More

    ಸೂಪರ್‌ಕಿಂಗ್ಸ್-ರಾಯಲ್ಸ್ ನಡುವೆ ಗೆದ್ದವರಿಗಷ್ಟೇ ಉಳಿಗಾಲ

    ಅಬುಧಾಬಿ: ಸತತ ಸೋಲುಗಳಿಂದಾಗಿ ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿರುವ ಮೂರು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಐಪಿಎಲ್-13ರಲ್ಲಿ ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಎದುರಾಗಲಿವೆ. ಶೇಖ್ ಜಯೆದ್ ಸ್ಟೇಡಿಯಂನಲ್ಲಿ ನಡೆಯಲಿರುವ ಕದನ ಉಭಯ ತಂಡಗಳ ಪಾಲಿಗೆ ಮಹತ್ವದ್ದಾಗಿದೆ. ಕಳೆದ ಮುಖಾಮುಖಿಯಲ್ಲಿ ಸೋಲು ಕಂಡಿರುವ ಸಿಎಸ್‌ಕೆ ಹಾಗೂ ರಾಯಲ್ಸ್ ತಂಡಗಳು ತಲಾ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೆಳ ಭಾಗದಲ್ಲಿವೆ. ಎರಡೂ ತಂಡಗಳು ಇನ್ನುಳಿದ ತಲಾ ಐದೂ ಪಂದ್ಯಗಳಲ್ಲಿ ಗೆಲ್ಲಲೇಬೇಕಾಗಿವೆ. ಹೀಗಾಗಿ ಈ ಪಂದ್ಯದಲ್ಲಿ ಸೋತ ತಂಡ ನಿರ್ಗಮನ ಕಾಣಲಿದೆ. ಟೂರ್ನಿಯಲ್ಲಿ ಉಭಯ ತಂಡಗಳ ಮೊದಲ ಮುಖಾಮುಖಿಯಲ್ಲಿ ರಾಯಲ್ಸ್ ತಂಡ 16 ರನ್‌ಗಳಿಂದ ಜಯ ದಾಖಲಿಸಿತ್ತು.

    * ಸಿಎಸ್‌ಕೆಗೆ ಗಾಯದ ಬರೆ
    ಡೆಲ್ಲಿ ಕ್ಯಾಪಿಟಲ್ಸ್ ಎದುರು ಸ್ಪರ್ಧಾತ್ಮಕ ಮೊತ್ತ ರಕ್ಷಿಸಿಕೊಳ್ಳುವ ಅವಕಾಶವಿದ್ದರೂ ಕಡೇ ಓವರ್‌ನಲ್ಲಿ ಎಡವಿದ ಸಿಎಸ್‌ಕೆ ತಂಡಕ್ಕೆ ಗಾಯದ ಸಮಸ್ಯೆ ಎದುರಾಗಿದೆ. ಗಾಯದ ಸಮಸ್ಯೆಗೆ ತುತ್ತಾಗಿರುವ ಡ್ವೇನ್ ಬ್ರಾವೊ ಕೆಲದಿನಗಳ ಕಾಲ ತಂಡಕ್ಕೆ ಅಲಭ್ಯರಾಗಲಿದ್ದಾರೆ. ಡೆಲ್ಲಿ ಎದುರು ಕಳಪೆ ಫೀಲ್ಡಿಂಗ್ ನಿರ್ವಹಣೆಯೇ ಚೆನ್ನೈ ತಂಡದ ಸೋಲಿಗೆ ಪ್ರಮುಖ ಕಾರಣ. ಶತಕ ಸಾಧಕ ಧವನ್ ವೈಯಕ್ತಿಕ ಮೊತ್ತ 25 ಹಾಗೂ 79 ರನ್‌ಗಳಿಸಿದ್ದ ವೇಳೆ ಕ್ಯಾಚ್ ಬಿಟ್ಟಿದ್ದ ಫೀಲ್ಡರ್‌ಗಳು, ಜತೆಗೆ ರನೌಟ್ ಅವಕಾಶ ಕೈಚೆಲ್ಲಿದ್ದರು. ಹಿಂದಿನ ಪಂದ್ಯಗಳಲ್ಲಿ ಮಾಡಿರುವ ತಪ್ಪುಗಳನ್ನು ತಿದ್ದಿಕೊಂಡು ಸಂಘಟಿತ ಹೋರಾಟ ತಂಡದಿಂದ ಬರಬೇಕಿದೆ.

    * ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿ ರಾಯಲ್ಸ್
    ಬ್ಯಾಟಿಂಗ್ ಸಂಯೋಜನೆಯೇ ರಾಯಲ್ಸ್ ತಂಡಕ್ಕೆ ದೊಡ್ಡ ಸವಾಲಾಗಿದೆ. ಕಳೆದ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿದ ರಾಬಿನ್ ಉತ್ತಪ್ಪ, ಸಿಕ್ಕ ಮೊದಲ ಅವಕಾಶದಲ್ಲಿ ಕೊಂಚ ಯಶಕಂಡಿದ್ದರು. ಮಧ್ಯಮ ಕ್ರಮಾಂಕದಲ್ಲಿ ರನ್‌ಗಳಿಸಲು ಪರದಾಡುತ್ತಿದ್ದ ಉತ್ತಪ್ಪ, ಆರಂಭಿಕನಾಗಿ ಕೆಲಕಾಲ ಸ್ಫೋಟಕ ಬ್ಯಾಟಿಂಗ್ ಮಾಡಿದ್ದರು. ಬೆನ್ ಸ್ಟೋಕ್ಸ್ ಆರಂಭಿಕ ಹಂತದಲ್ಲಿ ರನ್‌ಗಳಿಸುತ್ತಿಲ್ಲ. ಇದು ತಂಡಕ್ಕೆ ಹಿನ್ನಡೆಯಾಗಿದೆ. ಸ್ಟೀವನ್ ಸ್ಮಿತ್ ಲಯ ಕಂಡುಕೊಂಡಿದ್ದರೂ ಜೋಶ್ ಬಟ್ಲರ್ ಅಸ್ಥಿರ ನಿರ್ವಹಣೆ ತೋರುತ್ತಿದ್ದಾರೆ. ಬೌಲಿಂಗ್‌ನಲ್ಲಿ ಜೈದೇವ್ ಉನಾದ್ಕತ್ ದುಬಾರಿಯಾದ ಪರಿಣಾಮವೇ ಆರ್‌ಸಿಬಿ ಎದುರು ಗೆಲುವು ಕಡೇ ಕ್ಷಣದಲ್ಲಿ ತಪ್ಪಿತ್ತು. ಆರ್ಚರ್ ಸಾರಥ್ಯದ ಬೌಲಿಂಗ್ ಪಡೆಗೂ ಸಿಎಸ್‌ಕೆ ಕಟ್ಟಿಹಾಕುವುದೇ ದೊಡ್ಡ ಸವಾಲಾಗಿದೆ.

    ಟೀಮ್ ನ್ಯೂಸ್:

    ಚೆನ್ನೈ ಸೂಪರ್ ಕಿಂಗ್ಸ್: ಟೂರ್ನಿಯಲ್ಲಿ ಇದುವರೆಗೆ ಬೆಂಚು ಕಾಯಿಸಿರುವ ಸ್ಪಿನ್ನರ್ ಇಮ್ರಾನ್ ತಾಹಿರ್ ಗಾಯಾಳು ಡ್ವೇನ್ ಬ್ರಾವೊ ಬದಲಿಗೆ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ. ಹೆಚ್ಚುವರಿ ಸ್ಪಿನ್ನರ್‌ಗೆ ಅವಕಾಶ ನೀಡಿದರೆ ಕೇದಾರ್ ಜಾಧವ್ ಬದಲಿಗೆ ಪೀಯುಷ್ ಚಾವ್ಲಾ ವಾಪಸಾಗಬಹುದು.
    ಕಳೆದ ಪಂದ್ಯ: ಡೆಲ್ಲಿ ಕ್ಯಾಪಿಟಲ್ಸ್ ಎದುರು 5 ವಿಕೆಟ್ ಸೋಲು.

    ಸಂಭಾವ್ಯ ತಂಡ: ಸ್ಯಾಮ್ ಕರ‌್ರನ್, ಪ್ಲೆಸಿಸ್, ಶೇನ್ ವ್ಯಾಟ್ಸನ್, ಅಂಬಟಿ ರಾಯುಡು, ಎಂಎಸ್ ಧೋನಿ (ನಾಯಕ, ವಿಕೀ), ರವೀಂದ್ರ ಜಡೇಜಾ, ಕೇದಾರ್ ಜಾಧವ್/ಪೀಯುಷ್ ಚಾವ್ಲಾ, ಡ್ವೇನ್ ಬ್ರಾವೊ/ಇಮ್ರಾನ್ ತಾಹಿರ್, ದೀಪಕ್ ಚಹರ್, ಶಾರ್ದೂಲ್ ಠಾಕೂರ್, ಕರ್ಣ್ ಶರ್ಮ.

    ————-
    ರಾಜಸ್ಥಾನ ರಾಯಲ್ಸ್: ಬಹುತೇಕ ಹಿಂದಿನ ಪಂದ್ಯದಲ್ಲಿ ಆಡಿದ ತಂಡವೇ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಆರ್‌ಸಿಬಿ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್‌ರಿಂದ ದಂಡನೆಗೆ ಒಳಗಾಗಿದ್ದ ಜೈದೇವ್ ಉನಾದ್ಕತ್ ಬದಲಿಗೆ ವರುಣ್ ಆರನ್ ಆಡಬಹುದು.
    ಕಳೆದ ಪಂದ್ಯ: ಆರ್‌ಸಿಬಿ ಎದುರು 7 ವಿಕೆಟ್ ಸೋಲು.

    ಸಂಭಾವ್ಯ ತಂಡ: ರಾಬಿನ್ ಉತ್ತಪ್ಪ, ಬೆನ್ ಸ್ಟೋಕ್ಸ್, ಸಂಜು ಸ್ಯಾಮ್ಸನ್ (ವಿಕೀ), ಸ್ಟೀವನ್ ಸ್ಮಿತ್ (ನಾಯಕ), ಜೋಶ್ ಬಟ್ಲರ್, ರಾಹುಲ್ ತೆವಾಟಿಯಾ, ಜ್ರೋಾ ಆರ್ಚರ್, ರಿಯಾನ್ ಪರಾಗ್, ಶ್ರೇಯಸ್ ಗೋಪಾಲ್, ಜೈದೇವ್ ಉನಾದ್ಕತ್/ವರುಣ್ ಆರನ್, ಕಾರ್ತಿಕ್ ತ್ಯಾಗಿ.

    ಪಂದ್ಯ ಆರಂಭ: ರಾತ್ರಿ 7.30ಕ್ಕೆ
    ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
    ಮುಖಾಮುಖಿ: 22, ಸಿಎಸ್‌ಕೆ: 14, ರಾಜಸ್ಥಾನ ರಾಯಲ್ಸ್: 8

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts