಿದೆ. ಇಂದಿನ ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಬೆಳೆಸಬೇಕು. ಕನ್ನಡ ಮನೆಯೂಟವಾದರೆ, ಇಂಗ್ಲಿಷ್ ಖಾನಾವಳಿ ಊಟವಿದ್ದಂತೆ. ಹಾಗಾಗಿ, ಮಕ್ಕಳಿಗೆ ಮನೆ ಊಟವನ್ನೇ ಬಡಿಸಬೇಕು ಎಂದು ಪ್ರೊ. ಎಸ್.ವಿ. ಪಟ್ಟಣಶೆಟ್ಟಿ ಹೇಳಿದರು.

    ತಾಲೂಕಿನ ಮಿಶ್ರಿಕೋಟಿ ಗ್ರಾಮದ ಕುಶಲಕರ್ವಿು, ಹುಬ್ಬಳ್ಳಿ ಸಿದ್ಧಾರೂಢ ಮಠದ ಕೈಲಾಸ ಮಂಟಪದ ನಿರ್ಮಾತೃ ದಿ. ಕಾಳಪ್ಪ ಬಡಿಗೇರ ಮಹಾವೇದಿಕೆಯಲ್ಲಿ ಆಯೋಜಿಸಿದ್ದ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

    ಸಮ್ಮೇಳನಗಳು ಭರ್ಜರಿಯಾಗಿ ನಡೆಯುತ್ತಿವೆ. ಆದರೆ, ಕನ್ನಡ ಶಾಲೆಗಳು ವಿಲೀನಗೊಳ್ಳುತ್ತಿರುವುದು ಖೇದಕರ ಬೆಳವಣಿಗೆ ಎಂದರು.

    ಸಾಹಿತಿ ಡಾ. ಬಸು ಬೇವಿನಗಿಡದ ಮಾತನಾಡಿ, ಕನ್ನಡಿಗರು ಹೃದಯವಂತರು, ವಿಚಾರವಂತರು, ಚತುರರು ಹೌದು. ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸಬೇಕು ಎಂದರು.

    ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಎಂ. ನಿಂಬಣ್ಣವರ ಮಾತನಾಡಿ, ನ್ಯಾಯಾಲಯಗಳಲ್ಲಿ ಕನ್ನಡದಲ್ಲೇ ತೀರ್ಪು ಬರೆಯಬೇಕು. ಸರೋಜಿನಿ ಮಹಿಷಿ ವರದಿ ಜಾರಿ ಮಾಡಬೇಕು ಎಂದರು.

    ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಮ್ಮೇಳಾನಧ್ಯಕ್ಷ ವೈ.ಜಿ. ಭಗವತಿ ದಂಪತಿ ಮೆರವಣಿಗೆ ನಡೆಯಿತು. ಮೆರವಣಿಗೆಗೆ ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಚಾಲನೆ ನೀಡಿದರು. ಜಗ್ಗಲಗಿ, ಕುಂಭಮೇಳ, ಸ್ತಬ್ಧಚಿತ್ರ, ಡೊಳ್ಳಿನ ಮೇಳ, ಕೋಲಾಟ, ಮಕ್ಕಳ ವೇಷಭೂಷಣ, ಗೊಂಬೆ ಮೇಳ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಗೆ ಕಳೆ ತಂದವು.

    ಕಸಾಪ ಜಿಲ್ಲಾ ಅಧ್ಯಕ್ಷ ಲಿಂಗರಾಜ ಅಂಗಡಿ ನಾಡ ಧ್ವಜಾರೋಹಣ ನೆರವೇರಿಸಿದರು. ಭಾರತ ಸೇವಾದಳ ಸ್ಕೌಟ್ಸ್ ಮತ್ತು ಗೈಡ್ಸ್, ಶಿಕ್ಷಕ ಹಾಗೂ ವಿದ್ಯಾರ್ಥಿಗಳಿಂದ ಧ್ವಜ ವಂದನೆ ನಡೆಯಿತು. ವಿದ್ಯಾರ್ಥಿಗಳು ನಾಡಗೀತೆ ಹಾಗೂ ಎಂ.ಆರ್. ತೋಟಗಂಟಿ ಸಂಗಡಿಗರಿಂದ ರೈತ ಗೀತೆ ಹಾಡಿದರು. ಸುನೀಲ ಕಮ್ಮಾರ ಅವರಿಂದ ನಾಣ್ಯ ಪ್ರದರ್ಶನ ಜರುಗಿತು.

    ಹನ್ನೆರಡು ಮಠದ ರೇವಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಿಇಒ ಉಮಾದೇವಿ ಬಸಾಪುರ, ಕಸಾಪ ತಾಲೂಕು ಅಧ್ಯಕ್ಷ ಈಶ್ವರ ಜವಳಿ, ಅಶೋಕ ಅರ್ಕಸಾಲಿ, ಕೆ.ಎಸ್. ಕೌಜಲಗಿ, ಗ್ರಾಪಂ ಅಧ್ಯಕ್ಷೆ ಮಾಂತವ್ವ ಸಂಶಿ, ಗೀತಾ ಮರಲಿಂಗನ್ನವರ, ಸಿ.ಎಫ್. ಪಾಟೀಲ, ಐ.ಸಿ. ಗೋಕುಲ, ಬಸವರಾಜ ಕರಡಿಕೊಪ್ಪ, ಪ್ರತಿಭಾ ಪುರದಗೌಡರ, ಅನಿತಾ ಹತ್ತಿ, ಎಂ.ಆರ್. ತೋಟಗಂಟಿ, ಶಿವಾನಂದ ಚಿಕ್ಕನರ್ತಿ, ಬಿ.ಜಿ. ಬಿದರಿ, ಎಸ್.ವಿ. ತಡಸಮಠ, ಸಿ.ಬಿ. ಹೊನ್ನಳ್ಳಿ, ವೀರಣ್ಣ ಕುಬಸದ, ರಮೇಶ ಸೋಲಾರಗೊಪ್ಪ, ಸುರೇಶ ಕಳಸಣ್ಣವರ, ಸಾತಪ್ಪ ಕುಂಕೂರ, ಅಣ್ಣಪ್ಪ ಓಲೇಕಾರ, ಸಚಿನ ಪವಾರ, ಶಂಕರಗೌಡ ಬಾವಿಕಟ್ಟಿ, ಪರಮಾನಂದ ಒಡೆಯರ, ಮಲ್ಲಯ್ಯ ಗುಡಿಮನಿ, ರಂಗನಾಥ ವಾಲ್ಮೀಕಿ, ಬಸವರಾಜ ದೊಡ್ಡಮನಿ, ಸೋಮಲಿಂಗ ಒಡೆಯರ, ಎಚ್.ಎನ್. ಸುಣಗದ, ಆರ್.ಎಂ. ಮಾರೆಮ್ಮಗೋಳ, ಡಾ. ಮಹೇಶ ತಿಪ್ಪಣ್ಣವರ ಇತರರಿದ್ದರು.

    ದೊಡ್ಡಾಟ ಕಲೆಯನ್ನು ಮುಂದಿನ ತಲೆಮಾರಿಗೆ ತಲುಪಿಸಬೇಕಿದೆ. ತಾಲೂಕಿನಲ್ಲಿ ಅನೇಕ ಜನಪದ ಕಲಾವಿದರು ಇದ್ದಾರೆ. ಅವರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು. ಪಟ್ಟಣದಲ್ಲಿ ಸಾಂಸ್ಕೃತಿಕ ಭವನ ನಿರ್ವಣವಾಗಬೇಕು. ಇದರಿಂದ ನಿರಂತರ ಸಾಹಿತ್ಯಿಕ ಚಟುವಟಿಕೆಗೆ ನೆರವಾಗುತ್ತದೆ. ಅಪ್ಪ-ಅವ್ವ ಎನ್ನುವ ಜಾಗದಲ್ಲಿ ಡ್ಯಾಡಿ-ಮಮ್ಮಿ ಸಂಸ್ಕೃತಿ ಬೆಳೆಯುತ್ತಿದೆ. ಅಚ್ಚ ಕನ್ನಡ ಹೋಗಿ ಮಿಶ್ರ ಕನ್ನಡವಾಗುವ ಸಾಧ್ಯತೆಯಿದೆ. ಕನ್ನಡದ ಅಸ್ಮಿತೆ ಕಾಪಾಡುವುದು ನಮ್ಮೆಲ್ಲರ ಹೊಣೆ.

    | ವೈ.ಜಿ. ಭಗವತಿ ಸಮ್ಮೇಳನಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts